– ಹೆಚ್ಡಿಎಫ್ಸಿ ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷ ರಾಜೀನಾಮೆ
ಮುಂಬೈ: ಒಂದು ರಾಜೀನಾಮೆಯಿಂದ ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ (HDFC Bank) ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ರೂ. ಕರಗಿದೆ.
ಹೆಚ್‌ಡಿಎಫ್‌ಸಿ ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷ ಮತ್ತು ಸ್ವತಂತ್ರ ನಿರ್ದೇಶಕ ಅತನು ಚಕ್ರವರ್ತಿ(Atanu Chakraborty) ಬುಧವಾರ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮೇ 2021 ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಮಂಡಳಿಗೆ ಸೇರಿದ ಚಕ್ರವರ್ತಿ ಅಧಿಕಾರದ ಅವಧಿಯಲ್ಲಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಲಿಮಿಟೆಡ್‌ನೊಂದಿಗೆ ವಿಲೀನಗೊಂಡಿತ್ತು. 2023 ರಲ್ಲಿ ವಿಲೀನ ಪ್ರಕ್ರಿಯೆ ನಡೆದ ಬಳಿಕ ವಿಶ್ವದ ಅತ್ಯಂತ ಮೌಲ್ಯಯುತ ಬ್ಯಾಂಕ್‍ಗಳಲ್ಲಿ ಹೆಚ್‍ಡಿಎಫ್‍ಸಿ ಬ್ಯಾಂಕ್ ಸ್ಥಾನ ಪಡೆದಿತ್ತು.
ನನ್ನ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಬ್ಯಾಂಕ್ ಅನ್ನು ಹೆಚ್‌ಡಿಎಫ್‌ಸಿ ಲಿಮಿಟೆಡ್‌ನೊಂದಿಗೆ ವಿಲೀನಗೊಳಿಸುವಂತಹ ಮಹತ್ವದ ಘಟನೆಗಳು ನಡೆದಿವೆ. ಇದು ಬ್ಯಾಂಕಿನ ಅಡಿಯಲ್ಲಿ ಒಂದು ಸಮೂಹವನ್ನು ಸೃಷ್ಟಿಸಿದೆ. ಈ ಕಾರ್ಯತಂತ್ರದ ಉಪಕ್ರಮವು ಹೆಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿ ಮಾಡಿತು. ಆದಾಗ್ಯೂ ವಿಲೀನದ ಪ್ರಯೋಜನಗಳು ಇನ್ನೂ ಸಂಪೂರ್ಣವಾಗಿ ಫಲಪ್ರದವಾಗಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್ ನಾನು 5 ವರ್ಷಗಳಿಂದ ಪೋಷಿಸಿದ ಸಂಸ್ಥೆ. ಬ್ಯಾಂಕಿನಲ್ಲಿನ ಯಾವುದೇ ತಪ್ಪುಗಳನ್ನು ನಾನು ಎತ್ತಿ ತೋರಿಸುತ್ತಿಲ್ಲ. ನನ್ನ ಸಿದ್ಧಾಂತಗಳು ಸಂಸ್ಥೆಯೊಂದಿಗೆ ಹೊಂದಿಕೆಯಾಗದ ಕಾರಣ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

1 ಲಕ್ಷ ಕೋಟಿ ನಷ್ಟ:
ರಾಜೀನಾಮೆ ಸುದ್ದಿ ಪ್ರಕಟವಾದ ಬೆನ್ನಲ್ಲೇ ಎಚ್‌ಡಿಎಫ್‌ಸಿ ಷೇರಿನ ಮೌಲ್ಯ ಕುಸಿಯಲು ಆರಂಭವಾಯಿತು. ಬುಧವಾರ ಒಂದು ಷೇರು 843.05 ರೂ.ನಲ್ಲಿ ವ್ಯವಹಾರ ಮುಗಿಸಿದ್ದರೆ ಇಂದು ಒಂದೇ ದಿನ 44.85 ರೂ.(5.44%) ಇಳಿಕೆಯಾಗಿ 798.20 ರೂ. ನಲ್ಲಿ ವ್ಯವಹಾರ ಮುಗಿಸಿತು.
ಇಂದು ಒಂದೇ ದಿನ 1.12 ಲಕ್ಷ ಕೋಟಿ ರೂ. ಕರಗಿದ್ದರಿಂದ ಈಗ ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯ 12,30,832 ಕೋಟಿ ರೂ.ಗೆ ಇಳಿಕೆಯಾಗಿದೆ. ಇಂದು ಬೆಳಗ್ಗೆ ಮಾರುಕಟ್ಟೆ ವ್ಯವಹಾರ ಆರಂಭವಾದಾಗ 770 ರೂ. ಬೆಲೆಯಲ್ಲಿ ವ್ಯವಹಾರ ನಡೆಸುತ್ತಿತ್ತು. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ LNG ಸ್ಥಾವರದ ಮೇಲೆ ಇರಾನ್ ದಾಳಿ- ಭಾರತದ ಮೇಲೆ ಪರಿಣಾಮ ಏನು?

