ಆಧುನಿಕತೆ ಮುಂದುವರೆದಂತೆ ಯುದ್ಧ ತಂತ್ರಗಳು ಬದಲಾಗುತ್ತಿವೆ. ರಣಭೂಮಿಯಲ್ಲಿ ಸೈನಿಕರ ಬದಲು ರೋಬೋಟ್, ಡ್ರೋನ್ಗಳು (Drones) ಯುದ್ಧದಲ್ಲಿ ತೊಡಗಿವೆ. ಅದರಲ್ಲೂ ಅಗ್ಗದ ಡ್ರೋನ್ಗಳು (ವಿಶೇಷವಾಗಿ FPV ಮತ್ತು ಶಹೇದ್-136) ಕೇವಲ 15-20 ಲಕ್ಷ ರೂ. ವೆಚ್ಚದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಯುದ್ಧ ಟ್ಯಾಂಕ್ಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಮಾಡಿ, ಆಧುನಿಕ ಯುದ್ಧತಂತ್ರವನ್ನೇ ಬದಲಾಯಿಸಿವೆ.
ಪುಟ್ಟ ಡ್ರೋನ್ಗಳು ಕಡಿಮೆ ತೂಕದ, ಶತ್ರುಗಳ ಕಣ್ಣಿಗೆ ಬೀಳದೆ ಮತ್ತು ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ರಷ್ಯಾ-ಉಕ್ರೇನ್ ಮತ್ತು ಮಧ್ಯಪ್ರಾಚ್ಯ ಸಂಘರ್ಷಗಳಲ್ಲಿ ಡ್ರೋನ್ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಯುದ್ಧದಲ್ಲಿ ಕಡಿಮೆ ವೆಚ್ಚದಲ್ಲಿ ಭಾರೀ ಹಾನಿ ಮಾಡುವ ಡ್ರೋನ್ಗಳ ಪಾತ್ರದ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಯುದ್ಧದಲ್ಲಿ ಅಗ್ಗದ ಡ್ರೋನ್ಗಳ ಪ್ರಭಾವ
ವೆಚ್ಚ: ಅಗ್ಗದ ಡ್ರೋನ್ಗಳಿಂದ ಶತ್ರುಗಳ ಕೋಟಿ ಕೋಟಿ ರೂ. ಮೌಲ್ಯದ ಮಿಸೈಲ್ಗಳನ್ನು ಹೊಡೆದುರುಳಿಸಲು ಕೆಲವೇ ಲಕ್ಷದ ಡ್ರೋನ್ಗಳನ್ನು ಬಳಸುವುದು ಅತ್ಯಂತ ಕಡಿಮೆ ವೆಚ್ಚದಾಯಕವಾಗಿದೆ.
ಪ್ರಮುಖ ಡ್ರೋನ್ ಮಾಡೆಲ್: ಇರಾನ್ನ ಶಹೇದ್-136 (Shahed-136) 2,500 ಕಿ.ಮೀ ದೂರದವರೆಗೆ ಹಾರಿ ಗುರಿಯನ್ನು ತಲುಪಬಲ್ಲದು. ಇವುಗಳನ್ನು ʼಸೂಸೈಡ್ ಡ್ರೋನ್ʼ ಎಂದೂ ಕರೆಯುತ್ತಾರೆ. ಗಂಟೆಗೆ 185 ಕಿ.ಮಿ ವೇಗದಲ್ಲಿ ಇವು ಸಾಗಬಲ್ಲವು.
ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ, ಈ ಡ್ರೋನ್ಗಳು ಶತ್ರುಗಳ ಫಿರಂಗಿಗಳನ್ನು ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಬಳಸಲಾಗಿತ್ತು. ಇವು ಸಣ್ಣ ಸೇನೆಗೂ ಶಕ್ತಿಶಾಲಿ ಸೇನೆಯನ್ನು ಎದುರಿಸುವ ಸಾಮರ್ಥ್ಯವನ್ನು ನೀಡಿವೆ. ಈ ಮೂಲಕ ಯುದ್ಧಭೂಮಿಯಲ್ಲಿ ಅತಿದೊಡ್ಡ ಬದಲಾವಣೆಯನ್ನು ತಂದಿವೆ. ಅಲ್ಲದೇ ಈ ಡ್ರೋನ್ಗಳನ್ನು ಹಾರಿಸಲು ಹೆಚ್ಚಿನ ತರಬೇತಿಯ ಅಗತ್ಯವಿಲ್ಲ. ಇವುಗಳ ತಯಾರಿಕೆ ಕೂಡ ಸುಲಭವಾಗಿದೆ.

ಶಹೆದ್-136 ಡ್ರೋನ್ ಎಂದರೇನು?
ಶಹೆದ್-136 ಏಕಮುಖ ದಾಳಿ ಡ್ರೋನ್ ಆಗಿದೆ. ಇದು ಸರಳ ಕ್ರೂಸ್ ಕ್ಷಿಪಣಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಜಿಪಿಎಸ್ ಆಧಾರಿಸಿ ಸಂಚರಿಸುತ್ತವೆ. ಸುಮಾರು 40-50 ಕಿಲೋಗ್ರಾಂಗಳಷ್ಟು ಪೇಲೋಡ್ ಸಾಮರ್ಥ್ಯವನ್ನು ಹೊಂದಿದ್ದು, 2,500 ಕಿಲೋಮೀಟರ್ಗಳ ವ್ಯಾಪ್ತಿಯನ್ನು ಹೊಂದಿವೆ.
ಕೇವಲ 2 ಲಕ್ಷ ರೂ.ನಿಂದ ಸಾವಿರಾರು ಕೋಟಿ ಭಸ್ಮ!
ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ನೆಲೆಗಳು, ತೈಲಾಗಾರಗಳು, ರಾಯಭಾರ ಕಚೇರಿ, ಕಟ್ಟಡಗಳ ಮೇಲೆ ದಾಳಿ ಮಾಡಲು ಇರಾನ್ (Iran Israel War) ಬಳಸುತ್ತಿರುವುದು ತನ್ನ ಶಹೇದ್-136 ಕ್ಷಿಪಣಿಗಳನ್ನು. ಇದರ ಬೆಲೆ ಅಂದಾಜು 2 ಲಕ್ಷ ರೂ. ಆದರೆ ಇವುಗಳನ್ನು ತಡೆಯಲು ಅಮೆರಿಕ ಬಳಸುತ್ತಿರುವ ಪ್ಯಾಕ್-3 ಪ್ರತಿಬಂಧಕದ ಬೆಲೆ ಬರೋಬ್ಬರಿ 36 ಕೋಟಿ ರೂ. ಥಾಡ್ ಕೂಡ ಬಲು ದುಬಾರಿ. ಹೀಗಿರುವಾಗ, ಇರಾನ್ ಹಾರಿಸುವ ಕ್ಷಿಪಣಿಗಳ ದಂಡನ್ನು ತಡೆಯುವುದು ಅಮೆರಿಕದ ಪಾಲಿಗೆ ಕಷ್ಟಕರ ಹಾಗೂ ಅತಿ ದುಬಾರಿ.

ಸಾಲು ಸಾಲಾಗಿ ಬರುವ ಎಲ್ಲಾ ಕ್ಷಿಪಣಿಗಳನ್ನು ಗುರುತಿಸಿ ಹೊಡೆಯುವುದು ಯಾವ ರಕ್ಷಣಾ ವ್ಯವಸ್ಥೆಗೂ ಸಾಧ್ಯವಿಲ್ಲ. ಇವುಗಳಲ್ಲಿ ಕೆಲವಾದರೂ ತಮ್ಮ ಗುರಿಗಳನ್ನು ಧ್ವಂಸಗೊಳಿಸುತ್ತವೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಹೇಳೋದೇನು?
ಶಹೀದ್-136 ಡ್ರೋನ್ಗಳು ಕಡಿಮೆ ಎತ್ತರದಲ್ಲಿ ಮತ್ತು ನಿಧಾನವಾಗಿ ಹಾರುವುದರಿಂದ ಅವುಗಳನ್ನು ತಡೆಯುವುದು ಕಷ್ಟ, ಇದರಿಂದಾಗಿ ಸಾಂಪ್ರದಾಯಿಕ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಅವುಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಈ ಡ್ರೋನ್ಗಳು ನಿರೀಕ್ಷೆಗಿಂತ ದೊಡ್ಡ ಸವಾಲಾಗಿ ಪರಿಣಮಿಸಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಜಂಟಿ ಮುಖ್ಯಸ್ಥರ ಅಧ್ಯಕ್ಷ ಡಾನ್ ಕೈನೆ ಹೇಳಿದ್ದಾರೆ.

ಉಕ್ರೇನ್ ಮಾತು ಕೇಳದೆ ಕೆಟ್ಟ ಟ್ರಂಪ್!
ಉಕ್ರೇನ್ ಹಲವಾರು ತಿಂಗಳ ಹಿಂದೆ ಈ ಬೆದರಿಕೆಯ ಬಗ್ಗೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಲ್ಲದೇ ಈ ಡ್ರೋನ್ಗಳನ್ನು ಹೊಡೆದುರುಳಿಸಲು ತಂತ್ರಜ್ಞಾನವನ್ನು ಒದಗಿಸಲು ಮುಂದಾಗಿತ್ತು. ಡೊನಾಲ್ಡ್ ಟ್ರಂಪ್ ಆ ಸಮಯದಲ್ಲಿ ಉಕ್ರೇನ್ ಮಾತನ್ನು ಕೇಳಿರಲಿಲ್ಲ ಎಂದು ವರದಿಯಾಗಿದೆ.
ಬಳಕೆಯಲ್ಲಿರುವ ಅಗ್ಗದ ಡ್ರೋನ್ಗಳು
– ಶಹೇದ್- 136; ಇರಾನ್, ರಷ್ಯಾ, ಹೌತಿ ಬಂಡುಕೋರರು ಬಳಸುತ್ತಿದ್ದಾರೆ.
– ಝಲಾ ಲ್ಯಾನ್ಸೆಟ್; ರಷ್ಯಾ ಬಳಸುತ್ತಿದೆ
– ಹಾರ್ನೆಟ್ ಕ್ವೀನ್ (ವೈಲ್ಡ್ ಹಾರ್ನೆಟ್ಸ್): ಉಕ್ರೇನ್ ಬಳಸುತ್ತಿದೆ.
ಗೆರ್ಬೆರಾ: ರಷ್ಯಾ ಬಳಸುತ್ತದೆ.
‘ಸ್ಟಿಂಗ್’ ಇಂಟರ್ಸೆಪ್ಟರ್: ಉಕ್ರೇನ್ ಬಳಸುತ್ತದೆ.
ಸ್ವಿಚ್ಬ್ಲೇಡ್ 300 : ಉಕ್ರೇನ್, ಅಮೆರಿಕ ಬಳಸುತ್ತಿದೆ.
ಫೈಬರ್-ಆಪ್ಟಿಕ್ FPV ; ರಷ್ಯಾ ಮತ್ತು ಉಕ್ರೇನ್ ಬಳಸುತ್ತಿವೆ.

