ಜೈಪುರ: ಅಭಿಷೇಕ್ ಶರ್ಮಾ, ಇಶನ್ ಕಿಶನ್ ಜವಾಬ್ದಾರಿಯುತ ಬ್ಯಾಟಿಂಗ್ ಎದುರು ರಾಜಸ್ಥಾನ್ ರಾಯಲ್ಸ್ ಸೋತು ಮಂಡಿಯೂರಿದೆ. ರಾಜಸ್ಥಾನ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 15ರ ಹುಡುಗ ವೈಭವ್ ಸೂರ್ಯವಂಶಿ ಸ್ಫೋಟಕ ಶತಕದೊಂದಿಗೆ 6 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಗುರಿ ಬೆನ್ನತ್ತಿದ ಹೈದರಾಬಾದ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಗುರು ತಲುಪಿ ಗೆದ್ದು ಬೀಗಿದೆ.
ಉತ್ತಮ ಫಾರ್ಮ್‌ನಲ್ಲಿ ವೈಭವ್ ಸೂರ್ಯವಂಶಿ ಇಂದು ಕೂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 37 ಬಾಲ್‌ಗೆ 12 ಸಿಕ್ಸರ್, 5 ಫೋರ್‌ಗಳೊಂದಿಗೆ ವೇಗದ ಶತಕ (103 ರನ್) ಸಿಡಿಸಿ ಮಿಂಚಿದರು. ಧ್ರುವ್ ಜುರೆಲ್ ಅರ್ಧಶತಕ ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ಕೊಡುಗೆ ನೀಡಿದರು. ಡೊನೊವನ್ ಫೆರೀರಾ 33 ಗಳಿಸಿದರು.
ನಂತರ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಹೊಡಿಬಡಿ ಆಟವಾಡಿತು. ಆರಂಭದಲ್ಲಿ ಟ್ರಾವಿಸ್ ಹೆಡ್ ಕೇವಲ 6 ರನ್ ಗಳಿಸಿ ಔಟಾದರು. ಈ ವೇಳೆ ಇಶನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಮೋಡಿ ಮಾಡಿತು. ಕಿಶನ್ 31 ಬಾಲ್‌ಗೆ 11 ಫೋರ್, 3 ಸಿಕ್ಸರ್‌ನೊಂದಿಗೆ 71 ರನ್ ಗಳಿಸಿದರು. ಅಭಿಷೇಕ್ ಶರ್ಮಾ ಅರ್ಧಶತಕ ಆಟವಾಡಿದರು. ಇವರಿಬ್ಬರು 55 ಬಾಲ್‌ಗೆ 132 ರನ್‌ಗಳ ಉತ್ತಮ ಜೊತೆಯಾಟವಾಡಿದರು.
ನಿತೀಶ್ ಕುಮಾರ್ ರೆಡ್ಡಿ 36, ಹೆನ್ರಿಚ್ ಕ್ಲಾಸೆನ್ 29 ರನ್ ಮೂಲಕ ತಂಡಕ್ಕೆ ಗೆಲುವಿನ ಕೊಡುಗೆ ನೀಡಿದರು.



