ವ್ಹೀಲ್‌ಚೇರ್ ಮೇಲಿನ ಜೀವನ. ಈ ರೊಟ್ಟಿ ತಯಾರಿಸುವ ಮಶೀನ್ ಇವರ ಪಾಲಿಗೆ ಬದುಕಿನ ಬುತ್ತಿ. ಕೊಪ್ಪಳದ ಈ ಸ್ವಾಭಿಮಾನಿ ಹೆಸರು ಜಯಶ್ರೀ ಗುಳಗಣ್ಣನವರ್ (Jayashri Gulagannanavar).
ಎಂಎಸ್‌ಡಬ್ಲ್ಯೂ ಪದವೀಧರೆಯಾಗಿರುವ ಇವರ ಬದುಕು ಎಲ್ಲರಂತೆ ಸಾಗಿತ್ತು. ಬಾಲ್ಯ, ಶಿಕ್ಷಣ, ಮದುವೆ ಮಕ್ಕಳು ಎಲ್ಲವೂ ಅಂದುಕೊಂಡಂತೆ ನಡೆದಿತ್ತು. ಆದರೆ, ಹೆರಿಗೆಯ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿ ಹಾಸಿಗೆ ಹಿಡಿದು, ಬೆನ್ನುಹುರಿ ಸ್ವಾಧೀನ ಕಳೆದುಕೊಂಡರು. ಅಂಗವೈಕಲ್ಯ ಆವರಿಸಿತು. ಆಸರೆಯಾಗಬೇಕಿದ್ದ ಪತಿ, ಮಕ್ಕಳ ಸಮೇತ ದೂರವಾದ. ಅಯ್ಯೋ ಜೀವನವೇ ಮುಗಿದು ಹೋಯ್ತಲ್ಲ ಎನ್ನುವ ವೇಳೆಗೆ ಪುಟಿದೆದ್ದ ಜಯಶ್ರೀ, ಸಮಸ್ಯೆಗಳಿಗೇ ಸವಾಲೊಡ್ಡಿ ಸ್ವಾಲವಂಬಿ ಬದುಕು ರೂಪಿಸಿಕೊಂಡರು. ಇದನ್ನೂ ಓದಿ: ಶಶಿ ಸೋಪ್ಸ್ ಆ್ಯಂಡ್ ಡೆಟರ್ಜೆಂಟ್ಸ್ ಸಂಸ್ಥೆಯ ಶಶಿಕಲಾಗೆ ನಾರಿ ನಾರಾಯಣಿ ಸನ್ಮಾನ

ಕಾಲು ಸ್ವಾಧೀನ ಕಳೆದುಕೊಂಡರೂ ಎದೆಗುಂದದ ಚಲಗಾತಿ ಜಯಶ್ರೀ, ಬೆಂಗಳೂರಿನಲ್ಲಿ ಗಿಗ್ ವರ್ಕರ್ ಆಗಿ ಕೆಲಸ ಮಾಡಿದರು. ಬ್ಯಾಟರಿ ಚಾಲಿತ ವಾಹನದಲ್ಲೇ ಮನೆಮನೆಗೆ ತೆರಳಿ ಆಹಾರ ವಿತರಿಸುತ್ತಿದ್ದರು. ಬೆಂಗಳೂರು ಸಾಕೆನಿಸಿದಾಗ ತವರೂರಿಗೆ ಬಂದು ಜೋಳದ ರೊಟ್ಟಿ, ಚಪಾತಿ ತಯಾರಿಕೆ ಆರಂಭಿಸಿದರು.
ರೊಟ್ಟಿ ಮಶೀನ್ ಮೂಲಕ ಬದುಕು ಕಟ್ಟಿಕೊಳ್ಳಲು ಮುಂದಾದರು. ಸ್ವಂತ ಗ್ರಾಮದಲ್ಲೇ ರೊಟ್ಟಿ ತಯಾರಿಸಿ ಮಾರಾಟ ಮಾಡುತ್ತಾರೆ. ತನ್ನಂತೆ ಇರುವ ವಿಕಲಚೇತನರಿಗೆ ಆಸರೆಯಾಗಿದ್ದಾರೆ. ಇಷ್ಟೇ ಅಲ್ಲ ಈಕೆ ಬಿಲ್ಲು ವಿದ್ಯೆ ಪಾರಂಗತೆಯೂ ಹೌದು. ವಿಕಲಚೇತನ ಕ್ರೀಡಾಕೂಟದ ಆರ್ಚರಿಯಲ್ಲಿ ದೇಶವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದಾರೆ. ಇದನ್ನೂ ಓದಿ: ಅನಾಥ ಶವಗಳಿಗೆ ಮುಕ್ತಿ ನೀಡೋ ಮಹದೇವಮ್ಮಗೆ ನಾರಿ ನಾರಾಯಣಿ ಪ್ರಶಸ್ತಿ
ಧೀರ ವನಿತೆ ಜಯಶ್ರೀ ಅವರಿಗೆ ಮಹಿಳಾ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹೆಮ್ಮೆ ಪಡುತ್ತದೆ.
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

