– ಪರಮಾಣು ಕಾರ್ಯಕ್ರಮ ಸಂಪೂರ್ಣ ನಿಷೇಧಿಸಲು ಇರಾನ್ ನಕಾರ
ಇಸ್ಲಾಮಾಬಾದ್: ಪಶ್ಚಿಮ ಏಷ್ಯಾ ಯುದ್ಧವನ್ನ ಕೊನೆಗೊಳಿಸಲು ಇಸ್ಲಾಮಾಬಾದ್ನಲ್ಲಿ ಅಮೆರಿಕ – ಇರಾನ್ ನಡುವೆ ಕದನ ವಿರಾಮ ಮಾತುಕತೆಗಳು (US Iran Ceasefire Talks) ಆರಂಭವಾಗಿದೆ. ಆದಾಗ್ಯೂ ಮಾತುಕತೆಯ ಸ್ವರೂಪ ಇನ್ನೂ ಸ್ಪಷ್ಟವಾಗಿಲ್ಲ.
ಸಂಸದೀಯ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ನೇತೃತ್ವದ ಇರಾನಿನ ನಿಯೋಗವು, ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಶ್ವೇತಭವನದ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಅಳಿಯ ಜೇರೆಡ್ ಕುಶ್ನರ್ ಸೇರಿದಂತೆ ತಮ್ಮ ಅಮೆರಿಕದ ಸಹವರ್ತಿಗಳೊಂದಿಗೆ ಮಾತುಕತೆ ಆರಂಭಿಸಿದೆ. ಈವರೆಗೆ 2 ಗಂಟೆಗೂ ಹೆಚ್ಚುಕಾಲ ನಡೆದ ಮಾತುಕತೆಯಲ್ಲಿ ಹಲವು ವಿಚಾರಗಳನ್ನ ಪ್ರಸ್ತಾಪಿಸಲಾಗಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಕಚೇರಿಯು ಶಾಂತಿ ಮಾತುಕತೆಗಳು ಪ್ರಾರಂಭವಾಗಿವೆ ಎಂದು ತಿಳಿಸಿದೆ. ಆರಂಭಿಕ ಮಾತುಕತೆ ಪ್ರಗತಿ ಕಂಡಿದ್ದರಿಂದ ಹಾಗೂ ಲೆಬನಾನ್ನ ದಕ್ಷಿಣ ಬೈರೂತ್ನಲ್ಲಿ ಜಿಯೋನಿಸ್ಟ್ ಆಡಳಿತವು ನಡೆಸುತ್ತಿರುವ ದಾಳಿಗಳು ಕಡಿಮೆಯಾಗಿದ್ದರಿಂದ ಮಾತುಕತೆ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಇರಾನ್ನ ಕೆಲ ಬೇಡಿಕೆಗಳಿಗೆ ತಾತ್ವಿಕ ಒಪ್ಪಿಗೆ
ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಮತ್ತು ಜಾಗತಿಕ ಆರ್ಥಿಕತೆಗೆ ಪೆಟ್ಟು ನೀಡಿದ ಯುದ್ಧವನ್ನ ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ನ ಉನ್ನತ ಅಧಿಕಾರಿಗಳು ಇಸ್ಲಾಮಾಬಾದ್ನಲ್ಲಿ ಅಧಿಕೃತ ಮಾತುಕತೆ ಆರಂಭಿಸಿವೆ. ಪಾಕಿಸ್ತಾನ ಇದರ ಮಧ್ಯಸ್ಥಿಕೆ ವಹಿಸಿದೆ. ಆರಂಭದಲ್ಲಿ ಫ್ರೀಜ್ ಮಾಡಿದ ಇರಾನ್ನ ಕೆಲ ಸಂಪತ್ತನ್ನ ಹಂತ-ಹಂತವಾಗಿ ಬಿಡುಗಡೆಗೊಳಿಸುವುದು ಸೇರಿದಂತೆ ಕೆಲವು ಬೇಡಿಕೆಗಳಿಗೆ ಅಮೆರಿಕ ತಾತ್ವಿಕ ಒಪ್ಪಿಗೆ ನೀಡಿದೆ. ಇಸ್ರೇಲ್ ಕದನ ವಿರಾಮ ಅನುಸರಿಸುವುದಾಗಿ ಅಮೆರಿಕ ನಿಯೋಗ ಇರಾನ್ಗೆ ಭರವಸೆ ನೀಡಿದೆ ಎಂದು ವರದಿಗಳು ತಿಳಿಸಿವೆ.
ಈ ಮಧ್ಯೆ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನ ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಹಾರ್ಮುಜ್ ಜಲಸಂಧಿಯನ್ನ ಮತ್ತೆ ತೆರೆಯಬೇಕು ಎಂದು ಒತ್ತಾಯಿಸಿದೆ. ಆದ್ರೆ ಇದಕ್ಕೆ ಇರಾನ್ ಒಪ್ಪಿಲ್ಲ ಎಂದು ತಿಳಿದುಬಂದಿದೆ.

