ಮುಂಬೈ: ಕೇಂದ್ರ ಸರ್ಕಾರ ಮತ್ತೆ ವಿಂಡ್‌ಫಾಲ್ ತೆರಿಗೆ (Windfall Tax) ಹೇರಿದ್ದರಿಂದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಕಂಪನಿಯ ಮಾರುಕಟ್ಟೆ ಮೌಲ್ಯ ಇಂದು ಒಂದೇ ದಿನದಲ್ಲಿ 87 ಸಾವಿರ ಕೋಟಿ ರೂ. ಕುಸಿದಿದೆ.
ಭಾರತದಿಂದ ವಿದೇಶಗಳಿಗೆ ಸಂಸ್ಕರಿಸಿದ ತೈಲ ಮಾರಾಟವನ್ನು ತಡೆಯಲು ಕೇಂದ್ರ ಸರ್ಕಾರ ಮತ್ತೆ ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಲು ಆರಂಭಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಡೀಸೆಲ್ ರಫ್ತಿನ ಮೇಲೆ ಲೀಟರ್‌ಗೆ 21.5 ರೂ. ಮತ್ತು ವಿಮಾನಗಳಿಗೆ ಬಳಸುವ ಎಟಿಎಫ್ ಇಂಧನದ ಮೇಲೆ ಲೀಟರ್‌ಗೆ 29.5 ರೂ.ಗಳಷ್ಟು ಸುಂಕವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.
In view of the West Asia crisis, the central excise duty on petrol and diesel for domestic consumption has been reduced by ₹10 per litre each. This will provide protection to consumers from rise in prices. Hon. PM @narendramodi has always ensured that citizens are protected from…
— Nirmala Sitharaman (@nsitharaman) March 27, 2026
ಬೆಳಗ್ಗೆ 9:42ಕ್ಕೆ ಸೀತಾರಾಮನ್ ಎಕ್ಸ್‌ನಲ್ಲಿ ಈ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ರಿಲಯನ್ಸ್ ಷೇರುಗಳ ಮೌಲ್ಯ ಭಾರೀ ಕುಸಿತ ಕಾಣಲು ಆರಂಭವಾಯಿತು. ಬುಧವಾರ ಆರ್‌ಐಎಲ್ ಒಂದು ಷೇರು 1,413.10 ರೂ.ನಲ್ಲಿ ವ್ಯವಹಾರ ಮುಗಿಸಿದ್ದರೆ ಇಂದು 65 ರೂ. ಕುಸಿತಗೊಂಡು 1,348.10 ರೂ.ನಲ್ಲಿ ವ್ಯವಹಾರ ಕೊನೆಗೊಳಿಸಿತು. ಇದನ್ನೂ ಓದಿ: ಗುಜರಾತ್‌ಗೆ ಬಂತು 47,600 ಮೆಟ್ರಿಕ್ ಟನ್ LPG ಹೊತ್ತ `ಜಗ್ ವಸಂತ್’ ಹಡಗು
18.24 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತಿನ ಜಾಮ್‌ನಗರದಲ್ಲಿ ವಿಶ್ವ ಅತಿ ದೊಡ್ಡ ಸಂಸ್ಕರಣಾಗಾರವನ್ನು ತೆರೆದಿದೆ. ಜಾಮ್‌ನಗರದಲ್ಲಿರುವ ಅದರ ಎರಡು ಸಂಸ್ಕರಣಾಗಾರಗಳು ಸುಮಾರು 5 ಮಿಲಿಯನ್ ಟನ್ ಏರ್ ಟರ್ಬೈನ್ ಇಂಧನವನ್ನು ಉತ್ಪಾದಿಸುತ್ತವೆ, ಅದರಲ್ಲಿ ಹೆಚ್ಚಿನ ಭಾಗವನ್ನು ರಫ್ತು ಮಾಡಲಾಗುತ್ತದೆ. ಒಟ್ಟಾರೆಯಾಗಿ ಭಾರತದ ಒಟ್ಟು ಎಟಿಎಫ್‌ನ ನಾಲ್ಕನೇ ಒಂದು ಭಾಗವನ್ನು ಉತ್ಪಾದಿಸುತ್ತದೆ.
ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ಭಾರತ ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿಸಿತ್ತು. ತೈಲ ಕಂಪನಿಗಳು ಸಂಸ್ಕರಿಸಿ ವಿದೇಶಗಳಿಗೆ ಮಾರುತ್ತಿದ್ದವು. ಈ ವಿಚಾರ ಮನಗಂಡ ಕೇಂದ್ರ ಸರ್ಕಾರ ವಿದೇಶಗಳಿಗೆ ರಫ್ತು ಮಾಡುವ ತೈಲಗಳಿಗೆ ವಿಂಡ್‌ಫಾಲ್ ತೆರಿಗೆ(Windfall Tax) ಹೆಚ್ಚಿತ್ತು. ಈ ತೆರಿಗೆಯಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುತ್ತಿತ್ತು. 2024 ರಲ್ಲಿ ಕೇಂದ್ರ ಸರ್ಕಾರ ವಿಂಡ್‌ಫಾಲ್ ತೆರಿಗೆಯನ್ನು ರದ್ದು ಮಾಡಿತ್ತು.

