ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದಿಮೆಯಾದ ಕರ್ನಾಟಕ ರಾಜ್ಯ ಬೀಜ ನಿಗಮವು (Karnataka State Seed Corporation) 2024-25ನೇ ಸಾಲಿನಲ್ಲಿ ಅತ್ಯುತ್ತಮ ಆರ್ಥಿಕ ಪ್ರಗತಿ ಸಾಧಿಸಿದ್ದು, ರಾಜ್ಯ ಸರ್ಕಾರಕ್ಕೆ ತನ್ನ ಲಾಭಾಂಶದ ಪಾಲಾಗಿ 1.69 ಕೋಟಿ ರೂ. ಚೆಕ್ಕನ್ನು ಹಸ್ತಾಂತರಿಸಿದೆ.
ಕಳೆದ 53 ವರ್ಷಗಳಿಂದ ರಾಜ್ಯದ ರೈತರಿಗೆ ಸೇವೆ ಸಲ್ಲಿಸುತ್ತಿರುವ ನಿಗಮವು, ಪ್ರಸಕ್ತ ಸಾಲಿನಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ತಲುಪಿದೆ. ಇದನ್ನೂ ಓದಿ: ಡಿಕೆಶಿ ಅನುಪಸ್ಥಿತಿಯಲ್ಲಿ ಬಜೆಟ್ ಪೂರ್ವಸಿದ್ಧತಾ ಸಭೆ ನಡೆಯುತ್ತೆ: ಸಿಎಂ ಟಕ್ಕರ್
2024-25ನೇ ಹಣಕಾಸು ವರ್ಷದಲ್ಲಿ ನಿಗಮವು ಒಟ್ಟು 349.72 ಕೋಟಿ ರೂ. ವಹಿವಾಟು ನಡೆಸಿದೆ. ಈ ಅವಧಿಯಲ್ಲಿ ಸಂಸ್ಥೆಯು 13.48 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ನಿವ್ವಳ ಲಾಭದ ಶೇ. 30 ರಷ್ಟು ಭಾಗವಾದ 1.69 ಕೋಟಿ ರೂ. ಲಾಭಾಂಶದ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ನಿಗಮವು ಪ್ರಸ್ತುತ 24 ಬೆಳೆಗಳ 153 ವಿವಿಧ ತಳಿಗಳ ಪ್ರಮಾಣಿತ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುತ್ತಿದೆ. ಸುಮಾರು 4.50 ಲಕ್ಷ ರೈತರು ನಿಗಮದ ಈ ಬಿತ್ತನೆ ಬೀಜಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
2026 ನೇ ಫೆಬ್ರವರಿ 06 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಮ್ಮುಖದಲ್ಲಿ ಬೀಜ ನಿಗಮದ ಅಧ್ಯಕ್ಷ ಎಂ. ಅಂಜನಪ್ಪ ಲಾಭಾಂಶದ ಚೆಕ್ಕನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು. ಇದನ್ನೂ ಓದಿ: ಸಿಎಂ-ಡಿಸಿಎಂ ನಡುವೆ ಕುರ್ಚಿ ಗಲಾಟೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ: ಬಸನಗೌಡ ದದ್ದಲ್
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೃಷಿ ಆಯುಕ್ತ ವೈ.ಎಸ್.ಪಾಟೀಲ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶೋಕ.ಕೆ.ಜಿ ಉಪಸ್ಥಿತರಿದ್ದರು ಎಂದು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

