ಹಿಂದೂಗಳ ಹೊಸ ವರ್ಷ ಯುಗಾದಿ (Ugadi). ಹಬ್ಬವನ್ನು ರಾಜ್ಯದ ಜನತೆಗೆ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರಗಳೊಂದಿಗೆ ಬರಮಾಡಿಕೊಂಡಿದ್ದಾರೆ. ಹಬ್ಬದ ದಿನ ಬೇವು-ಬೆಲ್ಲದ ಸಿಹಿ ಮತ್ತು ಕಹಿ ಸವಿದ ಜನ, ಮಾರನೇ ದಿನ ಖಾರದ ಊಟ ಮಾಡುತ್ತಾರೆ. ‘ಹೊಸತೊಡಕು’ (Hosatodaku) ಮಾಂಸಾಹಾರ ಪ್ರಿಯರಿಗೆ ಸುಗ್ಗಿಯಿದ್ದಂತೆ. ಮನೆಮನೆಗಳಲ್ಲಿ ಮಾಂಸದೂಟದ ಘಮಲಿರುತ್ತದೆ. ತರಹೇವಾರಿ ಮಾಂಸದಡುಗೆ ಮಾಡಿ ನೆಂಟರಿಸ್ಟರ ಜೊತೆ ಭೂರಿ ಭೋಜನ ಮಾಡುತ್ತಾರೆ. ಸಸ್ಯಹಾರಿಗಳು ಸಿಹಿ ಊಟ ಸವಿದು ಹಬ್ಬವನ್ನು ಆಚರಿಸುತ್ತಾರೆ.
ಕರ್ನಾಟಕದ ಹಲವೆಡೆ ಇದನ್ನು ‘ವರ್ಷದ ತೊಡಕು’ ಅಥವಾ ‘ಹೊಸತೊಡಕು’ ಎಂದೂ ಕರೆಯುತ್ತಾರೆ. ಹೊಸತೊಡಕು ದಿನ ಜನರು ಕುಟುಂಬ ಸಮೇತರಾಗಿ ಮಾಂಸಾಹಾರ ಸೇವಿಸುವುದು ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಾಂಸಕ್ಕೆ ಭಾರಿ ಬೇಡಿಕೆ ಇರುತ್ತದೆ. ಕುರಿ, ಮೇಕೆ, ಕೋಳಿಗಳ ಬೆಲೆ ಹೆಚ್ಚಾಗಿದೆ. ವರ್ಷಕೊಮ್ಮೆ ಬರುವ ಹಬ್ಬವಾದ್ದರಿಂದ ಸ್ಟಾಲ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಜನ ಮಾಂಸ ಖರೀದಿ ಮಾಡುತ್ತಾರೆ. ಹಬ್ಬದ ಸಂದರ್ಭದಲ್ಲೇ ರಂಜಾನ್ ಇರುವುದರಿಂದ ಮಾಂಸಕ್ಕೆ ಭಾರಿ ಬೇಡಿಕೆ ಇದೆ. ಪ್ರಸಿದ್ಧ ಬನ್ನೂರು ಕುರಿ ಮಾಂಸಕ್ಕೂ ಬೇಡಿಕೆ ಹೆಚ್ಚಾಗಿದೆ. ಕುರಿ ಮತ್ತು ಮೇಕೆಗಳನ್ನು ಕರ್ನಾಟಕ ಅಷ್ಟೇ ಅಲ್ಲ, ಹೊರ ರಾಜ್ಯಗಳಿಂದಲೂ ತಂದು ಮಾರಾಟ ಮಾಡಲಾಗುತ್ತಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಯುಗಾದಿ ಸಂಭ್ರಮ – ಮೂಲ ರಾಮದೇವರಿಗೆ ತೈಲ ಅಭ್ಯಂಗನ

ಗುಡ್ಡೆ ಮಾಂಸ ಫೇಮಸ್
ಹಬ್ಬದ ಸಂದರ್ಭಗಳಲ್ಲಿ ಗುಡ್ಡೆ ಮಾಂಸವೇ ಫೇಮಸ್. ಹಳ್ಳಿಗಳಲ್ಲಿ ಈ ಸಂಪ್ರದಾಯ ಹಿಂದಿನಿಂದಲೂ ಇದೆ. ನಗರ ಪ್ರದೇಶಗಳಲ್ಲಿ ಚಿಕನ್, ಮಟನ್ ಸ್ಟಾಲ್‌ಗಳಿಗೆ ಹೋಗಿ ಕೆಜಿ ಲೆಕ್ಕದಲ್ಲಿ ಮಾಂಸವನ್ನು ಜನ ಖರೀದಿಸಿ ತರುತ್ತಾರೆ. ಆದರೆ, ಗುಡ್ಡೆ ಮಾಂಸ ಪರಿಕಲ್ಪನೆ ಹಾಗಲ್ಲ. ಕೈ ಅಳತೆ ಲೆಕ್ಕದಲ್ಲಿ ಮಾಂಸವನ್ನು ಗುಡ್ಡೆ ಹಾಕಿ ಜನರಿಗೆ ನೀಡಲಾಗುತ್ತದೆ. ಹೊಸತೊಡಕು ಕಾರಣಕ್ಕೆ ಜನರು ಸಂಘಗಳನ್ನು ಮಾಡಿಕೊಂಡು ವರ್ಷದ ಹಿಂದೆಯೇ ಚೀಟಿ ಕಟ್ಟುತ್ತಾರೆ. ತಿಂಗಳಿಗೆ ಇಂತಿಷ್ಟು ದುಡ್ಡು ಎಂದು ಚೀಟಿ ನಡೆಸುತ್ತಾರೆ. ಚೀಟಿಯಿಂದ ಬಂದ ಒಟ್ಟು ಹಣಕ್ಕೆ ಕುರಿ, ಮೇಕೆಗಳನ್ನು ಖರೀದಿಸಿ ಮಾಂಸ ಮಾಡಿ ಚೀಟಿ ಕಟ್ಟಿರುವವರಿಗೆ ಗುಡ್ಡೆ ಲೆಕ್ಕದಲ್ಲಿ ಮಾಂಸ ನೀಡುತ್ತಾರೆ.
ಹಳ್ಳಿಗಳಲ್ಲಿ ಹೊಸತೊಡಕು ಮಾಂಸದೂಟ ಸಂಭ್ರಮ ಜೋರಾಗಿರುತ್ತದೆ. ಹಲವೆಡೆ ಪ್ರತಿ ಮನೆಯಲ್ಲೂ ಕುರಿ, ಮೇಕೆಗಳನ್ನು ಬಲಿ ಕೊಡುತ್ತಾರೆ. ಕುಟುಂಬಸ್ಥರಷ್ಟೇ ಅಲ್ಲ, ನೆಂಟರಿಸ್ಟರನ್ನು ಆಹ್ವಾನಿಸಿ ಹಬ್ಬದೂಟ ಮಾಡುತ್ತಾರೆ. ಎಲ್ಲರೂ ಖಾರದೂಟದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಇದನ್ನೂ ಓದಿ: ಯುಗಾದಿ ಭವಿಷ್ಯ: ಹೊಸ ವರ್ಷ ಯಾರಿಗೆ ಅದೃಷ್ಟ? ಯಾರಿಗೆ ಸಂಕಷ್ಟ?

