– ತೊಗರಿಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಒಳಗೊಂಡ ಕಿಟ್
ಬೆಂಗಳೂರು: ಅನ್ನಭಾಗ್ಯ (Anna Bhagya Scheme) ಯೋಜನೆಯಡಿ ನೀಡುತ್ತಿರುವ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ತೊಗರಿಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದರು.
2026-27ನೇ ಸಾಲಿನ ಬಜೆಟ್ (Karnataka Budget 2026) ಮಂಡನೆ ಮಾಡಿದ ಸಿಎಂ, ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಬಡವರ ಹಸಿವು ನೀಗಿಸುವ ಉದ್ದೇಶದಿಂದ 4.54 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಐದು ಕೆಜಿ ಹೆಚ್ಚುವರಿ ಅಕ್ಕಿಯನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಗಾಗಿ 17,167 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: Karnataka Budget 2026: ಒಂದು ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದೆಲ್ಲಿಗೆ?
ಪ್ರಸ್ತುತ ನೀಡುತ್ತಿರುವ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಾಗಿ ಪ್ರತಿ ತಿಂಗಳು ಪೌಷ್ಟಿಕಾಂಶವುಳ್ಳ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈ ಸಾಲಿನಲ್ಲಿ 6,200 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.
ಆಹಾರ ಧಾನ್ಯಗಳ ವಿತರಣೆಗಾಗಿ ನೀಡಲಾಗುವ ಚಿಲ್ಲರೆ ಹಾಗೂ ಸಗಟು ಲಾಭಾಂಶದ ಪಾವತಿಯಲ್ಲಿ ವಿಳಂಬವನ್ನು ನಿವಾರಿಸಲು FIST Application ಮೂಲಕ ಲಾಭಾಂಶವನ್ನು ನೇರವಾಗಿ ಪಾವತಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬಜೆಟ್ 2026 – ಕರ್ನಾಟಕದಲ್ಲಿ 12 ಹೊಸ ಪೊಲೀಸ್ ಠಾಣೆ
ದಾಸೋಹ ಯೋಜನೆಯಡಿ ಈಗಾಗಲೇ ರಾಜ್ಯಾದ್ಯಂತ 274 ಕಲ್ಯಾಣ ಸಂಸ್ಥೆಗಳ 32,059 ಫಲಾನುಭವಿಗಳಿಗೆ 14 ಕೋಟಿ ರೂ. ವೆಚ್ಚದಲ್ಲಿ ಆಹಾರ ಭದ್ರತೆಯನ್ನು ಒದಗಿಸಲಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ 34 ಹೊಸ ಕಲ್ಯಾಣ ಸಂಸ್ಥೆಗಳಲ್ಲಿ ಇರುವ 6,701 ಫಲಾನುಭವಿಗಳಿಗೂ ವಿಸ್ತರಿಸಲಾಗುವುದು.

