– ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣ ಗ್ಯಾರಂಟಿಗೆ ಬಳಕೆ
– ಕೇಂದ್ರದ ಅನುದಾನ ಕುರಿತು ಬಜೆಟ್‌ನಲ್ಲಿ ತಪ್ಪು ಮಾಹಿತಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಸಾಲ ತೀರಿಸಲು ಸಾಲ ಮಾಡುವ ಪರಿಸ್ಥಿತಿಗೆ ಕರ್ನಾಟಕವನ್ನು ತಂದಿದ್ದಾರೆ. ಇದು ಕ್ರೆಡಿಟ್ ಬಜೆಟ್ ಆಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಟೀಕೆ ಮಾಡಿದರು.
ವಿಧಾನಸಭೆಯಲ್ಲಿ ಬಜೆಟ್ (Budget 2026) ಮೇಲಿನ ಚರ್ಚೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಆಯವ್ಯಯ, ʻಕ್ರೆಡಿಟ್ ಬಜೆಟ್ʼ ಆಗಿದೆ ಎಂದು ಈಗಾಗಲೇ ಹೇಳಿದ್ದೇನೆ. ಮುಖ್ಯಮಂತ್ರಿಯವರು ಹೇಳಿದಂತೆಯೇ ನಾನು ಡೀಪ್ ಆಗಿಯೇ ಅಧ್ಯಯನ ಮಾಡಿದ್ದು, ಎಷ್ಟೇ ಡೀಪ್ ಹೋದರೂ ಬಜೆಟ್‌ನಲ್ಲಿ ಸಾಲವೇ ಕಂಡುಬರುತ್ತಿದೆ. ನಾನು ಸಾಲರಾಮಯ್ಯ ಎಂದು ಹೇಳಿದರೆ ಅವರಿಗೆ ಮುಜುಗರವಾಗಬಹುದು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಹೆಚ್ಚುವರಿಯಾಗಿ ಉಳಿತಾಯದ ಬಜೆಟ್ ಮಂಡಿಸಿದ್ದರು. ನಂತರ ಬಂದ ಸಿದ್ದರಾಮಯ್ಯನವರು ವಿತ್ತೀಯ ಕೊರತೆಯ ಬಜೆಟ್ ಮಂಡಿಸಿದ್ದು ಏಕೆ? ಎಂದು ಪ್ರಶ್ನಿಸಿದರು.

ಅಭಿವೃದ್ಧಿಗಾಗಿ ಸಾಲ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 1.32 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. 84,000 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ನೀಡಿದರೆ, ಉಳಿದ ಹಣ ಗ್ಯಾರಂಟಿಗೆ ಖರ್ಚಾಗುತ್ತದೆ. ಸಿದ್ದರಾಮಯ್ಯನವರು ತಮಗೆ ಬೇಕಾದಂತೆ ಎಲ್ಲವನ್ನೂ ಬದಲಿಸುತ್ತಾರೆ. ಗ್ಯಾರಂಟಿಗಳಿಗೆ ನಿಗದಿಪಡಿಸಿದ ಸಂಪೂರ್ಣ ಹಣ ಕೊಟ್ಟಿದ್ದೇನೆ ಎಂದು ಹೇಳಿದ್ದರೂ, ಗೃಹಲಕ್ಷ್ಮಿಯ 5,000 ಕೋಟಿ ರೂ. ಎಲ್ಲಿಗೆ ಹೋಗಿದೆ ಎಂದು ಗೊತ್ತಿಲ್ಲ. 1.26 ಲಕ್ಷ ಮಹಿಳೆಯರಿಗೆ ಆ ಹಣ ತಲುಪಿಲ್ಲ. ಆಹಾರ ಇಲಾಖೆಯಲ್ಲಿ ಅನ್ನಭಾಗ್ಯಕ್ಕೆ 2025 ರಲ್ಲಿ 657 ಕೋಟಿ ರೂ. ಕೊಟ್ಟಿಲ್ಲ ಎಂದರು.
ಯಾವುದೇ ಸರ್ಕಾರ ಬಜೆಟ್ ಮಂಡಿಸಿದಾಗಲೂ ಮರುದಿನ ಪತ್ರಿಕೆಗಳಲ್ಲಿ ಉತ್ತಮವಾಗಿ ವರದಿ ಬರುತ್ತದೆ. ಇದನ್ನೇ ಸರ್ಕಾರದ ಕಾರ್ಯವೈಖರಿಯ ಮಾನದಂಡ ಮಾಡಿಕೊಳ್ಳಬಾರದು. ಪಿಆರ್‌ಎಸ್ ಸರ್ವೆ ಪ್ರಕಾರ, ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ದೆಹಲಿ ಸರ್ಕಾರ 14.5% ನೀಡಿದರೆ, ಕರ್ನಾಟಕ 4.9% ನೀಡುತ್ತಿದೆ. ರಾಷ್ಟ್ರೀಯ ಪ್ರಮಾಣ ಸರಾಸರಿ 8.3% ಇದೆ. ಗ್ರಾಮೀಣಾಭಿವೃದ್ಧಿಗೆ ಕರ್ನಾಟಕ 2.9% ಖರ್ಚು ಮಾಡುತ್ತಿದ್ದರೆ, ಒಂದು ರಾಜ್ಯದಲ್ಲಿ 12.4% ಖರ್ಚು ಮಾಡಲಾಗುತ್ತಿದೆ. ಹೀಗೆ ಪ್ರತಿ ಕ್ಷೇತ್ರದಲ್ಲಿ ಕರ್ನಾಟಕ ಹಿಂದುಳಿದಿದೆ. ಸಿಎಂ ಸಿದ್ದರಾಮಯ್ಯನವರ ಪ್ರಕಾರ ಎಲ್ಲದರಲ್ಲೂ ನಾವೇ ಮೊದಲು. ಆದರೆ ಸಾಲ ಮಾಡುವುದರಲ್ಲೂ ನಾವೇ ಮೊದಲು ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಮುಂದಿನ ವರ್ಷವೂ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಬೇಕಾಗಬಹುದು. ಸಾಲ ತೀರಿಸಲು ಮತ್ತೆ ಸಾಲ ಮಾಡಬೇಕಾದ ಸ್ಥಿತಿ ಬಂದಿದೆ ಎಂದರು.
ಇಲಾಖೆಗಳು ಹಾಗೂ ನಿಗಮಗಳಿಗೆ ಬಜೆಟ್‌ನಲ್ಲಿ ಹಣ ಕಡಿತವಾಗಿದೆ. ದೇವರಾಜ ಅರಸು ನಿಗಮಕ್ಕೆ 73% ಕಡಿತವಾಗಿದೆ. ಬಿಜೆಪಿ ಸರ್ಕಾರ 190 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ ಈ ಬಾರಿ 50 ಕೋಟಿ ರೂ. ನೀಡಿದೆ. ಮರಾಠ ಅಭಿವೃದ್ಧಿ ನಿಗಮಕ್ಕೆ 75% (25 ಕೋಟಿ ರೂ.) ಕಡಿತವಾಗಿದೆ. ಹೀಗೆ ಎಲ್ಲ ಕಡೆ ಹಣ ಕಡಿತ ಮಾಡಿ, ಬಸವಣ್ಣ, ಅಂಬೇಡ್ಕರ್, ಬುದ್ಧ ಮೊದಲಾದವರ ಹೆಸರು ಉಲ್ಲೇಖಿಸಿದರೆ ಏನು ಪ್ರಯೋಜನ? ಪ್ರತಿ ವರ್ಷ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಲಾಗುತ್ತಿದೆ. ಅರಣ್ಯದಲ್ಲಿ ಅತಿಥಿ ಗೃಹ ಕಟ್ಟಲು ಈ ಹಣ ಬಳಕೆಯಾಗಿದೆ ಎಂದು ದೂರಿದರು.
ಬಾಕಿ ಹಣ
ಗುತ್ತಿಗೆದಾರರಿಗೆ 38,000 ಕೋಟಿ ರೂ., ಎಸ್ಕಾಂಗಳಿಗೆ 12,500 ಕೋಟಿ ರೂ., ಸಾರಿಗೆ ಇಲಾಖೆಗೆ ಶಕ್ತಿ ಯೋಜನೆಗಾಗಿ 4,850 ಕೋಟಿ ರೂ., ಬಿಬಿಎಂಪಿ ಗುತ್ತಿಗೆದಾರರಿಗೆ 2,500 ಕೋಟಿ ರೂ., 26 ಸಾವಿರ ಅನಾಥ ಮಕ್ಕಳಿಗೆ 73 ಕೋಟಿ ರೂ. ಮಾಸಾಶನ, ಭಿಕ್ಷುಕರ ಕಲ್ಯಾಣಕ್ಕೆ 23 ಕೋಟಿ ರೂ. ಹೀಗೆ ಅನೇಕ ಕಡೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದರು.
ಕಳೆದ ಬಜೆಟ್ ಪ್ರಕಾರ, ಜನವರಿ ಅಂತ್ಯಕ್ಕೆ ಸರ್ಕಾರದಿಂದ ಒಟ್ಟು ಖರ್ಚುಗಳಿಗೆ 3,39,277.31 ಕೋಟಿ ರೂ. ನೀಡಬೇಕಿತ್ತು. ಆದರೆ ಸರ್ಕಾರದಿಂದ 2,46,465 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಇನ್ನು 94,761.42 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಬಿಡುಗಡೆಯಾದ ಹಣದಲ್ಲಿ 36,000 ಕೋಟಿ ರೂ. ಖರ್ಚು ಮಾಡಿಲ್ಲ. ಒಟ್ಟು ಅನುದಾನದಲ್ಲಿ 41% ಖರ್ಚು ಮಾಡಿಲ್ಲ. ಕಳೆದ 3 ವರ್ಷದಿಂದಲೂ ಹೀಗೆಯೇ ಆಗುತ್ತಿದೆ ಎಂದರು.

ಕೇಂದ್ರದ ಹಂಚಿಕೆ
ʻನಮ್ಮ ತೆರಿಗೆ ನಮ್ಮ ಹಕ್ಕುʼ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಎನ್‌ಡಿಎ ಸರ್ಕಾರ ಈ ಬಾರಿ 63,049 ಕೋಟಿ ರೂ. ತೆರಿಗೆ ಹಂಚಿಕೆ ಮಾಡಿದೆ ಹಾಗೂ 16,000 ಕೋಟಿ ರೂ. ಅನುದಾನ ನೀಡಿದೆ. ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲ ನೀಡಿರುವುದನ್ನು ಮುಖ್ಯಮಂತ್ರಿ ಮುಚ್ಚಿಟ್ಟಿದ್ದಾರೆ. ಬಂಡವಾಳ ವೆಚ್ಚಕ್ಕಾಗಿ 2020-21 ರಿಂದ 2025-26 ರವರೆಗೆ ವಿಶೇಷ ಅನುದಾನವಾಗಿ 15,945 ಕೋಟಿ ರೂ. ನೀಡಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹನ್ನೊಂದು ವರ್ಷಗಳಲ್ಲಿ ಕರ್ನಾಟಕಕ್ಕೆ 4,52,049 ಕೋಟಿ ರೂ. ನೀಡಿದೆ. 2,36,009 ಕೋಟಿ ರೂ. ಅನುದಾನ ನೀಡಿದೆ. ರಸಗೊಬ್ಬರ ಸಬ್ಸಿಡಿಯಾಗಿ 46,429 ಕೋಟಿ ರೂ., ಮೆಟ್ರೊಗೆ 41,993 ಕೋಟಿ ರೂ., ಜಲಜೀವನ್ ಮಿಷನ್‌ಗೆ 24,813 ಕೋಟಿ ರೂ. ನೀಡಿದೆ. ಒಟ್ಟಾರೆಯಾಗಿ 11,45,924 ಕೋಟಿ ರೂ. ಹಣ ಕೇಂದ್ರದ ಎನ್‌ಡಿಎ ಸರ್ಕಾರದಿಂದ ಕರ್ನಾಟಕಕ್ಕೆ ಬಂದಿದೆ ಎಂದು ಹೇಳಿದರು.
ಮೆಟ್ರೋ ಯೋಜನೆಯ 67,460 ಕೋಟಿ ರೂ. ನಲ್ಲಿ ರಾಜ್ಯದ ಪಾಲು 59,376 ಕೋಟಿ ರೂ. ಹಾಗೂ ಕೇಂದ್ರದಿಂದ 8,084 ಕೋಟಿ ರೂ. ಬಂದಿದೆ ಎಂದು ಬಜೆಟ್ ಪುಸ್ತಕದಲ್ಲಿ ಹೇಳಲಾಗಿದೆ. ರಾಜ್ಯದ ಪಾಲು 88% ಹಾಗೂ ಕೇಂದ್ರದ್ದು 12% ಎಂದು ಹೇಳಲಾಗಿದೆ. ಸಂಸದ ಪಿ.ಸಿ ಮೋಹನ್ ಈ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದಾರೆ. ಕೇಂದ್ರ ನಗರಾಭಿವೃದ್ಧಿ ಸಚಿವರು ನೀಡಿದ ಉತ್ತರದ ಪ್ರಕಾರ, 2026 ಮಾರ್ಚ್ 5 ರವರೆಗೆ ಮೆಟ್ರೊ ಕಾಮಗಾರಿಗೆ 27,184 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ಗೆ ಪ್ರಶ್ನೆ ಕೇಳಿದ್ದು, ಅದರಲ್ಲಿ ಮೆಟ್ರೊಗೆ ಕೇಂದ್ರ ಸರ್ಕಾರ 33,381.69 ಕೋಟಿ ರೂ. ನೀಡಿದೆ ಹಾಗೂ ಕೇಂದ್ರ-ರಾಜ್ಯ ಎರಡೂ ಸೇರಿ 60,123.39 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿಸಲಾಗಿದೆ. ಬಜೆಟ್ ಪುಸ್ತಕದಲ್ಲಿ ಮತ್ತು ಡಿ.ಕೆ ಶಿವಕುಮಾರ್ ಉತ್ತರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹಾಗಾದರೆ ಬಜೆಟ್ ಪುಸ್ತಕ ಸರಿಯೋ ತಪ್ಪೋ ಎಂದು ತಿಳಿಸಬೇಕು ಎಂದರು.
ಜಲಜೀವನ್ ಮಿಷನ್ ಜಾರಿಯಲ್ಲಿ ಕರ್ನಾಟಕ 20ನೇ ಸ್ಥಾನದಲ್ಲಿದ್ದು, ಅದರಿಂದಾಗಿ ಹೆಚ್ಚು ಅನುದಾನ ಸಿಕ್ಕಿಲ್ಲ. ಸಿದ್ದರಾಮಯ್ಯನವರು ಎಲ್ಲರನ್ನೂ ಸಾಲದಲ್ಲಿ ಮುಳುಗಿಸುತ್ತಿದ್ದಾರೆ. ಈ ಬಜೆಟ್ ಪ್ರಗತಿಪರವಾಗಿಲ್ಲ, ಅಭಿವೃದ್ಧಿಯ ಪರವಾಗಿಲ್ಲ. ಎಲ್ಲರಿಗೂ ರೆಕ್ಕೆ ನೀಡುತ್ತೇನೆ ಎನ್ನುತ್ತಾರೆ. ಆದರೆ ರೆಕ್ಕೆಯಲ್ಲ, ಪುಕ್ಕವನ್ನೂ ಕಿತ್ತು ಹಾಕುವ ಸ್ಥಿತಿಗೆ ಬಂದಿದ್ದಾರೆ ಎಂದು ಟೀಕಿಸಿದರು.

