ದಾವಣಗೆರೆ: ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ (Davanagere South) ನಡೆಯುತ್ತಿರುವ ಉಪಚುನಾವಣಾ (By Election) ಕಣದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಕಾಂಗ್ರೆಸ್ (Congress) ಪಾಳಯಕ್ಕೆ ಸದ್ಯಕ್ಕೆ ನಿಟ್ಟುಸಿರು ಬಿಡುವ ಸುದ್ದಿ ಸಿಕ್ಕಿದೆ ಎನ್ನುವಷ್ಟರಲ್ಲೇ ಹೊಸ ತಲೆನೋವು ಶುರುವಾಗಿದೆ.
ಬಂಡಾಯದ ಬಾವುಟ ಹಾರಿಸಿದ್ದ ಸಾಧಿಕ್ ಪೈಲ್ವಾನ್ (Sadiq Pailwan) ಕೊನೆಗೂ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ಗೆ ಬೆಂಬಲ ಘೋಷಿಸಿದ್ದಾರೆ. ಆದರೆ, ಈ ನಿರ್ಧಾರ ಮುಸ್ಲಿಂ ಸಮುದಾಯದ ಯುವಕರ ಕೆಂಗಣ್ಣಿಗೆ ಗುರಿಯಾಗಿದೆ. ನಮ್ಮನ್ನು ನಂಬಿಸಿ ಕೈಕೊಟ್ಟರಾ ಪೈಲ್ವಾನ್ ಎಂದು ಬೀದಿಗಿಳಿದು ಯುವಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿ ಕಾಂಗ್ರೆಸ್ ಜೊತೆ ಪೈಲ್ವಾನ್ಗೂ ಮಣ್ಣು ಮುಕ್ಕಿಸುತ್ತೇವೆ ಎನ್ನುವ ಕೂಗು ಕೇಳಿ ಬಂದಿದೆ. ಇದನ್ನೂ ಓದಿ: ನಮ್ಮ ಕ್ಷೇತ್ರದಲ್ಲಿ ಸಮರ್ಥ್ರನ್ನು ಗೆಲ್ಲಿಸುತ್ತೇವೆ – ಉಪಕದನದಿಂದ ಹಿಂದೆ ಸರಿದ ಪೈಲ್ವಾನ್
ದಕ್ಷಿಣ ಕ್ಷೇತ್ರದಲ್ಲಿ ಕೈ ನಾಯಕರಿಗೆ ನಿದ್ದೆಗೆಡಿಸಿದ್ದ ಸಾಧಿಕ್ ಪೈಲ್ವಾನ್ ಅಬ್ಬರಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಮುಸ್ಲಿಂ ಸಮುದಾಯದ ಶಾಸಕರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂಧಾನ ಯಶಸ್ವಿಯಾಗಿದ್ದು, ಪೈಲ್ವಾನ್ ಕಣದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವುದಾಗಿ ಘೋಷಿಸಿರುವ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಸಾಬೀತುಪಡಿಸಲು ಮುಂದಾಗಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಡುವ ಮೊದಲೇ ಕ್ಷೇತ್ರದ ಚಿತ್ರಣ ಬದಲಾಗಿದೆ.
ಸಾಧಿಕ್ ಪೈಲ್ವಾನ್ ನಿರ್ಧಾರ ಹೊರಬೀಳುತ್ತಿದ್ದಂತೆ ಮುಸ್ಲಿಂ ಸಮುದಾಯದ ಯುವಕರು ಕೆರಳಿ ಕೆಂಡವಾಗಿದ್ದಾರೆ. ಕ್ಷೇತ್ರದ ಬದಲಾವಣೆಗಾಗಿ ಪೈಲ್ವಾನ್ ಪರ ಬ್ಯಾಟಿಂಗ್ ಮಾಡಿದ್ದ ಯುವ ಪಡೆ, ಈಗ ಅವರ ವಿರುದ್ಧವೇ ತಿರುಗಿಬಿದ್ದಿದೆ. ನಮ್ಮ ಆಶೋತ್ತರಗಳನ್ನು ಬಲಿಕೊಟ್ಟು ರಾಜಿಯಾದ್ರಾ, ಪೈಲ್ವಾನ್ ಅವರು ತೆಗೆದುಕೊಂಡು ಈ ನಿರ್ಣಯ ಅಹಿಂದ ಸಮುದಾಯಕ್ಕೆ ಮಾಡಿದ ಅಪಮಾನ. ಈಗ ಚುನಾವಣೆ ಕಣ ಇನ್ನೂ ರಂಗೇರಲಿದ್ದು, ತಕ್ಕ ಪಾಠವನ್ನು ಕಲಿಸುತ್ತೇವೆ. ಅವರು ಕಣದಿಂದ ಹಿಂದೆ ಸರಿದಿರಬಹುದು, ಅವರ ಹಿಂದೆ ಇಡೀ ಸಮಾಜ ಹೋಗುವುದಿಲ್ಲ ಇನ್ನೂಳಿದ ಪಕ್ಷೇತರ ಅಭ್ಯರ್ಥಿಗಳು ಇದ್ದೇವೆ ಎಲ್ಲಾರೂ ಸೇರಿ ತಕ್ಕ ಉತ್ತರ ನೀಡುತ್ತೇವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ. ಅದರಲ್ಲೂ ನಿರ್ಣಯಕರಾದ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು ಕೇಳಿ ಬಂದರೂ ನೀಡಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಈ ಸಾಧಿಕ್ ಪೈಲ್ವಾನ್ರಿಗೆ ಬೆಂಬಲವನ್ನು ಸೂಚಿಸಿದ್ದರು. ಆದರೆ ಸಾಧಿಕ್ ಕಣದಿಂದ ಹಿಂದೆ ಸರಿದಿದ್ದರಿಂದ ಮುಸ್ಲಿಂ ಯುವಕರು ಅಸಮಾಧಾನಗೊಂಡಿದ್ದಾರೆ. ಸಮುದಾಯದ ನಾಯಕತ್ವಕ್ಕಾಗಿ ಹೋರಾಡುತ್ತೇವೆ ಎಂದು ಹೇಳಿ ಈಗ ಮೌನಕ್ಕೆ ಶರಣಾಗಿರುವುದು ಯುವಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆಳವಣಿಗೆ ಈಗ ಕಾಂಗ್ರೆಸ್ಗೆ ಲಾಭವಾಗುವ ಬದಲು ಉಲ್ಟಾ ಹೊಡೆಯುವ ಆತಂಕ ಮೂಡಿಸಿದೆ. ಇದನ್ನೂ ಓದಿ: ಶಿವಶಂಕರಪ್ಪಗಿಂತ ಹೆಚ್ಚು ಮತಗಳ ಅಂತರದಿಂದ ಸಮರ್ಥ್ ಗೆಲುವು – ಡಿಕೆಶಿ

