ರಾಮನಗರ: ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್ (Gas cylinder) ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿರುವ ಘಟನೆ ಮದ್ದೂರು-ಚನ್ನಪಟ್ಟಣ (Maddur-Channapatna) ಮಾರ್ಗಮಧ್ಯೆಯ ಶೆಟ್ಟಿಹಳ್ಳಿ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
ನಿನ್ನೆ ಬೆಳಗ್ಗೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಂಗಳಾ ಎಕ್ಸ್‌ಪ್ರೆಸ್ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿದೆ. ಖಾಲಿ ಸಿಲಿಂಡರ್, ಗ್ಯಾಸ್ ಸ್ಟವ್ ಹಾಗೂ ಬಟ್ಟೆ ತುಂಬಿದ್ದ ಪ್ಲಾಸ್ಟಿಕ್ ಚೀಲವೊಂದು ಟ್ರಾಕ್ ಬಳಿ ಪತ್ತೆಯಾಗಿದೆ. ಅನುಮಾನಾಸ್ಪದ ವಸ್ತುಗಳ ಕಂಡು ಲೋಕೋಪೈಲೆಟ್ ರೈಲು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು
ಬೇರೊಂದು ರೈಲಿನಲ್ಲಿ ಸಾಗಿಸುತ್ತಿದ್ದ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಇದ್ದ ಚೀಲ ಅಕಸ್ಮಾತ್ ಆಗಿ ಕೆಳಗೆ ಬಿದ್ದು, ಅದರ ಹಿಂದೆ ಬಂದ ಮಂಗಳಾ ಎಕ್ಸ್‌ಪ್ರೆಸ್‌ಗೆ ಚೀಲ ಸಿಲುಕಿ ಅದರಲ್ಲಿದ್ದ ವಸ್ತುಗಳು ಛಿದ್ರವಾಗಿವೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಆಕಸ್ಮಿಕವಾಗಿ ಬಿದ್ದಿರುವ ವಸ್ತುಗಳಾ ಅಥವಾ ಉದ್ದೇಶಪೂರ್ವಕವಾಗಿ ಸಿಲಿಂಡರ್ ಇಡಲಾಗಿದೆಯಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸುಮಾರು ಅರ್ಧಗಂಟೆಗಳ ಬಳಿಕ ಮತ್ತೆ ರೈಲು ಸಂಚಾರ ಆರಂಭವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

