-ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚಿದ ಆರ್ಥಿಕ ಹೊರೆ
ವಿದೇಶದಲ್ಲಿ ಉನ್ನತ ಶಿಕ್ಷಣ (Higher Education) ಪಡೆಯುವ ಕನಸು ಕಾಣುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ (Indian Students) 2026ನೇ ವರ್ಷ ಹೊಸ ಸವಾಲುಗಳನ್ನು ತಂದಿದೆ. ವಿಶ್ವದ ಪ್ರಮುಖ ಶಿಕ್ಷಣ ತಾಣಗಳಾಗಿರುವ ಕೆನಡಾ, ಅಮೆರಿಕ ಮತ್ತು ಬ್ರಿಟನ್ ದೇಶಗಳು ವಿದ್ಯಾರ್ಥಿ ವೀಸಾ, ಪ್ರವೇಶಾತಿ ಮಿತಿ, ಹಣಕಾಸು ಅರ್ಹತೆ ಹಾಗೂ ಟ್ಯೂಷನ್ ಶುಲ್ಕಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿವೆ.
ಇದರ ಪರಿಣಾಮವಾಗಿ ವಿದೇಶದಲ್ಲಿ ವ್ಯಾಸಂಗ ಮಾಡುವ ವೆಚ್ಚ ಗಣನೀಯವಾಗಿ ಏರಿಕೆಯಾಗಲಿದ್ದು, ವಿದ್ಯಾರ್ಥಿಗಳು ಹಿಂದಿನಿಗಿಂತ ಹೆಚ್ಚು ಹಣಕಾಸಿನ ಸಿದ್ಧತೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ರೆ ಕೆನಡಾ, ಅಮೆರಿಕ, ಬ್ರಿಟನ್‌ನಲ್ಲಿ ಉನ್ನತ ಶಿಕ್ಷಣ ದುಬಾರಿಯಾಗಿರುವುದೇಕೆ? ಹೊಸ ವೀಸಾ ನಿಯಮಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ವಿದೇಶಿ ಶಿಕ್ಷಣ ದುಬಾರಿ:
ಪ್ರತಿ ವರ್ಷ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಮತ್ತು ಜಾಗತಿಕ ಉದ್ಯೋಗಾವಕಾಶಗಳ ಕನಸಿನೊಂದಿಗೆ ವಿದೇಶಿ ವಿಶ್ವವಿದ್ಯಾಲಯಗಳತ್ತ ಮುಖ ಮಾಡುತ್ತಾರೆ. ಯಾವ ದೇಶದಲ್ಲಿ ಓದಬೇಕು, ಯಾವ ಕೋರ್ಸ್ ಆಯ್ಕೆ ಮಾಡಬೇಕು, ಶಿಕ್ಷಣ ವೆಚ್ಚ ಎಷ್ಟು, ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ಸಿಗುತ್ತದೆ ಎಂಬ ಲೆಕ್ಕಾಚಾರ ಮಾಡುವುದು ಸಾಮಾನ್ಯ. ಆದರೆ ಈಗ ಉತ್ತಮ ಅಂಕಗಳು ಮತ್ತು ವಿಶ್ವವಿದ್ಯಾಲಯದ ಪ್ರವೇಶ ಪತ್ರವೊಂದೇ ಸಾಕಾಗುವುದಿಲ್ಲ. ಬ್ಯಾಂಕ್ ಖಾತೆಯಲ್ಲಿರುವ ಹಣಕಾಸಿನ ಸಾಮರ್ಥ್ಯ, ಕಟ್ಟುನಿಟ್ಟಿನ ವೀಸಾ ಪರಿಶೀಲನೆ ಹಾಗೂ ಹೊಸ ವಲಸೆ ನಿಯಮಗಳನ್ನೂ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.
ಕಠಿಣ ನಿಯಮ ಏಕೆ?
ಕೊರೊನಾ ಬಳಿಕ ಹಲವು ದೇಶಗಳಲ್ಲಿ ವಸತಿ ಸಮಸ್ಯೆ, ಉದ್ಯೋಗ ಮಾರುಕಟ್ಟೆಯ ಒತ್ತಡ ಮತ್ತು ಮೂಲಸೌಕರ್ಯಗಳ ಮೇಲಿನ ಭಾರ ಹೆಚ್ಚಾಗಿದೆ. ಇದರ ಪರಿಣಾಮವಾಗಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಲು ಹಲವಾರು ರಾಷ್ಟ್ರಗಳು ಕ್ರಮ ಕೈಗೊಂಡಿವೆ. ಜೊತೆಗೆ, ವಿದ್ಯಾರ್ಥಿಗಳು ಅಧ್ಯಯನ ಅವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಹಣಕಾಸಿನ ಸ್ಥಿರತೆಯನ್ನು ಕಡ್ಡಾಯವಾಗಿ ಸಾಬೀತುಪಡಿಸುವ ನಿಯಮಗಳನ್ನು ಜಾರಿಗೊಳಿಸಿವೆ.
ಕೆನಡಾದಲ್ಲಿ ವಿದೇಶಿ ವಿದ್ಯಾಥಿಗಳಿಗೆ ಕಡಿವಾಣ:
ಭಾರತೀಯ ವಿದ್ಯಾರ್ಥಿಗಳ ಪ್ರಮುಖ ಆಯ್ಕೆಯಾಗಿರುವ ಕೆನಡಾ ಇದೀಗ ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಕಡಿವಾಣ ಹಾಕಿದೆ. ದೇಶದ ವಸತಿ ಮತ್ತು ಮೂಲಸೌಕರ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು 2026ರಲ್ಲಿ ಒಟ್ಟು 4.08 ಲಕ್ಷ ಸ್ಟಡಿ ಪರ್ಮಿಟ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದು 2025ರಿಗಿಂತ ಸುಮಾರು 7 ಶೇಕಡಾ ಕಡಿಮೆಯಾಗಿದೆ. ಈ ಪೈಕಿ ಕೇವಲ 1.55 ಲಕ್ಷ ಹೊಸ ವಿದ್ಯಾರ್ಥಿಗಳಿಗೆ ಮಾತ್ರ ವೀಸಾ ನೀಡಲಾಗುತ್ತದೆ. ಉಳಿದ 2.53 ಲಕ್ಷ ಪರ್ಮಿಟ್‌ಗಳು ಈಗಾಗಲೇ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ವೀಸಾ ವಿಸ್ತರಣೆಗೆ ಮೀಸಲಾಗಿವೆ.
ವಿದೇಶದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ ಸುಮಾರು 35 ರಿಂದ 40 ಶೇಕಡಾ ಮಂದಿ ಕೆನಡಾದಲ್ಲೇ ವ್ಯಾಸಂಗ ಮಾಡುತ್ತಿರುವುದರಿಂದ ಈ ನಿರ್ಧಾರ ಭಾರತೀಯ ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರ ಜೊತೆಗೆ, ವಿದ್ಯಾರ್ಥಿ ವೀಸಾಕ್ಕೆ ಅರ್ಜಿ ಸಲ್ಲಿಸುವವರು ತಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 22,895 ಕೆನಡಾ ಡಾಲರ್‌ಗಳು, ಅಂದರೆ ಸುಮಾರು 16 ಲಕ್ಷ ರೂಪಾಯಿಗಳಷ್ಟು ಹಣವಿರುವುದನ್ನು ಸಾಬೀತುಪಡಿಸಬೇಕಾಗಿದೆ.
ಅಮೆರಿಕದಲ್ಲಿ ಓದು ಮತ್ತಷ್ಟು ದುಬಾರಿ:
ಅಮೆರಿಕದ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಾಗಿ ಗುರುತಿಸಿಕೊಂಡಿದ್ದರೂ, ಅಲ್ಲಿ ಶಿಕ್ಷಣ ಪಡೆಯುವುದು ಈಗ ಮತ್ತಷ್ಟು ದುಬಾರಿಯಾಗುತ್ತಿದೆ. ಹೊಸ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಒಂದು ವರ್ಷದ ಶಿಕ್ಷಣ ಮತ್ತು ಜೀವನ ನಿರ್ವಹಣಾ ವೆಚ್ಚಕ್ಕಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚು ಹಣಕಾಸಿನ ಸಾಮರ್ಥ್ಯ ಹೊಂದಿರುವುದನ್ನು ತೋರಿಸಬೇಕಾಗಿದೆ. ಉದಾಹರಣೆಗೆ, ಒಂದು ವರ್ಷದ ವೆಚ್ಚ 20 ಲಕ್ಷ ರೂಪಾಯಿಗಳಾಗಿದ್ದರೆ, ಬ್ಯಾಂಕ್ ಖಾತೆಯಲ್ಲಿ ಸುಮಾರು 50 ಲಕ್ಷ ರೂಪಾಯಿವರೆಗೆ ಹಣಕಾಸಿನ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು.
ಇದರ ಜೊತೆಗೆ ವಿದ್ಯಾರ್ಥಿ ವೀಸಾ ಪರಿಶೀಲನೆ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದ್ದು, ವೀಸಾ ಶುಲ್ಕದಲ್ಲಿಯೂ ಹೆಚ್ಚಳವಾಗಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ (STEM) ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕೆಲವು ಸೌಲಭ್ಯಗಳು ಮುಂದುವರಿದಿವೆ. ವಿಶೇಷವಾಗಿ OPT (Optional Practical Training) ಯೋಜನೆಯ ಮೂಲಕ ಕೋರ್ಸ್ ಪೂರ್ಣಗೊಂಡ ನಂತರ ಅಮೆರಿಕದಲ್ಲೇ ಉದ್ಯೋಗ ಪಡೆಯಲು ಅವಕಾಶಗಳು ಲಭ್ಯವಿವೆ. ಪ್ರಸ್ತುತ ಅಮೆರಿಕದಲ್ಲಿ 3.3 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಬ್ರಿಟನ್‌ನಲ್ಲಿ ಡಿಜಿಟಲ್ ಇ-ವೀಸಾ:
ಇನ್ನು ಬ್ರಿಟನ್ ತನ್ನ ವೀಸಾ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್‌ಗೊಳಿಸುವತ್ತ ಹೆಜ್ಜೆ ಇಟ್ಟಿದ್ದು, ಡಿಜಿಟಲ್ ಇ-ವೀಸಾ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಮೂಲಕ ಭೌತಿಕ ದಾಖಲೆಗಳ ಬಳಕೆ ಕಡಿಮೆಯಾಗಲಿದ್ದು, ವೀಸಾ ನೇರವಾಗಿ ಪಾಸ್‌ಪೋರ್ಟ್‌ಗೆ ಲಿಂಕ್ ಆಗಲಿದೆ. ಹೊಸ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಕನಿಷ್ಠ ಒಂಬತ್ತು ತಿಂಗಳ ಶಿಕ್ಷಣ ಮತ್ತು ಜೀವನ ನಿರ್ವಹಣಾ ವೆಚ್ಚಕ್ಕೆ ಸಾಕಾಗುವಷ್ಟು ಹಣವನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಹೊಂದಿರುವುದನ್ನು ತೋರಿಸಬೇಕು. ಇದರ ಮೌಲ್ಯ ಸುಮಾರು 45 ಲಕ್ಷ ರೂಪಾಯಿಗಳಷ್ಟಾಗಬಹುದು.
ಇದಲ್ಲದೆ, ಉತ್ತಮ ಮಟ್ಟದ ಇಂಗ್ಲಿಷ್ ಭಾಷಾ ಕೌಶಲ್ಯವನ್ನು ಕಡ್ಡಾಯಗೊಳಿಸಲಾಗಿದ್ದು, ಟ್ಯೂಷನ್ ಶುಲ್ಕದಲ್ಲಿಯೂ ಏರಿಕೆ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಅಂಶವೆಂದರೆ, ಕೋರ್ಸ್ ಪೂರ್ಣಗೊಂಡ ಬಳಿಕ ಎರಡು ವರ್ಷಗಳವರೆಗೆ ಬ್ರಿಟನ್‌ನಲ್ಲೇ ಉಳಿದು ಉದ್ಯೋಗ ಹುಡುಕುವ ಅವಕಾಶವನ್ನು ಸರ್ಕಾರ ಮುಂದುವರಿಸಿದೆ.
ಶಿಕ್ಷಣ ತಜ್ಞರ ಪ್ರಕಾರ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಯೋಜಿಸುತ್ತಿರುವ ವಿದ್ಯಾರ್ಥಿಗಳು ಕನಿಷ್ಠ ಒಂದು ವರ್ಷದ ಮುಂಚಿತವಾಗಿ ಹಣಕಾಸು ಯೋಜನೆ ರೂಪಿಸಬೇಕು. ವಿದ್ಯಾರ್ಥಿವೇತನಗಳು, ಶಿಕ್ಷಣ ಸಾಲ, ಶುಲ್ಕ ವಿನಾಯಿತಿಗಳು ಹಾಗೂ ವಸತಿ ವೆಚ್ಚಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸುವುದು ಅಗತ್ಯವಾಗಿದೆ. ವಿಶೇಷವಾಗಿ STEM ಕ್ಷೇತ್ರಗಳಂತಹ ಹೆಚ್ಚಿನ ಉದ್ಯೋಗಾವಕಾಶಗಳಿರುವ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಅಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡುವುದು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಬಹುದು.
ಒಟ್ಟಿನಲ್ಲಿ, ಗುಣಮಟ್ಟದ ಶಿಕ್ಷಣ ಮತ್ತು ಜಾಗತಿಕ ಉದ್ಯೋಗಾವಕಾಶಗಳ ಆಕರ್ಷಣೆಯ ನಡುವೆಯೇ ವಿದೇಶಿ ಶಿಕ್ಷಣದ ದಾರಿ ಈಗ ಮತ್ತಷ್ಟು ಸವಾಲಿನದ್ದಾಗಿದೆ. ಹೆಚ್ಚುತ್ತಿರುವ ಶಿಕ್ಷಣ ವೆಚ್ಚ, ಕಠಿಣ ವೀಸಾ ನಿಯಮಗಳು ಹಾಗೂ ಹಣಕಾಸಿನ ಅರ್ಹತೆಗಳು ಭಾರತೀಯ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಹೊರೆ ಹಾಕುತ್ತಿದ್ದರೂ, ಸೂಕ್ತ ಯೋಜನೆ ಮತ್ತು ಸಿದ್ಧತೆಯೊಂದಿಗೆ ವಿದೇಶಿ ಶಿಕ್ಷಣದ ಕನಸನ್ನು ಸಾಕಾರಗೊಳಿಸಲು ಇನ್ನೂ ಅವಕಾಶಗಳಿವೆ.
