– 23 ವರ್ಷದ ಯುವತಿಯ ಹುಚ್ಚಾಟ, ಆತಂಕದಲ್ಲಿ ಕುಟುಂಬ
– ಲವ್ವರ್ ಜೊತೆ ಪುತ್ರಿಯ ಚಾಟ್ ನೋಡಿ ಹೌಹಾರಿದ ತಾಯಿ
ಬೆಂಗಳೂರು: ತಾಯಿ (Mother) ಮತ್ತು ದೊಡ್ಡಮ್ಮನ ಖಾಸಗಿ ಚಿತ್ರಗಳನ್ನು ಪ್ರೇಯಸಿಯೇ ಪ್ರಿಯತಮನಿಗೆ (Lover) ಕಳುಹಿಸಿದ ಶಾಕಿಂಗ್ ಪ್ರಕರಣ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ತನ್ನ 23 ವರ್ಷದ ಮಗಳು (Daughter) ತನ್ನ ಖಾಸಗಿ ಛಾಯಾಚಿತ್ರಗಳನ್ನು ಮತ್ತು ತನ್ನ ಸಹೋದರಿಯ ನಗ್ನ ಚಿತ್ರಗಳನ್ನು ವರುಣ್ ಅಲಿಯಾಸ್ ಗಿರಿಧರ್ ಎಂಬ ವ್ಯಕ್ತಿಗೆ ಕಳುಹಿಸಿದ್ದಾಳೆ. ಇದು ಆನ್‌ಲೈನ್ ಶೋಷಣೆ ಮತ್ತು ವೈಯಕ್ತಿಕ ಡೇಟಾದ ದುರುಪಯೋಗದ ಭಯವನ್ನು ಹುಟ್ಟುಹಾಕಿದೆ ಎಂದು ಆರೋಪಿಸಿ 49 ವರ್ಷದ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕಳೆದ 25 ವರ್ಷಗಳಿಂದ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕುಟುಂಬ ನೆಲೆಸಿದ್ದು ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು ಬಿಬಿಎ ಓದಿದ್ದು ನಿರುದ್ಯೋಗಿಯಾಗಿದ್ದಾಳೆ. ಕಿರಿಯ ಮಗಳು ತನ್ನ ಅಧ್ಯಯನ ಮಾಡುತ್ತಿದ್ದು ತಂದೆ ಅಡುಗೆ ಕೆಲಸ ಮಾಡುತ್ತಿದ್ದಾರೆ.
ಒಂದು ವರ್ಷದ ಹಿಂದೆ ಹಿರಿಯ ಮಗಳು ಶೈಕ್ಷಣಿಕ ಮತ್ತು ವೃತ್ತಿಯ ಉದ್ದೇಶಕ್ಕಾಗಿ ಸ್ಮಾರ್ಟ್‌ಫೋನ್ ಬೇಕೆಂದು ತಂದೆಯ ಬಳಿ ಕೇಳಿಕೊಂಡಿದ್ದಾಳೆ. ತಂದೆ ಮಗಳ ಕೋರಿಕೆಯಂತೆ ಸ್ಮಾರ್ಟ್‌ಫೋನ್ ತೆಗೆಸಿಕೊಟ್ಟಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಮನೆ ಕೆಲಸ ಮಾಡುತ್ತಿದ್ದಾಗ ತಾಯಿ ಮಗಳಿದ್ದ ಕೋಣೆಯನ್ನು ಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಗಳು ವಿಡಿಯೋ ಕರೆಯಲ್ಲಿ ಯುವಕನ ಜೊತೆಗೆ ಮಾತನಾಡುತ್ತಿದ್ದಳು. ತಾಯಿ ಪ್ರವೇಶಿಸುತ್ತಿದ್ದಂತೆ ಮಗಳು ಕರೆಯನ್ನು ದಿಢೀರ್ ಕಡಿತ ಮಾಡಿದ್ದಾಳೆ. ಮಗಳು ಕರೆಯನ್ನು ಕಡಿತ ಮಾಡಿದ ಬಳಿಕ ತಾಯಿಗೆ ಅನುಮಾನ ಬರಲು ಆರಂಭವಾಗಿದೆ.
ನೀನು ಫೋನಿನಲ್ಲಿ ಮಾತನಾಡಿದ್ದು ಯಾರ ಜೊತೆ ಎಂಬ ತಾಯಿಯ ಪ್ರಶ್ನೆಗೆ ಮಗಳು ಸರಿಯಾಗಿ ಉತ್ತರ ನೀಡಲಿಲ್ಲ. ಈ ವಿಚಾರ ಕೇಳಿದ್ದಕ್ಕೆ ರೇಗಾಡುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಆಪ್ತ ಸಂಬಂಧಿಕರ ಮೂಲಕ ಸತ್ಯ ಹೊರತೆಗೆಯುವ ಪ್ರಯತ್ನ ಮಾಡಿದ್ದಾರೆ.
ಪೋಷಕರು ಇತರ ಸಂಬಂಧಿಕರಿಗೆ ಮಾಹಿತಿ ನೀಡಿ ಪುತ್ರಿಗೆ ಸಲಹೆ ನೀಡಲು ಕೇಳಿಕೊಂಡಿದ್ದಾರೆ. ಸಂಬಂಧಿಕರು ಆಕೆಯ ಜೊತೆ ಮಾತನಾಡಿದಾಗಲೂ ಆಕೆ ಯುವಕನ ಬಗ್ಗೆ ಹೇಳಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲದೇ ಫೋನ್ ಪಾಸ್‌ವರ್ಡ್ ನೀಡಲು ಸಾಧ್ಯವಿಲ್ಲ ಎಂದಿದ್ದಾಳೆ. ಹಲವು ಗಂಟೆಯ ಮನವೊಲಿಕೆ ಮಾಡಿದ ನಂತರ ಆಕೆಯ ಫೋನ್ ಪಾಸ್‌ವರ್ಡ್ ಪಡೆಯಲು ಯಶಸ್ವಿಯಾಗಿದ್ದಾರೆ.
ಪಾಸ್‌ವರ್ಡ್ ಹಾಕಿ ಫೋನಿನ ಫೋಟೋ ಗ್ಯಾಲರಿ ನೋಡುವಾಗ ಪೋಷಕರು, ಸಂಬಂಧಿಕರು ಶಾಕ್ ಆಗಿದ್ದಾರೆ. ತಾಯಿ ಮಲಗಿದ್ದಾಗ ತೆಗೆದ ಖಾಸಗಿ ಫೋಟೋ, ತಾಯಿಯ ಹಿರಿಯ ಸಹೋದರಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವರ ನಗ್ನ ಫೋಟೋಗಳು, ವಿಡಿಯೋಗಳು ಮೊಬೈಲಿನಲ್ಲಿ ಇರುವುದನ್ನು ನೋಡಿದ್ದಾರೆ. ಅಷ್ಟೇ ಅಲ್ಲದೇ ಆ ಫೋಟೋಗಳನ್ನು ಆಕೆ ಪ್ರಿಯಕರನಿಗೆ ಕಳುಹಿಸಿದ್ದನ್ನು ನೋಡಿ ಹೌಹಾರಿದ್ದಾರೆ.
ಗೆಳೆಯ ವರುಣ್ ಜೊತೆಗಿನ ಚಾಟ್‌ನಲ್ಲಿ ಯುವತಿಯೇ ತನ್ನ ಖಾಸಗಿ ಫೋಟೋಗಳನ್ನು ಆತನಿಗೆ ಕಳುಹಿಸಿದ್ದಳು. ಚಾಟ್ ಪರಿಶೀಲನೆ ಮಾಡುವಾಗ ನಿನ್ನ ಮತ್ತು ಕುಟುಂಬದವರ ಖಾಸಗಿ ಚಿತ್ರಗಳನ್ನು ಕಳುಹಿಸುವಂತೆ ವರುಣ್ ಮೆಸೇಜ್ ಮಾಡಿರುವುದು ಗಮನಕ್ಕೆ ಬಂದಿದೆ.
ಚಾಟ್ ನೋಡಿ ಆತಂಕಕ್ಕೆ ಒಳಗಾದ ಕುಟುಂಬ ಯುವತಿಗೆ ವರುಣ್ ಜೊತೆ ಮಾತನಾಡದಂತೆ ಸೂಚಿಸಿದ್ದಾರೆ. ಪೋಷಕರು ಎಚ್ಚರಿಕೆ ನೀಡಿದ್ದರೂ ಪುತ್ರಿ ವರುಣ್ ವಿಚಾರದಲ್ಲಿ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದಳು. ಒಂದು ವಾರದ ಹಿಂದೆ ಪುತ್ರಿ ನಾನು ಮದುವೆಯಾದರೆ ವರುಣ್‌ನನ್ನೇ ಆಗುತ್ತೇನೆ ಎಂದು ಪೋಷಕರಿಗೆ ಹೇಳಿ ಮನೆಯನ್ನೇ ತೊರೆದಿದ್ದಾಳೆ.
ವರುಣ್ ಯಾರು? ಏನು ಮಾಡುತ್ತಿದ್ದಾನೆ? ಎಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ಇಲ್ಲದ ಕಾರಣ ಪುತ್ರಿಯ ಸುರಕ್ಷತೆಗಾಗಿ ಪೋಷಕರು ಈಗ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಫೋಟೋ, ವಿಡಿಯೋಗಳನ್ನು ವರುಣ್ ಬೇರೆಯವರಿಗೆ ಕಳುಹಿಸಿರುವ ಸಾಧ್ಯತೆಯಿದೆ. ಪೋಷಕರ ಆರೋಪಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ವರುಣ್ ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

