-ರಾಜ್ಯದ 58 ಅಣೆಕಟ್ಟುಗಳ ಸುರಕ್ಷತೆಗೆ 1,500 ಕೋಟಿ ವೆಚ್ಚದಲ್ಲಿ ದುರಸ್ಥಿ ಕಾಮಗಾರಿ
-10 ದೇಶಗಳ 25 ತಜ್ಞರು ಸೇರಿದಂತೆ 400ಕ್ಕೂ ಹೆಚ್ಚು ಮಂದಿ ಭಾಗಿ
ನವದೆಹಲಿ: ನಮ್ಮ ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಫೆ.13 ಹಾಗೂ 14ರಂದು ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ಎರಡು ದಿನಗಳ ಸಮ್ಮೇಳನ ನಡೆಯಲಿದ್ದು, ಶುಕ್ರವಾರ (ಫೆ.13) ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಭಾರತದಲ್ಲಿ 6,628 ಅಣೆಕಟ್ಟುಗಳಿದ್ದು, ಕರ್ನಾಟಕ 231 ಅಣೆಕಟ್ಟುಗಳನ್ನು ಹೊಂದಿದೆ. ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಒಂದೂವರೆ ವರ್ಷಗಳ ಹಿಂದೆ ಜೈಪುರದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿತ್ತು. ಜಲಶಕ್ತಿ ಸಚಿವಾಲಯ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಈ ಸಮ್ಮೇಳನ ಆಯೋಜಿಸುತ್ತಿದೆ. ಇದಕ್ಕೆ ಕೇಂದ್ರ ಜಲಶಕ್ತಿ ಆಯೋಗವು ಅನೇಕ ಸಲಹೆ ಮಾರ್ಗದರ್ಶನ ನೀಡಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಸ್ಟಂಟ್‌ಗಾಗಿ ವಿಷಕಾರಿ ಏಡಿ ತಿಂದು ಫುಡ್ ವ್ಲಾಗರ್ ಸಾವು
ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ 46 ಸಂಶೋಧನಾ ವರದಿಗಳನ್ನು ಮಂಡಿಸಲು ಈ ಸಮ್ಮೇಳನದಲ್ಲಿ ನಾವು ಅನುಮತಿ ನೀಡಿದ್ದೇವೆ. ಕೇಂದ್ರ ಸಚಿವರಾದ ವಿ. ಸೋಮಣ್ಣ, ರಾಜ್ ಭೂಷಣ್ ಚೌಧರಿ, ರಾಜ್ಯ ಸಚಿವ ಬೋಸರಾಜು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 10 ದೇಶಗಳ 25 ಅಂತಾರಾಷ್ಟ್ರೀಯ ತಜ್ಞರು ಸೇರಿದಂತೆ 400ಕ್ಕೂ ಹೆಚ್ಚು ಜನ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ತಾಂತ್ರಿಕ ವಿಚಾರ ಸಂಕಿರಣ, ವಸ್ತುಪ್ರದರ್ಶನ ನಡೆಯಲಿವೆ. ಕರ್ನಾಟಕದ ಹಿತಾಸಕ್ತಿ ಕಾಪಾಡಲು ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ. ಅಣೆಕಟ್ಟುಗಳು ನೀರಾವರಿ, ಇಂಧನ ಉತ್ಪಾದನೆ, ಪ್ರವಾಹ ನಿಯಂತ್ರಣ, ನೀರು ಸರಬರಾಜು ಹಾಗೂ ಮಣ್ಣಿನ ಸಂರಕ್ಷಣೆಯ ಆಧಾರವಾಗಿವೆ. ಸುದೀರ್ಘ ಕಾಲದ ಯೋಜನೆ ಗಮನದಲ್ಲಿಟ್ಟುಕೊಂಡು ಈ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
– ರಾಜ್ಯದ 58 ಅಣೆಕಟ್ಟುಗಳ ಸುರಕ್ಷತೆಗೆ 1,500 ಕೋಟಿ ರೂ. ವೆಚ್ಚದಲ್ಲಿ ದುರಸ್ಥಿ ಕಾಮಗಾರಿ
ನಮ್ಮಲ್ಲಿರುವ 75% ಅಣೆಕಟ್ಟುಗಳು 25 ವರ್ಷಕ್ಕಿಂತ ಹಳೆಯದಾಗಿದ್ದು, ಈ ವಿಚಾರದಲ್ಲಿ ರಾಜಿಯಾಗಲು ನಾವು ಬಯಸುವುದಿಲ್ಲ. ಪ್ರತಿ ವರ್ಷ ಅಣೆಕಟ್ಟುಗಳಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಿದೆ. ಅಣೆಕಟ್ಟುಗಳಲ್ಲಿ ಹೈಡ್ರೋ ಪವರ್, ಕುಡಿಯುವ ನೀರಿನ ಯೋಜನೆಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ನಾವು ಅಣೆಕಟ್ಟಿನ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕಿದೆ. ಈಗಾಗಲೇ 19 ರಾಜ್ಯಗಳಲ್ಲಿ 733 ಅಣೆಕಟ್ಟುಗಳ ಸುರಕ್ಷತೆಗೆ 10,211 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರ ವಿಶ್ವಬ್ಯಾಂಕ್ ಹಾಗೂ ಎಐಐಬಿಯ ಬಾಹ್ಯ ಬೆಂಬಲದೊಂದಿಗೆ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ (ಆಖIP) ಎರಡನೇ ಹಂತವನ್ನು ಅನುಷ್ಠಾನಗೊಳಿಸುತ್ತಿದೆ. ಕರ್ನಾಟಕದಲ್ಲಿ 58 ಅಣೆಕಟ್ಟುಗಳ ಸುರಕ್ಷತೆಗೆ 1,500 ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ. ಈಗಾಗಲೇ ತುಂಗಭದ್ರಾ ಅಣೆಕಟ್ಟು ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾರ್ಯ ಆರಂಭವಾಗಿದೆ. ಅದೇ ರೀತಿ ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿದ್ದು, ಆದ್ಯತೆ ಮೇರೆಗೆ ದುರಸ್ಥಿ ಕಾಮಗಾರಿ ಕೈಗೊಂಡಿದ್ದೇವೆ ಎಂದು ವಿವರಿಸಿದರು.ಇದನ್ನೂ ಓದಿ: ವಾಯುಸೇನೆಗೆ 114 ರಫೇಲ್ ವಿಮಾನ – ಅತಿದೊಡ್ಡ ರಕ್ಷಣಾ ಖರೀದಿಗೆ ಅನುಮತಿ

