ಗ್ಲಾಸ್ಗೊ: ಭಾರತದ ತೇಜಸ್ವಿನ್ ಶಂಕರ್ (Tejaswin Shankar) ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಹೊಸ ಇತಿಹಾಸ ಬರೆದಿದ್ದಾರೆ. ಕ್ರೀಡಾಕೂಟದ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎರಡು ದಿನ ನಡೆದ 10 ಕಠಿಣ ಸ್ಪರ್ಧೆಗಳ ಡೆಕಾಥ್ಲಾನ್ (Decathlon) ವಿಭಾಗದಲ್ಲಿ ತೇಜಸ್ವಿನ್ ಒಟ್ಟು 7,976 ಅಂಕಗಳನ್ನು ಕಲೆಹಾಕುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.
ಮೊಣಕಾಲಿನ ಗಾಯದ ಸಮಸ್ಯೆಯಿಂದ ಪ್ರಸಕ್ತ ಟೂರ್ನಿಯ ಹೈಜಂಪ್ ಸ್ಪರ್ಧೆಯಿಂದ ಹೊರಗುಳಿದಿದ್ದರು. ಆದಾಗ್ಯೂ ಗಾಯದ ಸಮಸ್ಯೆ ಮೆಟ್ಟಿ ನಿಂತ ತೇಜಸ್ವಿನ್ ಕಂಚಿನ ಪದಕ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದ ಹೈಜಂಪ್ ಸ್ಪರ್ಧೆಯಲ್ಲಿ 27 ವರ್ಷದ ತೇಜಸ್ಟಿನ್ ಕಂಚಿನ ಪದಕ ಗೆದ್ದಿದ್ದರು. ಜೊತೆಗೆ, 8057 ಅಂಕಗಳೊಂದಿಗೆ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.
ವಿಕ್ಟರ್‌ಗೆ ಚಿನ್ನ, ವಾರ್ನ‌್ರಗೆ ಬೆಳ್ಳಿ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಗ್ರೆನಾಡಾದ ಲಿಂಡನ್ ವಿಕ್ಟರ್ 8096 ಅಂಕಗಳೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇತ್ತ, ಕೆನಡಾದ ಡೆಮಿಯನ್ ವಾರ್ನರ್ 8,036 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
