ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ಪಾಲಾಗಿರುವ ನಟ ದರ್ಶನ್ (Darshan) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತಮ್ಮ ಜಾಮೀನು ಅರ್ಜಿಯಲ್ಲಿ ಜೈಲಿನ ಒಳಗಿನ ಸ್ಥಿತಿಗತಿ ಮತ್ತು ತಮ್ಮ ವೃತ್ತಿಜೀವನದ ಸಂಕಷ್ಟಗಳ ಬಗ್ಗೆ ಸುದೀರ್ಘ ಅಳಲು ತೋಡಿಕೊಂಡಿದ್ದಾರೆ.
ಜೈಲಿನಲ್ಲಿ (Jail) ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ದರ್ಶನ್ ದೂರಿದ್ದಾರೆ. ನಾಳೆ (ಮೇ 4) ಈ ಅರ್ಜಿಯ ವಿಚಾರಣೆ ನಡೆಯಲಿದ್ದು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸುಪ್ರೀಂ (Supreme Court) ಯಾವ ಆದೇಶ ನೀಡಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಅರ್ಜಿಯಲ್ಲಿ ಏನಿದೆ?
ನಿಯಮಗಳನ್ನು ಮೀರಿ ನನ್ನನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ತೀವ್ರ ಹಾನಿಯಾಗುತ್ತಿದೆ. ಸಹಕೈದಿಗಳಿಂದ ನಿರಂತರ ಬೆದರಿಕೆ, ನಿಂದನೆ ಮತ್ತು ಮೂದಲಿಕೆಯಂತಹ ಪ್ರಚೋದನೆಗಳು ಎದುರಾಗುತ್ತಿವೆ. ಮಾಧ್ಯಮಗಳಲ್ಲಿ ನನ್ನ ವಿರುದ್ಧ ನಡೆಯುತ್ತಿರುವ ನೆಗೆಟಿವ್ ಪ್ರಚಾರದಿಂದ ಜೈಲಿನ ಒಳಗಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಇತರ ಕೈದಿಗಳಿಗೆ ಹೋಲಿಸಿದರೆ ತಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಕುಟುಂಬಸ್ಥರ ಭೇಟಿಗೆ ಸಮಾನ ಸಮಯ ನೀಡುತ್ತಿಲ್ಲ ಹಾಗೂ ಹೊರಗಿನಿಂದ ಆಹಾರ, ಬಟ್ಟೆ ಮತ್ತು ಹಾಸಿಗೆ ಪಡೆಯಲು ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರೂ ಕೇವಲ 2-3 ಬಾರಿ ಮಾತ್ರ ಫಿಸಿಯೋಥೆರಪಿ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?

ವೃತ್ತಿಜೀವನಕ್ಕೆ ಮರಣಗಂಟೆ:
ತಮ್ಮ ವೃತ್ತಿಜೀವನದ ಮೇಲೆ ಈ ಜೈಲುವಾಸ ಬೀರುತ್ತಿರುವ ಪರಿಣಾಮದ ಬಗ್ಗೆ ವಿವರಿಸಿರುವ ದರ್ಶನ್, “ಪ್ರತಿ ವರ್ಷ ನಾನು 2 ರಿಂದ 3 ಸಿನಿಮಾಗಳನ್ನು ಮಾಡುತ್ತಿದ್ದೆ. ಜಾಮೀನು ರದ್ದಾಗುವ ವೇಳೆಯೂ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮೀಡಿಯಾ ಹೌಸ್ ಸ್ಟೂಡಿಯೋಸ್‌ನಂತಹ ದೊಡ್ಡ ಸಂಸ್ಥೆಗಳ ಚಿತ್ರಗಳಿಗೆ ಸಹಿ ಮಾಡಿದ್ದೆ. ನಿರ್ಮಾಪಕರು ಈಗಾಗಲೇ ಸುಮಾರು 6 ಕೋಟಿ ರೂ. ಬಂಡವಾಳ ಹೂಡಿದ್ದಾರೆ. ಸುದೀರ್ಘ ಜೈಲುವಾಸದಿಂದ ನನ್ನ ಜೀವನೋಪಾಯಕ್ಕೆ ತೊಂದರೆಯಾಗಿದ್ದು, ಇದು ನನ್ನ ವೃತ್ತಿಜೀವನಕ್ಕೆ ಮರಣಗಂಟೆಯಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ತನಿಖೆ ಮತ್ತು ಸಾಕ್ಷ್ಯ ವಿಚಾರಣೆಯ ವಿಳಂಬದ ಬಗ್ಗೆಯೂ ದರ್ಶನ್ ಪರ ವಕೀಲರು ಅರ್ಜಿಯಲ್ಲಿಉಲ್ಲೇಖಿಸಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ 262 ಸಾಕ್ಷಿಗಳ ವಿಚಾರಣೆ ನಡೆಸಬೇಕೆಂದು ಉಲ್ಲೇಖಿಸಲಾಗಿದೆ. ಆದರೆ ಕಳೆದ 8 ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಸದ್ಯಕ್ಕೆ ಈ ಪ್ರಕ್ರಿಯೆ ಮುಗಿಯುವ ಲಕ್ಷಣಗಳಿಲ್ಲ. ಇಷ್ಟು ದೀರ್ಘಕಾಲ ವಿಚಾರಣಾಧೀನ ಕೈದಿಯಾಗಿ ಇರಿಸುವುದು ವೃತ್ತಿ ನಡೆಸುವ ಮೂಲಭೂತ ಹಕ್ಕಿನ ಹರಣವಾಗುತ್ತದೆ ಎಂದು ವಾದಿಸಿ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ.

