ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ (Delhi Excise Policy Case) ಸಂಬಂಧಿಸಿದಂತೆ ರಾಜಕೀಯ ಮತ್ತು ನ್ಯಾಯಾಂಗ ವಲಯದಲ್ಲಿ ಭಾರೀ ಸಂಚಲನ ಮೂಡಿಸುವ ಬೆಳವಣಿಗೆಯೊಂದರಲ್ಲಿ, ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ಸಂಚಾಲಕ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಹೈಕೋರ್ಟ್ ವಿಚಾರಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ (Justice Swarana Kanta Sharma) ಅವರ ಪೀಠದ ಮುಂದೆ ನಡೆಯುತ್ತಿರುವ ವಿಚಾರಣೆಗೆ ತಾವು ಅಥವಾ ತಮ್ಮ ಪರ ವಕೀಲರು ಹಾಜರಾಗುವುದಿಲ್ಲ ಎಂದು ಕೇಜ್ರಿವಾಲ್ ಲಿಖಿತವಾಗಿ ತಿಳಿಸಿದ್ದಾರೆ. ಪತ್ರದಲ್ಲಿ ಕೇವಲ ಸತ್ಯಾಗ್ರಹದ(Satyagraha) ಘೋಷಣೆಯಷ್ಟೇ ಅಲ್ಲದೆ ತಮ್ಮ ನಿರ್ಧಾರದ ಹಿಂದಿನ ನೈತಿಕ ಮತ್ತು ವೈಯಕ್ತಿಕ ಕಾರಣಗಳನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.
ವಿಚಾರಣೆಗೆ ಹಾಜರಾಗದಿದ್ದರೆ ಕಾನೂನಾತ್ಮಕವಾಗಿ ತನಗೆ ತೊಂದರೆಯಾಗಬಹುದು ಮತ್ತು ಏಕಪಕ್ಷೀಯ ಆದೇಶ ಹೊರಬರಬಹುದು ಎಂಬ ಅರಿವು ತನಗಿದೆ. ಹೀಗಿದ್ದರೂ “ತಪ್ಪು ವ್ಯವಸ್ಥೆಯ” ಮುಂದೆ ಮಂಡಿಯೂರುವುದಕ್ಕಿಂತ ಆ ಶಿಕ್ಷೆಯನ್ನು ಅನುಭವಿಸಲು ಸಿದ್ಧ ಎಂದು ಹೇಳಿದ್ದಾರೆ.
ಈ ನಿರ್ಧಾರವನ್ನು ʻಸತ್ಯಾಗ್ರಹʼ ಎಂದು ಬಣ್ಣಿಸಿದ ಅವರು ನ್ಯಾಯಾಂಗದ ನೈತಿಕತೆಯನ್ನು ಎತ್ತಿ ಹಿಡಿಯಲು ನಾನು ಈ ಅಹಿಂಸಾತ್ಮಕ ಮಾರ್ಗವನ್ನು ಅನುಸರಿಸುತ್ತಿರುವುದಾಗಿ ತಿಳಿಸಿದ್ದಾರೆ. ಸತ್ಯಾಗ್ರಹವೆಂದರೆ ಕೇವಲ ಪ್ರತಿರೋಧವಲ್ಲ, ಬದಲಾಗಿ ಅಧಿಕಾರದಲ್ಲಿರುವವರು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ನೀಡುವ ಅವಕಾಶ ಎಂದು ಅವರು ಗಾಂಧಿ ತತ್ವಗಳನ್ನು ಉಲ್ಲೇಖಿಸಿದ್ದಾರೆ. ಮೊದಲು ಅನ್ಯಾಯವನ್ನು ಸರಿಪಡಿಸಲು ಅಧಿಕೃತವಾಗಿ ವಿನಂತಿಸುವುದು. ಮನವಿ ವಿಫಲವಾದಾಗ ಮಾತ್ರ ಅಹಿಂಸಾತ್ಮಕವಾಗಿ ಸಹಕರಿಸದಿರುವುದು ಸತ್ಯಾಗ್ರಹದ ನಿಜವಾದ ಶಿಸ್ತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ನ್ಯಾಯ ಸಿಗುವುದು ಮಾತ್ರವಲ್ಲ, ಅದು ಸಿಗುತ್ತಿದೆ ಎಂದು ಜನರಿಗೆ ಕಾಣಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ತತ್ವವನ್ನು ಪತ್ರದಲ್ಲಿ ಉಲ್ಲೇಖಿಸಿ ಈ ಪ್ರಕರಣದಲ್ಲಿ ಆ ತತ್ವವನ್ನು ಪಾಲಿಸಲಾಗುತ್ತಿಲ್ಲ ಎಂದು ದೂರಿದ್ದಾರೆ. ಇದನ್ನೂ ಓದಿ: ರಾಜಕಾರಣಿಗಳ ಮಕ್ಕಳು ರಾಜಕಾರಣಿಯಾದರೆ, ಜಡ್ಜ್ ಮಕ್ಕಳು ವಕೀಲರಾಗುವುದರಲ್ಲಿ ತಪ್ಪೇನಿಲ್ಲ: ಕೇಜ್ರಿವಾಲ್ ವಿರುದ್ಧ ಜಡ್ಜ್ ಗರಂ

ಯಾವುದೇ ಸಿಟ್ಟು ಅಥವಾ ದ್ವೇಷದಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ, ಬದಲಾಗಿ ತನ್ನ ಅಂತರಾತ್ಮದ ಧ್ವನಿಗೆ ಓಗೊಟ್ಟು, ನೈತಿಕ ಹೊಣೆಗಾರಿಕೆಯಿಂದ ವಿಚಾರಣೆಯಿಂದ ದೂರ ಉಳಿಯುತ್ತಿದ್ದೇನೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮೇಲಿನ ತಮ್ಮ ಅಪನಂಬಿಕೆಯು ಕೇವಲ ಈ ಅಬಕಾರಿ ನೀತಿ ಹಗರಣಕ್ಕೆ ಮಾತ್ರ ಸೀಮಿತವಾಗಿದ್ದು, ಇತರ ವಿಷಯಗಳಲ್ಲಿ ಇದು ಅನ್ವಯಿಸುವುದಿಲ್ಲ ಎಂದು ಕೇಜ್ರಿವಾಲ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳು ತನ್ನ ಅರ್ಜಿಯನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ತಾವು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಉನ್ನತ ನ್ಯಾಯಾಲಯದಿಂದ ತಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ: ನೀವು ಆರ್‌ಎಸ್‌ಎಸ್ ಸಂಯೋಜಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ: ದೆಹಲಿ ಹೈಕೋರ್ಟ್‌ನಲ್ಲಿ ಕೇಜ್ರಿವಾಲ್ ವಾದ
ಕೇಜ್ರಿವಾಲ್ ಅವರ ಈ ನಡೆ ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ಅಪರೂಪದ ಮತ್ತು ಸಂಘರ್ಷಾತ್ಮಕ ಹೆಜ್ಜೆಯಾಗಿದೆ. ಹೈಕೋರ್ಟ್ ನ್ಯಾಯಾಧೀಶರ ಮೇಲೆಯೇ ಅಪನಂಬಿಕೆ ವ್ಯಕ್ತಪಡಿಸಿ, ವಿಚಾರಣೆಯನ್ನು ಬಹಿಷ್ಕರಿಸುವ ಮೂಲಕ ಅವರು ನೇರವಾಗಿ ನ್ಯಾಯಾಂಗ ವ್ಯವಸ್ಥೆಯ ಸ್ವರೂಪವನ್ನು ಪ್ರಶ್ನಿಸಿದ್ದಾರೆ. ತಮ್ಮ ನಿರ್ಧಾರವನ್ನು ‘ಸತ್ಯಾಗ್ರಹ’ ಎಂದು ಕರೆಯುವ ಮೂಲಕ ಹೊಸ ರಾಜಕೀಯ ಆಯಾಮವನ್ನೂ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಹೇಗೆ ಪರಿಗಣಿಸುತ್ತದೆ ಮತ್ತು ಹೈಕೋರ್ಟ್ ಏಕಪಕ್ಷೀಯವಾಗಿ ವಿಚಾರಣೆ ಮುಂದುವರಿಸುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.
ಫೆಬ್ರವರಿ 2026 ರಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದೆಹಲಿ ನ್ಯಾಯಾಲಯವು ಅರವಿಂದ ಕೇಜ್ರಿವಾಲ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿತ್ತು. ಇದರ ವಿರುದ್ಧ ಸಿಬಿಐ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನ್ಯಾ. ಸ್ವರ್ಣ ಕಾಂತ ಶರ್ಮಾ ಅವರ ಏಕಸದಸ್ಯಪೀಠದಲ್ಲಿ ನಡೆಯುತ್ತಿದೆ.

