– ತಿರುಪುರದಲ್ಲಿ EVM ದೋಷದಿಂದ ಮತದಾನ ವಿಳಂಬ; 17.69% ವೋಟಿಂಗ್
ಚೆನ್ನೈ: ತಮಿಳುನಾಡಿನ (Tamil Nadu) 234 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಪ್ರಜೆಗಳು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಒಟ್ಟು 5.73 ಕೋಟಿಗೂ ಹೆಚ್ಚು ಮತದಾರರು (Voters) ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದಲೇ ಶಾಂತಿಯುತ ಮತದಾನ ಶುರುವಾಗಿದ್ದು, 9 ಗಂಟೆ ಸುಮಾರಿಗೆ 17.69% ವೋಟಿಂಗ್ ಆಗಿದೆ.

ನಟರಾದ ರಜನಿಕಾಂತ್, ಟಿವಿಕೆ ಅಭ್ಯರ್ಥಿಯೂ ಆಗಿರುವ ದಳಪತಿ ವಿಜಯ್ (Thalapathy Vijay), ಕಮಲ್ ಹಾಸನ್, ಅಜಿತ್ ಕುಮಾರ್, ಶಿವಕಾರ್ತಿಕೇಯನ್, ನಟಿ ಶೃತಿ ಹಾಸನ್, ಕುಷ್ಬು ಸುಂದರ್ ಸೇರಿ ಇತರರು ಬೆಳ್ಳಂಬೆಳಗ್ಗೆ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ. ಅಲ್ಲದೇ ಪ್ರತಿಯೊಬ್ಬರೂ ಬಂದು ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.
ಇವಿಎಂ ನಲ್ಲಿ ದೋಷ
ಇನ್ನೂ ಮತದಾನದ ನಡುವೆ ತಿರುಪುರ ಜಿಲ್ಲೆಯ 2 ಮತಗಟ್ಟೆಗಳಲ್ಲಿ ಇವಿಎಂ (EVM) ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಮತದಾನ ಅರ್ಧಗಂಟೆ ತಡವಾಗಿತ್ತು.

ಉತ್ತುಕುಳಿ ರಸ್ತೆಯಲ್ಲಿರುವ ಎಂ ಎನ್ ಮುರುಗಪ್ಪ ಚೆಟ್ಟಿಯಾರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಮೊದಲ ಮತ ಚಲಾಯಿಸಿದ ಸ್ವಲ್ಪ ಸಮಯದ ನಂತರ EVM ನಲ್ಲಿ ದೋಷ ಕಾಣಿಸಿಕೊಂಡಿತ್ತು. ಬಳಿ ತಾಂತ್ರಿಕ ತಜ್ಞರು ಅದನ್ನು ಸರಿಪಡಿಸಿ, ಮತದಾನಕ್ಕೆ ಅವಕಾಶ ಕಲ್ಪಿಸಿದ್ರು. ನೊಯ್ಯಲ್ ಸ್ಟ್ರೀಟ್‌ನಲ್ಲಿರುವ ಮತಗಟ್ಟೆಯಲ್ಲಿ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿತ್ತು.

ಒಟ್ಟು 33,133 ಸ್ಥಳಗಳಲ್ಲಿ 75,064 ಮತಗಟ್ಟೆಗಳಿದ್ದು, 3 ಲಕ್ಷಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿಯನ್ನ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ಸಲುವಾಗಿ 8,300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. 5,049 ಮತಗಟ್ಟೆಗಳಲ್ಲಿ3,025 ಮತಗಟ್ಟೆಗಳನ್ನ ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ. ವಿಶೇಷವೆಂದ್ರೆ ಈ ಬಾರಿ 4.59 ಲಕ್ಷ ಫಸ್ಟ್ ಟೈಂ ವೋಟರ್ಸ್ ಹಕ್ಕು ಚಲಾವಣೆ ಮಾಡುತ್ತಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ತಿಳಿಸಿದ್ದಾರೆ.

ಅಲ್ಲದೇ 234 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಪ್ರಭಾವ ಬೀರುವ ಸಾಧ್ಯತೆಗಳಿರುವುದರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಬಾರಿ ಡಿಎಂಕೆ, ಎಐಡಿಎಂಕೆ ನಡುವೆ ಹಾಗೂ ದಳಪತಿ ವಿಜಯ್ ನೇತೃತ್ವದ ಟಿವಿಕೆ ನಡುವೆ ಪೈಪೋಟಿ ಏರ್ಪಟ್ಟಿದೆ. ಎಂ.ಕೆ ಸ್ಟಾಲಿನ್ 2ನೇ ಅವಧಿಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಸಿದ್ದಾರೆ. ಇತ್ತ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ 5 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ಗುರಿ ಹೊಂದಿದ್ದಾರೆ.



