ವಿಜಯಪುರ: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತೆ, ಮಗ ಮಾಡಿದ ತಪ್ಪಿಗೆ ತಂದೆ ಮತ್ತು ತಮ್ಮನಿಗೆ ಮರಕ್ಕೆ ಕಟ್ಟಿ ಹೊಡೆದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಸಿಂಧಗಿ ತಾಲೂಕಿನ ಹಾಳಗುಂಡಕನಾಳ ಗ್ರಾಮದ ದಲಿತ ಯುವಕ ನಿಂಗಪ್ಪ ಹರಿಜನ ಎಂಬಾತ ಅಲ್ಪಸಂಖ್ಯಾತ ಯುವತಿ ಮಾಶಾಬಿ ಎಂಬಾಕೆಯೊಂದಿಗೆ ಪರಾರಿಯಾಗಿದ್ದಾನೆ. ಆದ್ರೆ ಇದಕ್ಕೆ ನಿಂಗಪ್ಪ ತಂದೆಯೇ ಕಾರಣ ಅಂತಾ ಯುವತಿ ಮಾಶಾಬಿ ತಂದೆ ಮಾಬುಸಾಬ, ಅಣ್ಣ ಅಲ್ಲಾಭಕ್ಷ್ ಸೇರಿದಂತೆ ಏಳು ಜನರು ನಿಂಗಪ್ಪನ ತಂದೆ ಮರೇಪ್ಪ ಹರಿಜನ ಅವರನ್ನ ಗ್ರಾಮದ ಆಲದ ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ತಂದೆಯನ್ನು ಬಿಡಿಸಿಕೊಳ್ಳಲು ಬಂದ ಮರೇಪ್ಪ ಅವರ ಎರಡನೇ ಮಗ ರಮೇಶನನ್ನೂ ಕೂಡ ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ
ಈ ಅಮಾನವೀಯ ಘಟನೆ ಊರಿನ ನಡು ಬೀದಿಯಲ್ಲೇ ನಡೆಯುತ್ತಿದ್ದರೂ ಯಾರೊಬ್ಬರೂ ಬಿಡಿಸದೆ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಹಲ್ಲೆಯಿಂದಾಗಿ ಮರೇಪ್ಪ ತಲೆಗೆ ಬಲವಾದ ಏಟು ಬಿದ್ದಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
https://youtu.be/uxO0nS6_Xaw








