ಬೆಂಗಳೂರು: ಸರ್ಕಾರದಿಂದ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದ ಹಿನ್ನೆಲೆಯಲ್ಲಿ ನಾಳೆಯಿಂದ ನಡೆಸಲು ಆಯೋಜಿಸಿದ್ದ ಸಾರಿಗೆ ಮುಷ್ಕರವನ್ನು (Transport Strike) ನೌಕರರು ಕೈಬಿಟ್ಟಿದ್ದಾರೆ. ಮುಷ್ಕರ ಕೈಬಿಟ್ಟಿದ್ದರಿಂದ ಬಿಎಂಟಿಸಿ (BMTC) ಮತ್ತು ಕೆಎಸ್ಆರ್ಟಿಸಿ (KSRTC) ಸೇರಿದಂತೆ ಎಲ್ಲಾ ನಿಗಮಗಳ ಬಸ್ಸುಗಳು ಎಂದಿನಂತೆ ರಸ್ತೆಗೆ ಇಳಿಯಲಿವೆ.
ಇಂದು ಬೆಂಗಳೂರಿನ (Bengalaru) ಫ್ರೀಡಂ ಪಾರ್ಕ್ನಲ್ಲಿ ನಡೆದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ (Joint Action Committee) ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ನೌಕರರ ಬೇಡಿಕೆ, ಸರ್ಕಾರದ ಭರವಸೆ, ಮುಂದಿನ ಹೋರಾಟದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮುಷ್ಕರ ಕೈ ಬಿಡುವ ತೀರ್ಮಾನ ಕೈಗೊಳ್ಳಲಾಯಿತು. ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ಮುಷ್ಕರವನ್ನು ಕೈಬಿಟ್ಟು ಭರವಸೆ ಈಡೇರಿಕೆಗೆ ಮಾರ್ಚ್ 2ರ ಹೊಸ ಡೆಡ್ಲೈನ್ ನೀಡಲಾಯಿತು.
ಮುಷ್ಕರ ಕೈಬಿಟ್ಟರೂ ಸತ್ಯಾಗ್ರಹ ಹೋರಾಟವನ್ನು ಕೈಬಿಡದಿರಲು ನೌಕರರು ನಿರ್ಧರಿಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 2 ರಂದು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ. . ಇದನ್ನೂ ಓದಿ: Transport Strike – 38ರ ಬದಲು 26 ತಿಂಗಳ ಹಿಂಬಾಕಿಗೆ ಸರ್ಕಾರ ಒಪ್ಪಿಗೆ
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರ ವಾಪಸ್ ಪಡೆದಿದ್ದಕ್ಕೆ ನೌಕರರು ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗವು ನಡೆಯಿತು. ನಮ್ಮ ಒಪ್ಪಿಗೆ ಇಲ್ಲದೇ ಸಂಘಟನೆ ಮುಷ್ಕರ ಕೈಬಿಟ್ಟ ನಿರ್ಧಾರವನ್ನು ವಿರೋಧಿಸಿದರು. ಸಂಘಟನೆಯ ನಿರ್ಧಾರವನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು. ಬೇಡಿಕೆ ಈಡೇರಿಸುವರಗೆ ನಾವು ಹೋರಾಟ ಮಾಡುತ್ತೇವೆ ಎಂದು ಪ್ರತಿಭಟಿಸಿದರು. ಕೊನೆಗೆ ಜಂಟಿ ಸಮಿತಿ ಸದಸ್ಯರು ಮಾತಿಗೆ ಬೆಲೆ ನೀಡಿ ಒಲ್ಲದ ಮನಸ್ಸಿನಿಂದ ಸಾರಿಗೆ ನೌಕರರು ಮುಷ್ಕರ ಕೈಬಿಡಲು ಒಪ್ಪಿಗೆ ನೀಡಿದರು.
ಬೆಂಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನೌಕರರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಸರ್ಕಾರದ ಭರವಸೆಗಳ ಬಗ್ಗೆ ಮತ್ತೊಮ್ಮೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಅಂತಿಮ ಹಂತದ ಹೋರಾಟದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕಾರ್ಯರ್ಶಿ ವಿಜಯ್ ಭಾಸ್ಕರ್ ಮಾತನಾಡಿ, ಏಕಾಏಕಿ ನಾವು ಜನರಿಗೆ ತೊಂದರೆ ನೀಡುವುದಿಲ್ಲ. ನಾಳೆಯಿಂದನೇ ಬಸ್ ಬಂದ್ ಮಾಡುತ್ತೇವೆ ಎಂದು ಹೇಳುವುದಿಲ್ಲ. ಸರ್ಕಾರವೂ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಮುಷ್ಕರ ಅನಿವಾರ್ಯ. ಇನ್ನೊಂದು 550 ಕೋಟಿ ರೂ. ನೀಡಿದರೆ ಮುಷ್ಕರದ ಅಗತ್ಯವೇ ಇಲ್ಲ ಎಂದು ಹೇಳಿದರು.
ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಮಾತನಾಡಿ, ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬಂದ್ ಮಾಡುವುದಿಲ್ಲ ಎಂಬ ನಂಬಿಕೆಯಿದೆ.ಈಗಾಗಲೇ ಸಾರಿಗೆ ಸಚಿವರ ಜೊತೆ ಚರ್ಚೆ ಮಾಡುತ್ತೇವೆ. ಮತ್ತೆ ಸಾರಿಗೆ ಮುಖಂಡರ ಜೊತೆ ಸಭೆ ಗೆ ಶೀಘ್ರ ಸಭೆಗೆ ದಿನಾಂಕ ನಿಗದಿ ಮಾಡುತ್ತೇವೆ ಎಂದು ತಿಳಿಸಿದರು.
ನೌಕರರ ಪ್ರಮುಖ ಬೇಡಿಕೆಗಳು ಏನು?
38 ತಿಂಗಳ ಹಿಂಬಾಕಿ ಹಣ ನೀಡಬೇಕು, ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು, ಕಾರ್ಮಿಕರ ಕಿರುಕುಳ ನಿಲ್ಲಬೇಕು ಹಾಗೂ 1-1-2024 ರಿಂದ ವೇತನ ಜಾರಿಗೊಳಿಸಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ.

