– ಸರ್ಕಾರದ ಗ್ರೇಡ್ ರೂಲ್ಸ್ಗೆ ಬ್ರೇಕ್; ಹಳೆ ಪದ್ಧತಿಯನ್ನೇ ಮುಂದುವರಿಸಲು ಕೋರ್ಟ್ ಸೂಚನೆ
ಬೆಂಗಳೂರು: ಹಿಂದಿ ಸೇರಿದಂತೆ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡುವ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ವರ್ಷ ಹಳೆ ಪದ್ಧತಿಯನ್ನೇ ಮುಂದುವರಿಸುವಂತೆ ಸೂಚನೆ ನೀಡಿದೆ.
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಸಂಬಂಧ 2025ರ ಅಕ್ಟೋಬರ್ 28ರಂದು ಸುತ್ತೋಲೆ ಹೊರಡಿಸಲಾಗಿದೆ. ಬಳಿಕ 2026ರ ಮಾರ್ಚ್ 18- ಏಪ್ರಿಲ್ 2 ರವರೆಗೆ ಪರೀಕ್ಷೆ ನಡೆದಿದೆ. ದಿನಪತ್ರಿಕೆ ವರದಿ ಆಧಾರದ ಮೇಲೆ ಅರ್ಜಿ ವಜಾ ಆಗಿದೆ ಎಂದು ವಾದಿಸಿದರು.
ಅದಕ್ಕೆ ನ್ಯಾಯಮೂರ್ತಿಗಳಾದ ಇಂದಿರೇಶ್, ನಿಮ್ಮ ಅಧಿಸೂಚನೆಯ ಉದ್ದೇಶ ಏನು? ಕಳೆದ ವರ್ಷ 1.75 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಿದ್ರು. ಎಲ್ಲರನ್ನೂ ಪಾಸ್ ಮಾಡೋದಾ ನಿಮ್ಮ ಅಧಿಸೂಚನೆ? ನಿಮ್ಮ ಉದ್ದೇಶ ಅದಾಗಿರೋದಿಲ್ಲ ಎಂದರು.
ಎಜಿ ಶಶಿಕಿರಣ್ ಶೆಟ್ಟಿ ವಾದಿಸಿ, ಫೇಲ್ ಆಗಿದ್ರೆ ಒಳ್ಳೆಯ ಶಿಕ್ಷಕರರನ್ನು ನೇಮಕ ಮಾಡಿ. ಹಿಂದಿ ಭಾಷೆ ಕಲಿಯಲಿ ಬಿಡಿ. ತೃತೀಯ ಭಾಷೆ ಒಮ್ಮೆ ಕನ್ನಡವೂ ಆಗಿರಲಿದೆ ಅಲ್ವಾ. ಇಲ್ಲಿ ಹಿಂದಿ ತೃತೀಯ ಭಾಷೆ ವಿಚಾರಕ್ಕೆ ಗ್ರೇಡಿಂಗ್ ಸಿಸ್ಟಮ್ ತರಲಾಗಿದೆ. ಹಿಂದಿ ಭಾಷೆಯಿಂದ ವಿದ್ಯಾರ್ಥಿಗಳ ಮೇಲೆ ಹೊರೆ ಜಾಸ್ತಿಯಾಗಿದೆ. ನಾವು ಬೇರೆ ಸಬ್ಜೆಕ್ಟ್ಗಳ ಬಗ್ಗೆ ಹೇಳುತ್ತಿಲ್ಲ. ತೃತೀಯ ಭಾಷೆ ಹಿಂದಿ ಬಗ್ಗೆಯಷ್ಟೆ. ಶೇ.80 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರಿಂದ ಫೇಲ್ ಆಗ್ತಿದ್ದಾರೆ ಎಂದು ತಿಳಿಸಿದರು.
ಎಲ್ಲರನ್ನೂ ಪಾಸು ಮಾಡುವ ನಿಮ್ಮ ಉದ್ದೇಶ ಸರಿ ಇರಬಹುದು. ಅದು ಕೇಳಲು ಚೆನ್ನಾಗಿದೆ. ಈ ವರ್ಷ ಹೀಗೆ ಇರಲಿ. ಮುಂದಿನ ವರ್ಷದಿಂದ ನೀವು ಇದನ್ನು ಮಾಡಬಹುದು. ಮುಂದಿನ ವರ್ಷ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಅಲ್ವಾ ಎಂದು ಹೇಳಿದ ಜಡ್ಜ್, ಅಂಕಗಳನ್ನು ನೀಡಲು ನಿರ್ದೇಶಿಸಿದರು.
ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದೆ. ಏಪ್ರಿಲ್ 10 ರಂದು ಕರಡು ನಿಯಮಗಳನ್ನು ರೂಪಿಸಲಾಗಿದೆ. ಹೀಗಾಗಿ, ತನ್ನ ಆದೇಶ ಮರುಪರಿಶೀಲಿಸಲು ಹೈಕೋರ್ಟ್ ನಿರಾಕರಿಸಿದೆ.

