ಕೋಲ್ಕತ್ತಾ: ಫಿನ್ ಅಲೆನ್ ( Finn Allen ) ಅವರ ಸಿಡಿಲಬ್ಬರದ ಶತಕದ ಬ್ಯಾಟಿಂಗ್ ನೆರವಿನಿಂದ ಸೆಮಿಫೈನಲ್ ನಲ್ಲಿ ಹರಿಣಗಳ ಪಡೆಯನ್ನು 9 ವಿಕೆಟ್ ಅಂತರದಿಂದ ಭರ್ಜರಿಯಾಗಿ ಸೋಲಿಸಿದ ಕಿವೀಸ್ ರಾಜಾರೋಷವಾಗಿ ಫೈನಲ್ ಗೆ ಜಿಗಿದಿದೆ.
33 ಎಸೆತಗಳನ್ನು ಎದುರಿಸಿದ ಅಲೆನ್ ಬರೋಬ್ಬರಿ 8 ಸಿಕ್ಸರ್, 10 ಬೌಂಡರಿ ಚಚ್ಚುವ ಮೂಲಕ ಸ್ಫೋಟಕ ಶತಕ ಬಾರಿಸಿದ ನ್ಯೂಜಿಲೆಂಡ್‌ನ ( New Zealand ) ಜಯದ ರೂವಾರಿಯಾದರು. ಅಲ್ಲದೇ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿವೇಗದ ಶತಕ ಬಾರಿಸಿದ ವಿಶ್ವದಾಖಲೆಯನ್ನೂ ನಿರ್ಮಿಸಿದ್ರು.
ಈಸ್ಟೋನಿಯಾದ ಸಾಹಿಲ್ ಚೌಹಾನ್ ಅವರು 2024 ರಲ್ಲಿ ಸಿಪ್ರಸ್ ತಂಡದ ವಿರುದ್ಧ 27 ಎಸೆತಗಳಲ್ಲಿ ಶತಕ ಗಳಿಸಿರುವುದು ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಶತಕವಾಗಿದೆ. ಇನ್ನು 2016 ರಲ್ಲಿ ವೆಸ್ಚ್ ಇಂಡೀಸ್ ನ ಕ್ರಿಸ್ ಗೇಲ್ ಅವರು ಇಂಗ್ಲೆಂಡ್ ವಿರುದ್ಧ 47 ಎಸೆತಗಳಲ್ಲಿ ಶತಕ ಬಾರಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.

ಫೆ.5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ 2ನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದ ವಿಜೇತರು 8 ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಪೇರಿಸಿತು. ಈ ಮೊತ್ತ ಲೆಕ್ಕಕ್ಕೇ ಇಲ್ಲ ಎಂಬಂತೆ ಆಡಿದ ನ್ಯೂಜಿಲೆಂಡ್ ತಂಡ ಇನ್ನೂ 43 ಎಸೆತಗಳು ಹಾಗೂ 9 ವಿಕೆಟ್‌ಗಳು ಬಾಕಿ ಇರುವಂತೆ 9 ವಿಕೆಟ್‌ಗ ಗುರಿ ತಲುಪಿತು.
ಕಿವೀಸ್ ಪರ ಅಲೆನ್ 33 ಎಸೆತಗಳಲ್ಲಿ ಅಜೇಯ 100 ರನ್ (8 ಸಿಕ್ಸರ್, 10 ಬೌಂಡರಿ) ಚಚ್ಚಿದ್ರೆ, ಟಿಮ್ ಸೈಫರ್ಟ್ 33 ಎಸೆತಗಳಲ್ಲಿ 58 ರನ್ (2 ಸಿಕ್ಸರ್, 7 ಬೌಂಡರಿ) ಬಾರಿದರು. ಕೊನೆಯಲ್ಲಿ ರಚಿನ್ ರವೀಂದ್ರ 11 ಎಸೆತಗಳಲ್ಲಿ 13 ರನ್ ಗಳಿಸಿ ಅಜೇಯರಾಗುಳಿದರು.

