ಭಾರತದಲ್ಲಿ ಪ್ರತಿ ತಿಂಗಳ 1ನೇ ತಾರೀಖಿನಂದು ಒಂದಿಲ್ಲೊಂದು ಬದಲಾವಣೆ ಆಗುವುದು ಸಾಮಾನ್ಯ. ದೈನಂದಿನ ಗೃಹಬಳಕೆಯ ವಸ್ತುಗಳಿಂದ ಹಿಡಿದು, ಬ್ಯಾಂಕಿಂಗ್ ವ್ಯವಹಾರಗಳು ಹಾಗೂ ಹಣಕಾಸಿನ ನಿಯಮಗಳವರೆಗೆ ಹಲವು ಪ್ರಮುಖ ನಿರ್ಧಾರಗಳು ಹೊಸ ತಿಂಗಳ ಮೊದಲ ದಿನದಿಂದಲೇ ಜಾರಿಗೆ ಬರುತ್ತವೆ. ಅದರಂತೆ ಈ ತಿಂಗಳ ಆರಂಭದಿಂದಲೂ ಸಹ 5 ಪ್ರಮುಖ ಬದಲಾವಣೆಗಳು ದೇಶಾದ್ಯಂತ ಅನ್ವಯವಾಗಲಿದ್ದು, ಇವು ನಿಮ್ಮ ಮಾಸಿಕ ಬಜೆಟ್ ಮತ್ತು ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಹಾಗಾದರೆ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಿರುವ ಆ 5 ಪ್ರಮುಖ ಬದಲಾವಣೆಗಳು ಯಾವುವು? ಇಲ್ಲಿದೆ ಸಂಪೂರ್ಣ ವಿವರ.
ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ದೇಶದ ಆರ್ಥಿಕ ಮತ್ತು ಸೇವಾ ವಲಯಗಳಲ್ಲಿ ಹಲವು ಪ್ರಮುಖ ಬದಲಾವಣೆಗಳು ಎದುರಾಗುವುದು ಸಹಜ. ಈ ಬಾರಿ ಅಂದರೆ ಆ.1ರಂದು ಮುಖ್ಯವಾಗಿ ಬ್ಯಾಂಕಿಂಗ್, ಭಾರತೀಯ ರೈಲ್ವೆ, ಆದಾಯ ತೆರಿಗೆ ಸಲ್ಲಿಕೆ, ಇಂಧನ ದರ ಹಾಗೂ ಡಿಜಿಟಲ್ ಕೆವೈಸಿ (KYC) ವಲಯಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಪ್ರತಿಯೊಬ್ಬ ಸಾಧಾರಣ ಪ್ರಜೆಯ ದಿನನಿತ್ಯದ ಬಜೆಟ್ ಹಾಗೂ ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರುತ್ತವೆ.
ಆ.1ರಿಂದ ಏನ್ನೆಲ್ಲ ಬದಲು:
- ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ಟೋಕನ್ ವ್ಯವಸ್ಥೆ
- ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಪರಿಷ್ಕರಣೆ
- ಆದಾಯ ತೆರಿಗೆ ಪಾವತಿದಾರರಿಗೆ ಹೊಸ ನಿಯಮ
- ಆಧಾರ್ ಲಿಂಕ್ಡ್ ಗ್ರಾಹಕ ವ್ಯವಸ್ಥೆ
- ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕಗಳ ಹೆಚ್ಚಳ

ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ಟೋಕನ್ ವ್ಯವಸ್ಥೆ:
ರೈಲ್ವೆ ನಿಲ್ದಾಣಗಳ ಕೌಂಟರ್‌ಗಳಲ್ಲಿ ತತ್ಕಾಲ್ ಟಿಕೆಟ್‌ಗಾಗಿ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಜಂಜಾಟಕ್ಕೆ ತೆರೆಬೀಳಲಿದೆ. ಇನ್ಮುಂದೆ ಕೌಂಟರ್‌ನಲ್ಲಿ ಟಿಕೆಟ್ ಪಡೆಯಲು ಹೊಸ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ಕೌಂಟರ್‌ಗಳ ಬಳಿ ಉಂಟಾಗುವ ನೂಕುನುಗ್ಗಲನ್ನು ನಿಯಂತ್ರಿಸಲು, ಏಜೆಂಟ್‌ಗಳ ಹಾವಳಿ ತಪ್ಪಿಸಿ ಸಾಮಾನ್ಯ ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್ ಸಿಗುವಂತೆ ಮಾಡಲು ಮತ್ತು ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ. ಇದರ ಮೂಲಕ ಕೌಂಟರ್ ತೆರೆಯುವ ಮುನ್ನವೇ ಕಾಯುವ ಪ್ರಯಾಣಿಕರಿಗೆ ಸರತಿ ಸಾಲಿನ ಆಧಾರದ ಮೇಲೆ ಡಿಜಿಟಲ್ ಅಥವಾ ಪೇಪರ್ ಟೋಕನ್‌ಗಳನ್ನು ನೀಡಲಾಗುತ್ತದೆ. ಇದನ್ನು ಪಡೆದರೆ ಪ್ರಯಾಣಿಕರು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಪ್ರತಿಯೊಬ್ಬರಿಗೂ ನಿರ್ದಿಷ್ಟ ಸೀರಿಯಲ್ ನಂಬರ್ (ಟೋಕನ್ ಸಂಖ್ಯೆ) ಸಿಗುತ್ತದೆ.
ಟೋಕನ್ ನೀಡುವಾಗಲೇ ಪ್ರಯಾಣಿಕರ ಮೂಲ ಗುರುತಿನ ಚೀಟಿ ಮತ್ತು ಬುಕ್ಕಿಂಗ್ ಫಾರ್ಮ್‌ನಲ್ಲಿರುವ ವಿವರಗಳನ್ನು ಸಿಬ್ಬಂದಿ ಪರಿಶೀಲಿಸುತ್ತಾರೆ. ಇದರಿಂದ ಒಬ್ಬರೇ ವ್ಯಕ್ತಿ ಹಲವು ಟೋಕನ್ ಪಡೆಯುವುದು ಅಥವಾ ಏಜೆಂಟ್‌ಗಳು ಸೀಟು ಕಾಯ್ದಿರಿಸುವುದು ತಪ್ಪುತ್ತದೆ. ತತ್ಕಾಲ್ ಬುಕ್ಕಿಂಗ್ ಸಮಯ ಆರಂಭವಾದ ತಕ್ಷಣ ಕೌಂಟರ್‌ನಲ್ಲಿ ಟೋಕನ್ ಸಂಖ್ಯೆಯ ಆಧಾರದ ಮೇಲೆ ಪ್ರಯಾಣಿಕರನ್ನು ಕರೆಯಲಾಗುತ್ತದೆ. ನಿಮ್ಮ ಸಂಖ್ಯೆ ಬಂದಾಗ ನೇರವಾಗಿ ಕೌಂಟರ್‌ಗೆ ಹೋಗಿ ಟಿಕೆಟ್ ಬುಕ್ ಮಾಡಬಹುದು.
AC ಕ್ಲಾಸ್ ತತ್ಕಾಲ್: ಬೆಳಿಗ್ಗೆ 8:30 ರಿಂದ 9:00ರವರೆಗೆ ಟೋಕನ್ ವಿತರಿಸಲಾಗುತ್ತದೆ.
Non-AC ಕ್ಲಾಸ್ ತತ್ಕಾಲ್: ಬೆಳಿಗ್ಗೆ 9:00 ರಿಂದ 9:30ರವರೆಗೆ ಟೋಕನ್ ವಿತರಿಸಲಾಗುತ್ತದೆ.

ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಪರಿಷ್ಕರಣೆ:
ಪ್ರತಿ ತಿಂಗಳ ಮೊದಲ ದಿನದಂತೆ ಆಗಸ್ಟ್ 1 ರಂದು ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಲಿವೆ. ಗೃಹಬಳಕೆಯ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ದರದಲ್ಲಿ ಏರಿಳಿತವಾಗುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ಹಾಗೂ ವಿನಿಮಯ ದರಗಳಲ್ಲಿ ಉಂಟಾಗುವ ಬದಲಾವಣೆಗಳಿಗೆ ಅನುಗುಣವಾಗಿ ದೇಶೀಯ ತೈಲ ಕಂಪನಿಗಳು ಪ್ರತಿ ತಿಂಗಳು ಬೆಲೆ ಪರಿಷ್ಕರಣೆ ಮಾಡುತ್ತವೆ.
ಕಳೆದ ಕೆಲವು ತಿಂಗಳುಗಳಿಂದ ಎಲ್‌ಪಿಜಿ ದರಗಳಲ್ಲಿ ಸತತ ಏರಿಕೆ ಕಂಡುಬರುತ್ತಿದೆ. ಮಾರ್ಚ್ ತಿಂಗಳಲ್ಲಿ ಎಲ್‌ಪಿಜಿ ಬೆಲೆಯನ್ನು ಬರೋಬ್ಬರಿ 60 ರೂ.ವರೆಗೆ ಹೆಚ್ಚಿಸಲಾಗಿತ್ತು. ಇದಾದ ಬಳಿಕ ಜೂನ್ ತಿಂಗಳಿನಲ್ಲೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ದರವನ್ನು ಮತ್ತೆ ಏರಿಕೆ ಮಾಡಲಾಗಿತ್ತು. ಈ ಸಾಲು ಸಾಲು ಏರಿಕೆಗಳ ಪರಿಣಾಮವಾಗಿ ಪ್ರಸ್ತುತ ದೆಹಲಿಯಲ್ಲಿ 14 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ 942 ರೂ. ತಲುಪಿದೆ. ಇದೀಗ ಆಗಸ್ಟ್ 1ರಂದು ತೈಲ ಕಂಪನಿಗಳು ಪ್ರಕಟಿಸುವ ಹೊಸ ದರಪಟ್ಟಿ ಮತ್ತೊಮ್ಮೆ ಗ್ರಾಹಕರ ಬಜೆಟ್ ಮೇಲೆ ಪ್ರಭಾವ ಬೀರಲಿದೆ.

ಸಾರ್ವಜನಿಕರ ಮೇಲಾಗುವ ಪರಿಣಾಮ:
ಗೃಹಬಳಕೆ ಸಿಲಿಂಡರ್ ಬೆಲೆ ಏರಿಕೆಯಾದರೆ ಸಾಮಾನ್ಯ ಕುಟುಂಬಗಳ ಮಾಸಿಕ ಅಡುಗೆ ವೆಚ್ಚ ಹೆಚ್ಚಾಗಲಿದ್ದು, ಗೃಹಿಣಿಯರ ಬಜೆಟ್‌ಗೆ ನೇರ ಹೊಡೆತ ಬೀಳಲಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾದರೆ ಹೋಟೆಲ್, ರೆಸ್ಟೋರೆಂಟ್‌ಗಳು, ಬೇಕರಿ ಹಾಗೂ ಸಣ್ಣ ಪ್ರಮಾಣದ ಉಪಹಾರ ಗೃಹಗಳಲ್ಲಿ ತಿನಿಸುಗಳ ಮತ್ತು ಊಟದ ದರಗಳು ದುಬಾರಿಯಾಗುವ ಸಾಧ್ಯತೆಯಿರುತ್ತದೆ.
ಆದಾಯ ತೆರಿಗೆಯಲ್ಲಿ ಬದಲಾವಣೆ
ಉದ್ಯೋಗಿಗಳಿಗೆ (ITR-1 ಮತ್ತು ITR-2) ದಂಡವಿಲ್ಲದೆ ಐಟಿಆರ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿತ್ತು. ಆಗಸ್ಟ್ 1ರಿಂದ ರಿಟರ್ನ್ಸ್ ಸಲ್ಲಿಸುವವರು 1,000 ರೂ.ಯಿಂದ 5,000 ರೂ.ವರೆಗೆ ದಂಡ (Late Fee) ಹಾಗೂ ಬಾಕಿ ತೆರಿಗೆಯ ಮೇಲೆ ಬಡ್ಡಿ ಪಾವತಿಸಬೇಕಾಗುತ್ತದೆ.
5 ಲಕ್ಷಕ್ಕಿಂತ ರೂ. ಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಗರಿಷ್ಠ 1,000 ರೂ. ದಂಡ ಹಾಗೂ 5 ಲಕ್ಷಕ್ಕಿಂತ ರೂ.ಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ 5,000 ರೂ.ವರೆಗೆ ದಂಡ ವಿಧಸಲಾಗುವುದು. ದಂಡದ ಜೊತೆಗೆ, ಪಾವತಿಸಬೇಕಾದ ಬಾಕಿ ತೆರಿಗೆ ಮೊತ್ತದ ಮೇಲೆ ಪ್ರತಿ ತಿಂಗಳಿಗೆ 1% ನಂತೆ ಬಡ್ಡಿಯನ್ನೂ ಸೇರಿಸಿ ಪಾವತಿಸಬೇಕಾಗುತ್ತದೆ.

ಜುಲೈ 31ರ ಒಳಗಾಗಿ ಯಶಸ್ವಿಯಾಗಿ ಐಟಿಆರ್ ಸಲ್ಲಿಸಿ, ಅದನ್ನು ಇ-ವೇರಿಫೈ ಮಾಡಿದ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯು ಆಗಸ್ಟ್ ತಿಂಗಳಿಂದ ಮರುಪಾವತಿ (Tax Refund) ಮೊತ್ತವನ್ನು ಪ್ರೊಸೆಸ್ ಮಾಡಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಿದೆ.
ಐಟಿಆರ್ ಫೈಲ್ ಮಾಡಿದ ನಂತರ 30 ದಿನಗಳ ಒಳಗಾಗಿ ‘e-Verification’ ಮಾಡುವುದು ಕಡ್ಡಾಯ. ಜುಲೈ ಕೊನೆಯಲ್ಲಿ ಐಟಿಆರ್ ಸಲ್ಲಿಸಿದವರು ಆಗಸ್ಟ್ ತಿಂಗಳೊಳಗೆ ಇ-ವೇರಿಫೈ ಮಾಡದಿದ್ದರೆ, ಅವರು ಸಲ್ಲಿಸಿದ ಐಟಿಆರ್ ಅಸಿಂಧು ಎಂದು ಪರಿಗಣಿತವಾಗುತ್ತದೆ. ಐಟಿಆರ್ ರದ್ದಾದರೆ, ನೀವು ಆಗಸ್ಟ್ 1ರ ನಂತರ ಮತ್ತೆ ಹೊಸದಾಗಿ ದಂಡ ಪಾವತಿಸಿ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ.
ವ್ಯವಹಾರ ಮಾಡುವವರು ತಮ್ಮ ಲೆಕ್ಕಪತ್ರಗಳನ್ನು ಪರಿಶೀಲಿಸಿ, ಸರಿಯಾದ ದಾಖಲೆಗಳೊಂದಿಗೆ ಆಗಸ್ಟ್ ತಿಂಗಳ ಕೊನೆಯೊಳಗೆ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ತೆರಿಗೆದಾರರು ನಿಗದಿತ ಸಮಯದೊಳಗೆ ತೆರಿಗೆ ಸಲ್ಲಿಕೆ ಮಾಡುವುದನ್ನು ಉತ್ತೇಜಿಸಲು ಮತ್ತು ಆದಾಯ ತೆರಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ ಈ ತಡವಾದ ಶುಲ್ಕವನ್ನು ಅನ್ವಯಿಸಲಾಗುತ್ತದೆ. ತೆರಿಗೆ ಸಲ್ಲಿಕೆ ಪ್ರಕ್ರಿಯೆಯಲ್ಲಿ ಶಿಸ್ತು ತರುವುದು ಮತ್ತು ದಂಡದ ಮೂಲಕ ಸರ್ಕಾರದ ಕಂದಾಯ ನಷ್ಟವನ್ನು ಸರಿದೂಗಿಸುವುದು. ನೀವು ಜುಲೈ 31ರ ಒಳಗೆ ಐಟಿಆರ್ ಸಲ್ಲಿಸಿದ್ದರೆ ಯಾವುದೇ ದಂಡವಿರುವುದಿಲ್ಲ. ಆದರೆ ಇನ್ನು ಮುಂದೆ ಸಲ್ಲಿಸುವ ಪ್ರತಿಯೊಬ್ಬರಿಗೂ ದಂಡದ ನಿಯಮ ಅನ್ವಯವಾಗಲಿದೆ.

ಆಧಾರ್ ಲಿಂಕ್ಡ್ ಗ್ರಾಹಕ ವ್ಯವಸ್ಥೆ:
ಆಗಸ್ಟ್ 1 ರಿಂದ ಜಾರಿಗೆ ಬರಲಿರುವ ‘ಸೆಂಟ್ರಲ್ ಕೆವೈಸಿ 2.0’ (CKYC 2.0) ವ್ಯವಸ್ಥೆ ಜಾರಿಗೆ ಬರಲಿದೆ.
ಸೆಂಟ್ರಲ್ ಕೆವೈಸಿ 2.0 ಎಂದರೇನು?
ಸಿ-ಕೆವೈಸಿ (CKYC) ಎಂಬುದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ‘ಸಿಆರ್‌ಎಸ್‌ಎಐ’ (CERSAI – Central Registry of Securitisation Asset Reconstruction and Security Interest) ನಿರ್ವಹಿಸುವ ಒಂದು ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಯಾಗಿದೆ. ಈವರೆಗೆ ಚಾಲ್ತಿಯಲ್ಲಿದ್ದ ಸಿ-ಕೆವೈಸಿ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿ, ಆಧಾರ್ ಲಿಂಕ್ ಮತ್ತು ತಾಂತ್ರಿಕವಾಗಿ ಬಿಗಿಗೊಳಿಸಿ ಜಾರಿಗೆ ತರುತ್ತಿರುವ ಹೊಸ ಆವೃತ್ತಿಯೇ CKYC 2.0.

ಹೊಸ ನಿಯಮದಿಂದ ಆಗುವ ಪ್ರಮುಖ ಬದಲಾವಣೆಗಳು:
ನೀವು ಒಂದು ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಕೆವೈಸಿ (ಆಧಾರ್, ಪಾನ್ ಕಾರ್ಡ್) ನೀಡಿದ್ದರೆ, ಮತ್ತೊಂದು ಬ್ಯಾಂಕ್‌ಗೆ ಹೋದಾಗ ಅಥವಾ ಮ್ಯೂಚುವಲ್ ಫಂಡ್, ಇನ್ಶೂರೆನ್ಸ್ (ವಿಮೆ) ಖರೀದಿ ಮಾಡುವಾಗ ಮತ್ತೆ ಹೊಸದಾಗಿ ಕೆವೈಸಿ ದಾಖಲೆಗಳನ್ನು ನೀಡಬೇಕಿತ್ತು. ಹೊಸ ನಿಯಮ ಜಾರಿಯಾದ ಬಳಿಕ CKYC 2.0 ವ್ಯವಸ್ಥೆಯಡಿ ನಿಮ್ಮ ಆಧಾರ್ ಆಧಾರಿತ ಕೆವೈಸಿ ಮಾಹಿತಿ ಒಮ್ಮೆ ಕೇಂದ್ರ ಸಂಗ್ರಹಾಗಾರದಲ್ಲಿ ನಮೂದಾದರೆ, ನಿಮಗೆ 14 ಅಂಕಿಯ CKYC ಸಂಖ್ಯೆ ಸಿಗುತ್ತದೆ. ನಂತರ ನೀವು ಯಾವುದೇ ಬ್ಯಾಂಕ್, ವಿಮೆ ಅಥವಾ ಮ್ಯೂಚುವಲ್ ಫಂಡ್ ಕಂಪನಿಗೆ ಹೋದರೂ ಈ ಒಂದು CKYC ಸಂಖ್ಯೆ ನೀಡಿದರೆ ಸಾಕು.
ಹೊಸ CKYC 2.0 ವ್ಯವಸ್ಥೆಯಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಯು ನಿಮ್ಮ ಕೆವೈಸಿ ವಿವರಗಳನ್ನು ಸಿ-ಕೆವೈಸಿ ನೋಂದಣಿಯಿಂದ ಪಡೆದುಕೊಳ್ಳಲು ಬಯಸಿದರೆ, ನಿಮ್ಮ ಸಮ್ಮತಿ ಇರುವುದು ಕಡ್ಡಾಯ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಅಥವಾ ಡಿಜಿಟಲ್ ಸಮ್ಮತಿ ನೀಡಿದ ನಂತರವೇ ಸಂಸ್ಥೆಗಳು ನಿಮ್ಮ ವಿವರಗಳನ್ನು ನೋಡಬಹುದು.

ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರುವ ಡೇಟಾವನ್ನು ಬಳಸಿಕೊಂಡು ಇ-ಕೆವೈಸಿ (e-KYC) ಪ್ರಕ್ರಿಯೆಯು ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ನಡೆಯಲಿದೆ. ಇದರಿಂದ ಗ್ರಾಹಕರು ದಾಖಲೆಗಳ ಪತ್ರಿಗಳನ್ನು ಹಿಡಿದುಕೊಂಡು ಅಲೆಯುವುದು ತಪ್ಪುತ್ತದೆ.
ಈ ಹೊಸ ವ್ಯವಸ್ಥೆಯ ಪ್ರಮುಖ ಪ್ರಯೋಜನಗಳು:
ಪ್ರತಿ ಬಾರಿಯೂ ಹೊಸ ಹೂಡಿಕೆ ಅಥವಾ ಖಾತೆ ತೆರೆಯುವಾಗ ಜಿರಾಕ್ಸ್ ಪ್ರತಿಗಳನ್ನು ನೀಡುವುದು, ಫಾರ್ಮ್ ತುಂಬುವುದು ತಪ್ಪುತ್ತದೆ. ನಕಲಿ ದಾಖಲೆಗಳನ್ನು ಬಳಸಿ ಬೆನಾಮಿ ಖಾತೆಗಳನ್ನು ತೆರೆಯುವುದು ಅಥವಾ ಆನ್‌ಲೈನ್ ಲೋನ್ ವಂಚನೆ ಮಾಡುವುದಕ್ಕೆ ಈ ಹೊಸ ವ್ಯವಸ್ಥೆ ಪೂರ್ಣ ವಿರಾಮ ನೀಡಲಿದೆ. ನಿಮ್ಮ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬದಲಾದರೆ, ಸಿ-ಕೆವೈಸಿ ಪೋರ್ಟಲ್‌ನಲ್ಲಿ ಒಮ್ಮೆ ಅಪ್‌ಡೇಟ್ ಮಾಡಿದರೆ ಸಾಕು. ಅದು ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳು ಹಾಗೂ ವಿಮಾ ಪಾಲಿಸಿಗಳಿಗೆ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಕೆವೈಸಿ ಪೂರ್ಣಗೊಂಡಿದ್ದರೆ, ನೀವು ಪ್ರತ್ಯೇಕವಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಬ್ಯಾಂಕುಗಳು ಸ್ವಯಂಚಾಲಿತವಾಗಿ ನಿಮ್ಮ ವಿವರಗಳನ್ನು ಸಿ-ಕೆವೈಸಿ 2.0 ವ್ಯವಸ್ಥೆಗೆ ನವೀಕರಿಸುತ್ತವೆ.

ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕಗಳ ಹೆಚ್ಚಳ:
ಪ್ರಮುಖ ಬ್ಯಾಂಕ್‌ಗಳು ತಮ್ಮ ಸೇವಾ ಶುಲ್ಕಗಳನ್ನು ಪರಿಷ್ಕರಿಸುತ್ತಿವೆ. ಜೊತೆಗೆ ಕ್ರೆಡಿಟ್ ಕಾರ್ಡ್ (Credit Card) ಮೂಲಕ ಮಾಡುವ ಯುಟಿಲಿಟಿ ಬಿಲ್ ಪಾವತಿಗಳ ನಿಯಮ ಮತ್ತು ರಿವಾರ್ಡ್ ಪಾಯಿಂಟ್‌ಗಳ ದರದಲ್ಲೂ ಬದಲಾವಣೆಯಾಗಲಿದೆ. ಬ್ಯಾಂಕಿಂಗ್ ನಿರ್ವಹಣಾ ವೆಚ್ಚಗಳು ಮತ್ತು ಡಿಜಿಟಲ್ ಸೇವೆ ಒದಗಿಸುವ ವೆಚ್ಚಗಳು ಹೆಚ್ಚಿರುವುದರಿಂದ ಬ್ಯಾಂಕುಗಳು ತಮ್ಮ ವಹಿವಾಟು ಶುಲ್ಕ ಹಾಗೂ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ನಿಯತಕಾಲಿಕವಾಗಿ ಪರಿಷ್ಕರಿಸುತ್ತವೆ.
ಆಗಸ್ಟ್ 1ರಿಂದ ಪ್ರಮುಖ ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್‌ಗಳ ಸೇವಾ ನಿಯಮಗಳು, ರಿವಾರ್ಡ್ ಪಾಯಿಂಟ್‌ಗಳ ದರ ಹಾಗೂ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸುತ್ತಿವೆ.
ಇನ್ಮುಂದೆ ಕ್ರೆಡಿಟ್ ಕಾರ್ಡ್ ಮೂಲಕ ಯುಟಿಲಿಟಿ ಬಿಲ್ ಪಾವತಿಗಳು, ಶಿಕ್ಷಣ ಶುಲ್ಕ ಅಥವಾ ವಾಲೆಟ್ ರೀಚಾರ್ಜ್‌ಗಳಿಗೆ ನೀಡಲಾಗುತ್ತಿದ್ದ ರಿವಾರ್ಡ್ ಪಾಯಿಂಟ್‌ಗಳ ಪ್ರಮಾಣದಲ್ಲಿ ಕಡಿತವಾಗುವ ಸಾಧ್ಯತೆಯಿದೆ. ಕೆಲವು ಬ್ಯಾಂಕ್‌ಗಳು ಥರ್ಡ್ ಪಾರ್ಟಿ ಆಪ್‌ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಳಸಿ ಯುಟಿಲಿಟಿ ಬಿಲ್ ಪಾವತಿಸಿದರೆ 1%ವರೆಗೆ ಹೆಚ್ಚುವರಿ ಶುಲ್ಕ ವಿಧಿಸುವ ನಿಯಮವನ್ನು ಬಿಗಿಗೊಳಿಸುತ್ತಿವೆ.

ಕೆಲವು ಪ್ರಮುಖ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ತಮ್ಮ ವಿಶೇಷ ಎಫ್‌ಡಿ ಯೋಜನೆಗಳ ಕೊನೆಯ ದಿನಾಂಕವನ್ನು ಮುಕ್ತಾಯಗೊಳಿಸುತ್ತಿದ್ದು, ಹೊಸ ಅವಧಿಯ ಎಫ್‌ಡಿಗಳಿಗೆ ಹೊಸ ಬಡ್ಡಿ ದರಗಳನ್ನು ಪ್ರಕಟಿಸಲಿವೆ. ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ಹೆಚ್ಚುವರಿ ಬಡ್ಡಿ ದರಗಳ ನಿಯಮಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಲಿವೆ.
ನಿಮ್ಮ ಬ್ಯಾಂಕ್‌ನಿಂದ ಬಂದಿರುವ ಇ-ಮೇಲ್ ಅಥವಾ SMS ಸಂದೇಶಗಳನ್ನು ಪರಿಶೀಲಿಸಿ. ನಿಮ್ಮ ಕ್ರೆಡಿಟ್ ಕಾರ್ಡ್‌ನ ಹೊಸ ಸೇವಾ ಶುಲ್ಕಗಳ ಪಟ್ಟಿಯನ್ನು ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಿ. ಹಣವನ್ನು ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಯೋಜನೆಯಿದ್ದರೆ, ಪ್ರಸ್ತುತ ಇರುವ ಗರಿಷ್ಠ ಬಡ್ಡಿ ದರಗಳ ಅವಧಿಯನ್ನು ತಿಳಿದುಕೊಂಡು ಹೂಡಿಕೆ ಮಾಡುವುದು ಒಳ್ಳೆಯದು.
