– ಜ್ಞಾನಾರ್ಜನೆ ಜೊತೆ ಬಂಪರ್ ಗಿಫ್ಟ್ ಪಡೆದ ವಿದ್ಯಾರ್ಥಿಗಳು
ಬೆಂಗಳೂರು: ಪಬ್ಲಿಕ್ ಟಿವಿ (Public TV) ಹೆಮ್ಮೆಯ ಪ್ರಸ್ತುತಿ ವಿದ್ಯಾಪೀಠ (Vidhyapeeta) 9ನೇ ಆವೃತ್ತಿ ಯಶಸ್ವಿಯಾಗಿದೆ. ಎರಡು ದಿನಗಳ ಕಾಲ ನಡೆದ ಎಜುಕೇಶನ್ ಎಕ್ಸ್‌ಪೋದಲ್ಲಿ (Education Expo) ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಜ್ಞಾನಾರ್ಜನೆ ಪಡೆದರು. ಅಷ್ಟೇ ಅಲ್ಲ ಲ್ಯಾಪ್‌ಟಾಪ್, ಬೈಸಿಕಲ್ ಅಂತಹ ಬಂಪರ್ ಗಿಫ್ಟ್‌ಗಳನ್ನ ಪಡೆದು ಅದೃಷ್ಟವಂತರಾದರು.
ಪಬ್ಲಿಕ್ ಟಿವಿಯ ಹೆಮ್ಮೆಯ ಪ್ರಸ್ತುತಿ 9ನೇ ಆವೃತ್ತಿಯ ವಿದ್ಯಾಪೀಠ ಎಜುಕೇಶನ್ ಎಕ್ಸ್‌ಪೋ ಯಶಸ್ವಿಯಾಗಿ ಮುಕ್ತಾಯವಾಗಿದೆ. ಎರಡು ದಿನ ಎಕ್ಸ್‌ಪೋದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆದರು. 125ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಒಂದೇ ಸೂರಿನಡಿ ಬಂದು ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಜೀವನಕ್ಕೆ ಮಾರ್ಗದರ್ಶನ ನೀಡಿದವು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಇಂದು ಕೊನೆ ದಿನ – ಬನ್ನಿ, ಭಾಗವಹಿಸಿ, ಮಾಹಿತಿ ಪಡೆಯಿರಿ

ನಿನ್ನೆ ಮೊದಲ ದಿನ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರ ಜೊತೆ ಗಣ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಮೊದಲ ದಿನ ಸಿಇಟಿ, ಕಾಮೆಡ್-ಕೆ ಸೇರಿ ವಿವಿಧ ವಿಷಯಗಳ ಕುರಿತು ಸೆಮಿನಾರ್ ನಡೆಯಿತು. ಮೊದಲ ದಿನವೇ ಲಕ್ಕಿ ಡಿಪ್ ಮೂಲಕ 5 ಬೈಸಿಕಲ್ ಮತ್ತು ಲ್ಯಾಪ್‌ಟಾಪ್ ಅನ್ನು ವಿದ್ಯಾರ್ಥಿಗಳು ಬಂಪರ್ ಗಿಫ್ಟ್ ಆಗಿ ಪಡೆದರು.
ಎರಡನೇ ದಿನವಾದ ಇಂದು ಸಾವಿರಾರು ವಿದ್ಯಾರ್ಥಿಗಳು ಎಕ್ಸ್ ಪೋಗೆ ಭೇಟಿ ನೀಡಿದರು. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು, ಪೋಷಕರು ಎಕ್ಸ್ ಪೋಗೆ ಬಂದು ಮಾಹಿತಿ ಪಡೆದರು. ಎರಡನೇ ದಿನವೂ ಹಲವು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಹ್ಯಾಂಡ್‍ರೈಟಿಂಗ್ ಎಕ್ಸ್ ಪರ್ಟ್ ರಫೀಉಲ್ಲಾ ಬೇಗ್‌ರಿಂದ ಉಪನ್ಯಾಸ, ನೀಟ್ ಕುರಿತು ವಿಶೇಷ ಸೆಮಿನಾರ್ ಅನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ನಡೆಸಿಕೊಟ್ಟರು. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಅವರು ವಿದ್ಯಾರ್ಥಿಗಳಿಗೆ ಮೋಟಿವೇಷನ್ ಸ್ಪೀಚ್ ಕೊಟ್ಟರು.

ವಿದ್ಯಾಪೀಠ ಕಾರ್ಯಕ್ರಮದಲ್ಲಿ ಎರಡನೇ ದಿನವೂ ಬಂಪರ್ ಗಿಫ್ಟ್‌ಗಳ ಧಮಾಕ ನಡೆಯಿತು. ಲಕ್ಕಿ ಡಿಪ್ ಮೂಲಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಬೈಸಿಕಲ್ ಗಿಫ್ಟ್ ಸಿಕ್ತು. 5 ಲಕ್ಕಿ ವಿದ್ಯಾರ್ಥಿಗಳಿಗೆ ಬೈಸಿಕಲ್, ಒಬ್ಬ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ಗಿಫ್ಟ್ ಸಿಕ್ತು. ಇದೇ ವೇಳೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸ್ಲೊ ಸೈಕ್ಲಿಂಗ್ ರೇಸ್ ಸೇರಿ, ಫನ್ ಗೇಮ್ ಆಡಿಸಿ ಸರ್ಪ್ರೈಸ್ ಗಿಫ್ಟ್ ನೀಡಲಾಯಿತು. ಇದನ್ನೂ ಓದಿ: AI ಕಾಲದಲ್ಲಿ ನಾಳೆ ಏನಾಗುತ್ತೆ ಅಂತ ಹೇಳೋದೇ ಕಷ್ಟ, ಜೋತಿಷ್ಯಿಗಳಂತೆ ಭವಿಷ್ಯವನ್ನು ಊಹೆ ಮಾಡ್ಬೇಕು: ಹೆಚ್.ಆರ್ ರಂಗನಾಥ್
ಎಕ್ಸ್ ಪೋದಲ್ಲಿ ವಿಶೇಷವಾಗಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ 90% ಮೇಲೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಮತ್ತು ಗಿಫ್ಟ್ ನೀಡಲಾಯಿತು. ಕಾರ್ಯಕ್ರಮದಲ್ಲಿ ಎಕ್ಸ್ ಪೋಗೆ ಆಗಮಿಸಿದ್ದ ಶಿಕ್ಷಣ ಸಂಸ್ಥೆಗಳಿಗೆ ಪಬ್ಲಿಕ್ ಟಿವಿ ವತಿಯಿಂದ ನೆನಪಿನ ಕಾಣಿಗೆ ನೀಡಿ ಗೌರವಿಸಲಾಯಿತು.
ಇಂದಿನ ಕಲಿಕೆ ನಾಳಿನ ದಾರಿದೀಪ ಎಂಬ ಧ್ಯೇಯವಾಕ್ಯದಲ್ಲಿ ನಡೆದ ಪಬ್ಲಿಕ್ ಟಿವಿಯ ವಿದ್ಯಾಪೀಠ 9ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ದಾರಿದೀಪ ಆಯ್ತು.



