ಹಾಯ್ ಡಿಯರ್,
ಆಗಾಗ ನೀನು ಎಲ್ಲಿ ಕಳೆದು ಹೋಗ್ತಿಯಾ? ನಿನಗಾಗಿ ಎಷ್ಟು ಅಂತ ಕಾಯೋದು? ಎಷ್ಟು ಅಂತ ಹುಡುಕೋದು? ಬರುವ ಆ ದಾರಿಯಲ್ಲಿ ನಿನು ಸಿಗದೇ ಇದ್ರೆ ಅದೆಷ್ಟು ಸಂಕಟ ಗೊತ್ತಾ? ನಿನ್ನನ್ನು ಮೊದಲ ಬಾರಿಗೆ ಕಂಡಾಗಿಂದ ನನಗೆ ಹೀಗೆಲ್ಲ ಆಗ್ತಿದೆ. ಅದ್ಯಾಕೆ ನೋಡಿ ಪರಿಚಿತನಂತೆ ಸ್ಮೈಲ್ ಮಾಡ್ದೆ ನೀನು?
ನೀನು ಒಂದಲ್ಲ ಒಂದು ದಿನ ಮಾತಾಡಿಸ್ತಿಯ ಆಗೆಲ್ಲ ಈ ಪ್ರಶ್ನೆಗಳಿಗೆ ನಿನ್ನಿಂದಲೇ ನಾನು ಉತ್ತರ ಪಡ್ಕೋತಿನಿ. ನಿನ್ನ ಕಣ್ಣಲ್ಲಿ ಅದೇನೇನೋ ಪ್ರಶ್ನೆಗಳಿವಿಯೋ ಅವಕ್ಕೆಲ್ಲ ಉತ್ತರಿಸುತ್ತೇನೆ. ನಾನು ನನ್ನ ಮನಸ್ಸಿನ ಸಮಾಧಾನಕ್ಕೆ ಹುಡುಕುತ್ತಿರುವ ತಾಣ ನಿನ್ನ ಹೃದಯ ಎಂದು ಗೊತ್ತಾಗಿದೆ. ಅದಕ್ಕೆ ಎಲ್ಲಾ ಸೂಚನೆಗಳನ್ನೂ ನನ್ನ ಕಣ್ಣಲ್ಲೇ ನಿನಗೆ ರವಾನಿಸಿದ್ದೇನೆ. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

ನೀನೇ ಅದೆಲ್ಲ ಸಂದೇಶಗಳನ್ನೂ ರವಾನಿಸಿದ್ರೂ ಒಂದನ್ನೂ ಸರಿಯಾಗಿ ಅರ್ಥನೇ ಮಾಡಿಕೊಳ್ತಿಲ್ಲ. ಹಾಗೇ ಬಂದು ತಬ್ಬಿಕೊಂಡು ಐ ಲವ್ ಯು ಅಂತ ಹೇಳೋಕೆ ಇದು ಸಿನಿಮಾ ಅಲ್ಲ. ನೀನು ಹೀಗೆ ನನ್ನ ಮೇಲೆ ಮನಸ್ಸು ಇಟ್ಕೊಂಡು ನಿನ್ನ ಪಾಡಿಗೆ ನೀನು ಫ್ರೆಂಡ್ಸ್ ಹತ್ರ ಹೇಳ್ಕೊಂಡು ಓಡಾಡೋದ್ರ ಬದಲು ನಂಗೆ ಬಂದು ಹೇಳಬಹುದಿತ್ತು!
ಅದೆಷ್ಟು ಅಂತ.. ಇನ್ಸ್ಟಾಗ್ರಾಮ್‌ಲ್ಲಿ ಕದ್ದ ನನ್ನ ಫೋಟೋಗೆ ಮುತ್ತು ಕೊಡ್ತಿಯಾ? ನನಗೆಲ್ಲ ಗೊತ್ತು..! ನಿನ್ನ ಕಳ್ಳಾಟ..! ನಾನೇ ನಿನ್ನೆದುರು ಹೃದಯವ ಬಿಚ್ಚಿಟ್ಟು ಕಾಯುತ್ತಿದ್ದೇನೆ. ಮುತ್ತಿಸುವ ಗೋಜಿಗೆ ನೀನು ಬರುತ್ತಿಲ್ಲ ಯಾಕೆ? ತುಂಬಾ ಕಾದಿದಿನಿ, ನಾನೇ ಬಂದು ಒಂದೆರಡು ಮುತ್ತು ಕೊಟ್ಟು ಬಿಡ್ಲಾ ಅಂತಾನೂ ಯೋಚ್ಸಿದಿನಿ.
ಇಷ್ಟು ವರ್ಷ ಆದ್ಮೇಲೆ ಮನಸ್ಸಿಗೆ ಇಷ್ಟವಾದ ಹುಡುಗನನ್ನ ಹುಡುಕಿದಿನಿ ನಾನು. ನೀನು ಮತ್ತೆ ಕಳೆದು ಹೋಗ್ಬೇಡ. ನಿನ್ನನ್ನ ಪದೇ ಪದೇ ಹುಡುಕೋಕೆ ಆಗಲ್ಲ ನನ್ನ ಹತ್ರ. ಈ ಪತ್ರ ಹೇಗೋ ನಿನ್ನ ಕೈಗೆ ಸೇರುತ್ತೆ.. ಅದೇ ದಿನ.. ಪವಿತ್ರ ವನದಲ್ಲಿ ನಿನಗಾಗಿ ಕಾಯ್ತಾ ಇರ್ತೀನಿ.. ಬಾ ಮಾತಾಡೋದಿದೆ. ಇದನ್ನೂ ಓದಿ:ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ಕನಸಲ್ಲೂ ನಿನ್ನನ್ನೇ ಕನವರಿಸುವವಳು

