– ವೈದ್ಯರು ಮತ್ತು ಸರ್ಕಾರದ ಸಂಧಾನ ಸಭೆ ಯಶಸ್ವಿ
– ಸರ್ಕಾರದಿಂದ ಬೇಡಿಕೆ ಈಡೇರಿಸುವ ಭರವಸೆ
ಬೆಂಗಳೂರು: ಸರ್ಕಾರಿ ಆಸ್ಪತ್ರೆ ಓಪಿಡಿ (OPD) ಮುಷ್ಕರದಿಂದ ವೈದ್ಯರು (Doctors) ಹಿಂದೆ ಸರಿದಿದ್ದಾರೆ. ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಸರ್ಕಾರದ ನಡುವಿನ ಸಂಧಾನ ಸಭೆ ಯಶಸ್ವಿಯಾಗಿದೆ. ವೈದ್ಯರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಿದೆ. ನಾಳೆಯಿಂದ ಎಂದಿನಂತೆ ಓಪಿಡಿ ಕಾರ್ಯ ನಿರ್ವಹಿಸಲಿವೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ ಮುಷ್ಕರಕ್ಕೆ ಕರೆ ನೀಡಿತ್ತು. ಮುಷ್ಕರದ ಎಚ್ಚರಿಕೆಯಿಂದ ಎಚ್ಚೆತ್ತ ಸರ್ಕಾರ ಇಂದು ವೈದ್ಯಾಧಿಕಾರಿಗಳ ಸಂಘದ ಜೊತೆ ಸಭೆ ನಡೆಸಿತು. ಸಚಿವ ಮಹಾದೇವಪ್ಪ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ಮಾಡಿದರು. ವೈದ್ಯರ ಬೇಡಿಕೆಗಳನ್ನ ಆಲಿಸಿದ ಸಚಿವರು ಬೇಡಿಕೆಗಳನ್ನ ಈಡೇರಿಸುವ ಭರವಸೆಯನ್ನ ನೀಡಿದ್ದಾರೆ. ಬೇಡಿಕೆಗಳ ಈಡೇರಿಕೆ ಭರವಸೆ ಸಿಕ್ಕ ಹಿನ್ನೆಲೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮುಷ್ಕರದಿಂದ ಹಿಂದೆ ಸರಿದಿದೆ. ಇದನ್ನೂ ಓದಿ: ಸ್ಮೃತಿ ಇರಾನಿ ಕಾಣುತ್ತಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯ
ಸುಮಾರು 15 ಬೇಡಿಕೆಗಳ ಈಡೇರಿಕೆಗೆ ವೈದ್ಯಾಧಿಕಾರಿಗಳ ಸಂಘ ಒತ್ತಾಯ ಮಾಡಿತ್ತು. ಮುಂಬಡ್ತಿ, ವರ್ಗಾವಣೆ, ಜೇಷ್ಠತೆ ಪಟ್ಟಿ, ಔಷಧಿ ಪೂರೈಕೆ, ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳನ್ನ ಇಟ್ಟಿದ್ದರು. ಅದರಲ್ಲಿ ಕೆಲವೊಂದು ಬೇಡಿಕೆಗಳ ಬಗ್ಗೆ ಮುಂದಿನ ವಾರದಲ್ಲಿ ಚರ್ಚೆ ಮಾಡುತ್ತೇವೆ. ಇವತ್ತಿನ ಸಭೆ ಯಶಸ್ವಿಯಾಗಿದೆ. ಸಿಎಂಗೆ ನಾನು, ಮಹದೇವಪ್ಪನವರು ಮಾಹಿತಿ ಕೊಟ್ಟಿದ್ದೇವೆ ಎಂದು ಆರೋಗ್ಯ ಸಚಿವರು ತಿಳಿಸಿದರು. ಇದನ್ನೂ ಓದಿ: 1 ಮರ ಕಡಿದರೆ 10 ಸಸಿ ನೆಡಲು ವಿಧಿಸುವ ಶುಲ್ಕಕ್ಕೆ ವಿನಾಯಿತಿ ಇಲ್ಲ: ಈಶ್ವರ ಖಂಡ್ರೆ
ಒಟ್ಟಾರೆ ವೈದ್ಯರು ಮತ್ತು ಸರ್ಕಾರದ ನಡುವಿನ ಸಂಧಾನ ಸಭೆ ಯಶಸ್ವಿಯಾಗಿದೆ. ನಾಳೆಯಿಂದ ಆರೋಗ್ಯ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಇರೋದಿಲ್ಲ. ಎಂದಿನಂತೆ ಸರ್ಕಾರಿ ಆಸ್ಪತ್ರೆ ಓಪಿಡಿಗಳು ಕಾರ್ಯ ನಿರ್ವಹಿಸಲಿವೆ. ಇದನ್ನೂ ಓದಿ: ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್ನೋಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಕೇಸ್ ಉಲ್ಲೇಖ

