ಕನ್ನಡದ ಹೆಸರಾಂತ ಯುವ ಸಂಗೀತ ನಿರ್ದೇಶಕ, ಗಾಯಕ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ವಾಸುಕಿ ವೈಭವ್(Vasuki Vaibhav) ಕುರಿತು ತೆಲುಗು ಚಿತ್ರೋದ್ಯಮವೇ ಮೆಚ್ಚಿಕೊಂಡಿದೆ. ಕನ್ನಡದ ನಂತರ ಇದೀಗ ವಾಸುಕಿ ತೆಲುಗು(Telugu) ಸಿನಿಮಾಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. ವಾಸುಕಿ ಸಂಗೀತ ಸಂಯೋಜನೆ ಮಾಡಿರುವ ರೋಮಾಂಚಕಂ ಸಿನಿಮಾ ಬಿಡುಗಡೆ ಆಗಿದ್ದು, ವಾಸುಕಿ ಸಂಗೀತದ ಬಗ್ಗೆ ಸ್ಪಿರಿಟ್ ಸಿನಿಮಾದ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ, ನಟ ವಿಜಯ್ ದೇವರಕೊಂಡ(Vijay Deverakonda) ಹಾಡಿ ಹೊಗಳಿದ್ದಾರೆ.
ರೋಮಾಂಚಕಂ ಸಿನಿಮಾದ ಪ್ರಿರಿಲೀಸ್ ಇವೆಂಟ್ ವೇಳೆ ನಟ ವಿಜಯ್ ದೇವರಕೊಂಡ, ಕನ್ನಡದ ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರನ್ನು ಹಾಡಿಹೊಗಳಿದ್ದಾರೆ. ತಮ್ಮ ಮನೆಯಲ್ಲಿ ವಾಸುಕಿ ಅವರ ಹಾಡುಗಳನ್ನು ಕೇಳುತ್ತಿರುವ ಕುರಿತು ಅವರು ಮಾತಾನಾಡಿದ್ದಾರೆ. ವಾಸುಕಿ ಅವರು ಹಾಡಿದ ನೆಚ್ಚಿನ ಗೀತೆಯನ್ನೂ ವಿಜಯ್ ದೇವರಕೊಂಡ ಬಹಿರಂಗ ಪಡಿಸಿದ್ದಾರೆ.

ಇದೇ ವೇದಿಕೆಯಲ್ಲೇ ಮಾತನಾಡಿದ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ, ತಮ್ಮ ಸ್ಪಿರಿಟ್ ಸಿನಿಮಾದ ಒಂದು ಹಾಡಿಗೆ ವಾಸುಕಿ ದನಿಯಾಗಿರುವ ಕುರಿತು ಮಾತನಾಡಿದ್ದಾರೆ. ರೋಮಾಚಂಕಂ ಸಿನಿಮಾದ ಹಾಡು ಕೇಳಿದ ನಂತರ, ಸ್ಪಿರಿಟ್ ಗಾಗಿ ಹಾಡುವಂತೆ ವಾಸುಕಿಯನ್ನು ಸಂದೀಪ ಕೇಳಿದ್ದರಂತೆ. ಅವರ ಆಸೆಯಂತೆ ವಾಸುಕಿ ಹಾಡಿದ್ದಾರೆ.
ರೋಮಾಂಚಕಂ ಸಿನಿಮಾವನ್ನು ಸಂದೀಪ್ ಅವರ ಸಹೋದರ ನಿರ್ಮಾಣ ಮಾಡಿದ್ದರೆ, ಸಂದೀಪ್ ಅವರು ಪ್ರೆಸೆಂಟ್ ಮಾಡಿದ್ದಾರೆ. ಸದ್ಯ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ವಾಸುಕಿಗೆ ತೆಲುಗು ಚಿತ್ರೋದ್ಯಮದಲ್ಲಿ ಮತ್ತಷ್ಟು ಅವಕಾಶಗಳು ಬರುವುದರಲ್ಲಿ ಎರಡು ಮಾತಿಲ್ಲ.
