ಹಾಸನ: ಕೊನೆಗೂ ಸಕಲೇಶಪುರದ ಕೆನರಾ ಬ್ಯಾಂಕ್(Canara Bank) ರೈತನ ಖಾತೆಗೆ ಬಾಕಿ ಉಳಿಸಿಕೊಂಡಿದ್ದ 66 ಪೈಸೆಯನ್ನು ಜಮೆ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಸಕಲೇಶಪುರ ತಾಲ್ಲೂಕಿನ, ಹೊಸಕೊಪ್ಪಲು ಗ್ರಾಮದ ರೈತ (Farmer) ಚೊಕ್ಕಣ್ಣಗೌಡ ಕೆನರಾ ಬ್ಯಾಂಕ್‌ನಿಂದ ಕಳೆದ ವರ್ಷ 50 ಸಾವಿರ ರೂ. ಸಾಲ ಪಡೆದಿದ್ದರು. ಪಡೆದ ಸಾಲವನ್ನು ಬಡ್ಡಿಯೊಂದಿಗೆ ತೀರಿಸಿದ್ದರು. ಆದರೆ ಫೆ.25 ರಂದು ಕೆನರಾ ಬ್ಯಾಂಕ್ ಕಡೆಯಿಂದ ಬಂದ ಕರೆಯಲ್ಲಿ ಬಾಕಿ ಉಳಿಸಿಕೊಂಡ 9 ರೂ. 34 ಪೈಸೆಯನ್ನು ಪಾವತಿಸಬೇಕೆಂದು ಸೂಚಿಸಲಾಗಿತ್ತು.
ಫೆ.26 ರಂದು ಸಕಲೇಶಪುರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಗೆ ಬಂದು 10 ರೂಪಾಯಿ ನೀಡಿ ಬಾಕಿ ಸಾಲವನ್ನು ಪಾವತಿಸಿದ್ದರು. ಬ್ಯಾಂಕ್ ಸಿಬ್ಬಂದಿ ಸಾಲದ ಮೊತ್ತದಲ್ಲಿ 9 ರೂಪಾಯಿ 34 ಪೈಸೆ ಮಾತ್ರ ಉಲ್ಲೇಖಿಸಿ ಬಾಕಿ 66 ಪೈಸೆಯನ್ನು ಉಳಿಸಿಕೊಂಡು ರಿಸಿಪ್ಟ್ ನೀಡಿತ್ತು. ಇದನ್ನೂ ಓದಿ: ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ತಲೆಗೆ 92.47 ಕೋಟಿ ಬಹುಮಾನ
ಚೊಕ್ಕಣ್ಣ ಗೌಡ ಅವರು ಬಾಕಿ 66 ಪೈಸೆಯನ್ನು ಕೊಡುವಂತೆ ಪಟ್ಟು ಹಿಡಿದಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ಮೇಲಾಧಿಕಾರಿಗಳ ಗಮನಕ್ಕೆ ಬಂದಿದೆ. ಈಗ ಬ್ಯಾಂಕ್ ರೈತನ ಖಾತೆಗೆ 66 ಪೈಸೆ ಜಮೆ ಮಾಡಿ ಮೆಸೇಜ್ ಮೂಲಕ ಮಾಹಿತಿ ನೀಡಿದೆ.
ಸಾವಿರಾರು ಕೋಟಿ ಸಾಲ ಮಾಡಿ ಊರು ಬಿಟ್ಟವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸಾಲ ಮಾಡಿ ವಾಪಸ್ ಕಟ್ಟುವ ಬಡ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಚೊಕ್ಕಣ್ಣಗೌಡ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಜೊತೆ ಕೇಳಿದಾಗ, ಸಾಲ ವಾಪಸ್ ಪಾವತಿಸುವಂತೆ ನಮ್ಮ ಕಡೆಯಿಂದ ಕರೆ ಹೋಗಿಲ್ಲ. ಕಂಪ್ಯೂಟರೈಸ್ಡ್ ಟೆಲಿಕಾಲ್‌ನಿಂದ ಕರೆ ಹೋಗಿತ್ತು ಎಂದು ಉತ್ತರಿಸಿದ್ದಾರೆ.

