ಚಿಕ್ಕಬಳ್ಳಾಪುರ: ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು (Student) ಆತ್ಮಹತ್ಯೆಗೆ(Suicide) ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ(Chikkaballapura) ನಗರದ ಪ್ರಶಾಂತನಗರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು 17 ವರ್ಷದ ಶ್ರೇಯಾ ಎಂದು ಗುರುತಿಸಲಾಗಿದೆ. ಶ್ರೇಯಾ ಮೂಡಬಿದ್ರೆಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಅನಾರೋಗ್ಯದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಚಿಕ್ಕಬಳ್ಳಾಪುರದಲ್ಲಿರುವ ಮನೆಗೆ ಬಂದಿದ್ದಳು.
ಮನೆಯಲ್ಲಿದ್ದವರು ಹೊರಗಡೆ ತೆರಳಿದ್ದ ವೇಳೆ ಶ್ರೇಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಮಗಳ ಸಾವಿನ ಸುದ್ದಿ ತಿಳಿದು ತಾಯಿ ನಾಗಲಕ್ಷ್ಮಿ ಆಘಾತಕ್ಕೊಳಗಾಗಿದ್ದಾರೆ. ನಾಗಲಕ್ಷ್ಮಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಸಹ ಪಿಡಿಒ ಆಗಿದ್ದು ಅನಾರೋಗ್ಯಕ್ಕೆ ಓಳಗಾಗಿದ್ದಾರೆ.
ಈಗ ಮಗಳ ಸಾವಿನ ಸುದ್ದಿ ತಂದೆ ತಾಯಿಗೆ ಬರ ಸಿಡಿಲು ಬಡಿದಂತಾಗಿದೆ. ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
