ಬೆಂಗಳೂರು: ಮೆಟ್ರೋ (Namma Metro) ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಆದರೆ, ಈಗ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ. ದರ ಏರಿಕೆ ಆಗೋದು ನಿಶ್ಚಿತ ಎನ್ನಲಾಗುತ್ತಿದೆ.
ಕಳೆದ ಬಾರಿ 5% ಮೆಟ್ರೋ ದರ ಏರಿಕೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿತ್ತು. ಮೆಟ್ರೋ ಖರ್ಚು ವೆಚ್ಚಗಳ ಬಗ್ಗೆ ಆಡಿಟ್ ಮಾಡಿ ಅಂತ ಬಿಎಂಆರ್‌ಸಿಎಲ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸೂಚಿಸಿದ್ದರು. ಬಿಎಂಆರ್‌ಸಿಎಲ್ (BMRCL) ಆಂತರಿಕ ಅಡಿಟ್ ಮಾಡಿದೆ. ಮೆಟ್ರೋ ನಿರ್ವಹಣೆ, ಖರ್ಚು ವೆಚ್ಚ, ಸಿಬ್ಬಂದಿ ಸಂಬಳ, ಇಂಧನ ವೆಚ್ಚ ಎಲ್ಲದರ ಬಗ್ಗೆ ಆಡಿಟ್ ಮುಗಿದಿದ್ದು, ಡಿಸಿಎಂ ಅವರ ಗಮನಕ್ಕೆ ತರಲು ಬಿಎಂಆರ್‌ಸಿಎಲ್ ಮುಂದಾಗುತ್ತಿದೆ. ಆಡಿಟ್ ಮುಗಿದ ಹಿನ್ನೆಲೆ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ. ದರ ಏರಿಕೆ ಆಗಲಿದೆ ಅಂತ ಹೇಳಲಾಗುತ್ತಿದೆ. ನಿಗದಿಯಾಗಿದ್ದ 5% ದರದಲ್ಲಿ ಇಳಿಕೆ ಆಗಬಹುದು ಅಥವಾ ಏರಿಕೆ ಆದರೂ ಆಗಬಹುದು ಎಂಬ ಚರ್ಚೆ ಜೋರಾಗಿದೆ. ಇದನ್ನೂ ಓದಿ: ಸ್ನೇಹಿತನ ಅಕೌಂಟ್ ಬಳಸಿ ಸೈಬರ್ ವಂಚನೆ – ಬರೋಬ್ಬರಿ 7 ಕೋಟಿ ವರ್ಗಾವಣೆ
ನಿಗದಿ ಆಗಿದ್ದ 5% ದರದಲ್ಲಿ 1% ಅಥವಾ 2% ಗೆ ದರ ನಿಗದಿ ಮಾಡಬಹುದು ಅಂತಾ ಹೇಳಲಾಗುತ್ತಿದೆ. ಅದಕ್ಕಿಂತ ಜಾಸ್ತಿ ಆಗಬಹುದು ಅಂತಾ ಕೂಡ ಚರ್ಚೆ ಇದೆ. ಆದರೆ, ದರ ಇಳಿಕೆ ಅಥವಾ ಏರಿಕೆ ಆಗಬೇಕು ಅಂದರೆ ಹೊಸ ದರ ನಿಗದಿ ಸಮಿತಿ ರಚನೆ ಆಗಬೇಕು. ಅ ನಿಟ್ಟಿನಲ್ಲಿ ಆಡಿಟ್ ಮುಕ್ತಾಯ ಆದ ಹಿನ್ನೆಲೆ ಮೆಟ್ರೋ ಬೋರ್ಡ್ ಮೀಟಿಂಗ್ ಸಮಯ ನಿಗದಿ ಮಾಡುವ ವಿಚಾರವನ್ನ ಬಿಎಂಆರ್‌ಸಿಎಲ್ ಎಂಡಿ ಅವರು ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಲಿದ್ದಾರೆ. ಬೋರ್ಡ್ ಮೀಟಿಂಗ್ ಬಳಿಕ ಎಷ್ಟು ದರ ಏರಿಕೆ ಅಗುತ್ತೆ ಎನ್ನುವುದಕ್ಕೆ ಸ್ಪಷ್ಟನೆ ಸಿಗಲಿದೆ.

