ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ಹಾದಿಗೆ ಬೆಳಕಾಗುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ(PUBLiC TV) ಆಯೋಜಿಸಿರುವ ವಿದ್ಯಾಪೀಠ-2026(Vidhyapeeta-2026) ಎಜುಕೇಶನ್ ಎಕ್ಸ್ಪೋದ 9ನೇ ಆವೃತ್ತಿಗೆ ಚಾಲನೆ ಸಿಕ್ಕಿದೆ.
ಬೆಂಗಳೂರಿನ ಅರಮನೆ ಮೈದಾನದ(Palace Ground) ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ಈ ಬೃಹತ್ ಶಿಕ್ಷಣ ಮೇಳವನ್ನು ಗಾರ್ಡನ್ ಸಿಟಿ ಯೂನಿವರ್ಸಿಟಿ ಚಾನ್ಸಲರ್ ಡಾ. ವಿ ಜಿ ಜೋಸೆಫ್, ಸಿಎಂಆರ್ ಯೂನಿವರ್ಸಿಟಿಯ ಚೇರ್ಮನ್ ಡಾ.ಕೆ ಸಿ ರಾಮಮೂರ್ತಿ ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು.
ರೆವಾ ಯೂನಿವರ್ಸಿಯ ಡೈರೆಕ್ಟರ್ ಡಾ. ಧನಂಜಯ್ ಮತ್ತು ಕೇಂಬ್ರಿಡ್ಜ್ ಶೈಕ್ಷಣಿಕ ಸಂಸ್ಥೆಯ ಚೇರ್ಮನ್ ಡಾ. ಡಿಕೆ ಮೋಹನ್, ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್ ಆರ್ ರಂಗನಾಥ್ ಈ ವೇಳೆ ಉಪಸ್ಥಿತರಿದ್ದರು.
ಇಂದು ಮತ್ತು ನಾಳೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಶಿಕ್ಷಣ ಮೇಳ ನಡೆಯಲಿದೆ. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುವ ಈ ವಿದ್ಯಾಪೀಠ ಕಾರ್ಯಕ್ರಮದಲ್ಲಿ ಪ್ರಖ್ಯಾತ 125ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಿವೆ. ಪಿಯುಸಿ ನಂತರ ಮುಂದೇನು ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಇದು ಸೂಕ್ತ ವೇದಿಕೆಯಾಗಿದೆ.
ಶಿಕ್ಷಣ ತಜ್ಞರು ಮಾತ್ರವಲ್ಲದೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕಾರಿಗಳು ಎಕ್ಸ್ಪೋದಲ್ಲಿ ಭಾಗವಹಿಸುತ್ತಾರೆ. CET ಮತ್ತು COMED-K, NEET ಆಕಾಂಕ್ಷಿಗಳಿಗೆ ವಿಶೇಷ ಮಾರ್ಗದರ್ಶನ ಸಿಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ನೇರವಾಗಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು.
ಬಂದವರಿಗೆ ಕೇವಲ ಮಾಹಿತಿ ಮಾತ್ರವಲ್ಲ, ಅದೃಷ್ಟ ಖುಲಾಯಿಸುವ ಅವಕಾಶವೂ ಇದೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರತಿ ಗಂಟೆಗೊಮ್ಮೆ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು. ಅದೃಷ್ಟವಂತ ವಿಜೇತರಿಗೆ ಬೈಸಿಕಲ್, ಲ್ಯಾಪ್ಟಾಪ್ ಸೇರಿದಂತೆ ಮೌಲ್ಯಯುತ ಬಹುಮಾನಗಳನ್ನು ನೀಡಲಾಗುವುದು.
ವಿದ್ಯಾರ್ಥಿಗಳೇ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಆಯೋಜಿಸಲಾಗಿರುವ ಈ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕೂಡಲೇ ಅರಮನೆ ಮೈದಾನಕ್ಕೆ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳಿ.



