ಚಾಂಬಾ: ಮಸ್ರುಂಡ್- ಹಮಲ್ ರಸ್ತೆಯಲ್ಲಿ ಬೊಲೆರೋ (Bolero) ವಾಹನವೊಂದು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದು 7 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ (Himachal Pradesh) ಚಾಂಬಾ (Chamba) ಜಿಲ್ಲೆಯಲ್ಲಿ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಬುಧವಾರ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಅಪಘಾತ ನಡೆದಿದೆ. ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಳಗಿದ್ದ ಎಲ್ಲಾ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ 3 ಮಹಿಳೆಯರು ಮತ್ತು 3 ಪುರುಷರು ಸೇರಿದ್ದಾರೆ.
ಮೃತರು ಕುತೇಡ್ ಗ್ರಾಮ ಪಂಚಾಯತ್‌ನ ಮಹಲ್ ಗ್ರಾಮದ ನಿವಾಸಿಗಳಾಗಿದ್ದು, ಕಾಕ್ರೋಧ ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದ ಬಳಿ ನಡೆದ ಭೋಜನಕ್ಕೆ ಹೋಗಿ ಮನೆಗೆ ಮರಳುತ್ತಿದ್ದರು. ಹಳ್ಳದ ಭಾಗದಲ್ಲಿ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಇದಕ್ಕೂ ಒಂದು ದಿನದ ಮುನ್ನಾ ಚಾಂಬಾ ಜಿಲ್ಲೆಯಲ್ಲಿ ಮತ್ತೊಂದು ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು.
