ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕ (US-Israel Strikes) ಇರಾನ್ (Iran) ಮೇಲೆ ಜಂಟಿ ದಾಳಿ ನಡೆಸಿ ಮಧ್ಯಪ್ರಾಚ್ಯವನ್ನು ಹೊಸ ಸಂಘರ್ಷಕ್ಕೆ ದೂಡಿದೆ. ಇದರ ಬೆನ್ನಲ್ಲೇ ಇರಾನ್ ಶನಿವಾರ ಯುಎಇಯ ಅಬುಧಾಬಿ ಮತ್ತು ದುಬೈ, ಕತಾರ್‌ನ ದೋಹಾ ಮತ್ತು ಸೌದಿ ಅರೇಬಿಯಾದ ರಿಯಾದ್ ಮೇಲೆ ದಾಳಿ ಮಾಡಿದೆ.
ಅಬುಧಾಬಿಯ ವಸತಿ ಪ್ರದೇಶದಲ್ಲಿ ಕೆಲವು ಕ್ಷಿಪಣಿ ಅವಶೇಷಗಳು ಬಿದ್ದ ಕಾರಣ ಏಷ್ಯಾದ ಪ್ರಜೆಯೊಬ್ಬ ಸಾವನ್ನಪ್ಪಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ‘ಇದು ಅಪಾಯಕಾರಿ ಉಲ್ಬಣ, ನಾಗರಿಕರ ಸುರಕ್ಷತೆಗೆ ಬೆದರಿಕೆ ಹಾಕುವ ಮತ್ತು ಸ್ಥಿರತೆಯನ್ನು ಹಾಳು ಮಾಡುವ ಹೇಡಿತನದ ಕೃತ್ಯವಾಗಿದೆ’ ಎಂದು ಸಚಿವಾಲಯ ಬೇಸರ ವ್ಯಕ್ತಪಡಿಸಿದೆ. ಇದನ್ನೂ ಓದಿ: ಇಸ್ರೇಲ್-ಅಮೆರಿಕ ದಾಳಿ – ಇರಾನ್‌ನಲ್ಲಿ ವಿದ್ಯಾರ್ಥಿಗಳು ಸೇರಿ 40 ಮಂದಿ ಸಾವು
ನಮಗೆ ಸ್ಫೋಟದ ಸದ್ದು ಕೇಳಿಬಂತು. ಕ್ಷಿಪಣಿಗಳು ಆಕಾಶಾದಾದ್ಯಂತ ಹಾರಾಡುತ್ತಿರುವುದು ಕಂಡುಬಂತು. ಅದೊಂದು ದೊಡ್ಡ ಸ್ಫೋಟವಾಗಿತ್ತು. ಸ್ಫೋಟದ ತೀವ್ರತೆಗೆ ಕಿಟಕಿಗಳು ನಡುಗಿದವು ಎಂದು ದುಬೈ ನಿವಾಸಿಗಳು ತಿಳಿಸಿದ್ದಾರೆ.
ಈ ಎಲ್ಲಾ ಮಧ್ಯಪ್ರಾಚ್ಯ ನಗರಗಳು ಅಮೆರಿಕನ್ ಪಡೆಗಳನ್ನು ಆಶ್ರಯಿಸಿವೆ. ಅಬುಧಾಬಿಯಲ್ಲಿ, ಯುಎಇ ವಾಯುಪಡೆ ಮತ್ತು ಯುಎಸ್ ವಾಯುಪಡೆ ಅಲ್ ಧಾಫ್ರಾ ವಾಯುನೆಲೆಯನ್ನು ಹಂಚಿಕೊಂಡಿವೆ. ದುಬೈನ ಜೆಬೆಲ್ ಅಲಿ ಬಂದರು ಮಧ್ಯಪ್ರಾಚ್ಯದಲ್ಲಿ ಯುಎಸ್ ನೌಕಾಪಡೆಯ ಅತಿದೊಡ್ಡ ಸಂಪರ್ಕ ಬಂದರು ಆಗಿದ್ದು, ಇದು ನಿಯಮಿತವಾಗಿ ಅಮೆರಿಕನ್ ವಿಮಾನವಾಹಕ ನೌಕೆಗಳು ಮತ್ತು ಇತರ ಹಡಗುಗಳಿಗೆ ಆತಿಥ್ಯ ವಹಿಸುತ್ತದೆ. ಇದನ್ನೂ ಓದಿ: ಇಸ್ರೇಲ್ ಏರ್‌ಸ್ಪೇಸ್ ಬಂದ್; ಏರ್ ಇಂಡಿಯಾ, ಇಂಡಿಗೋ ವಿಮಾನಗಳು ತುರ್ತು ಯೂ-ಟರ್ನ್
ದೋಹಾದಲ್ಲಿ 24 ಹೆಕ್ಟೇರ್ ವಿಸ್ತೀರ್ಣದ ಅಲ್ ಉದೈದ್ ವಾಯುನೆಲೆಯು ಯುಎಸ್ ಸೆಂಟ್ರಲ್ ಕಮಾಂಡ್‌ನ ಮುಂಚೂಣಿ ಪ್ರಧಾನ ಕಚೇರಿಯಾಗಿದೆ. ಸೌದಿ ಅರೇಬಿಯಾದಲ್ಲಿ ಅಮೆರಿಕ 2,000 ಕ್ಕೂ ಹೆಚ್ಚು ಸೈನಿಕರನ್ನು ಹೊಂದಿದೆ ಎಂದು ವರದಿಯಾಗಿದೆ. ಅವರಲ್ಲಿ ಕೆಲವರು ರಿಯಾದ್‌ನಿಂದ ಸುಮಾರು 60 ಕಿ.ಮೀ ದಕ್ಷಿಣದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯಲ್ಲಿ ನೆಲೆಸಿದ್ದಾರೆ. ಈ ನೆಲೆಯು ಪೇಟ್ರಿಯಾಟ್ ಕ್ಷಿಪಣಿ ಬ್ಯಾಟರಿಗಳು ಮತ್ತು ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಸಿಸ್ಟಮ್‌ಗಳು ಸೇರಿದಂತೆ ಯುಎಸ್ ಸೇನಾ ಸ್ವತ್ತುಗಳನ್ನು ಬೆಂಬಲಿಸುತ್ತದೆ.

