ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Temple) ಶಿವರಾತ್ರಿ ಜಾತ್ರೆಗೆ (Mahashivratri Jatra) ಬರುವ ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತ ಹೈಅಲರ್ಟ್ ಘೋಷಿಸಿದೆ. ಇತ್ತೀಚಿನ ಚಿರತೆ ದಾಳಿಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಪಾದಯಾತ್ರಿಗಳು ಗುಂಪುಗೂಡಿ ಪ್ರಯಾಣಿಸಲು, ಕಾಡಿಗೆ ಒಬ್ಬರೇ ಹೋಗದಂತೆ ಸೂಚನೆ ನೀಡಿದೆ. ಭಕ್ತರು ಮೂತ್ರ ವಿಸರ್ಜನೆ, ಬಹಿರ್ದೆಸೆಗೆ ಕಾಡಿನ ಒಳ ಹೋಗದಂತೆ ಕಟ್ಟಪ್ಪಣೆ ವಿಧಿಸಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನೊಬ್ಬ ಇತ್ತೀಚೆಗೆ ಚಿರತೆ ದಾಳಿಗೆ ಬಲಿಯಾದ ಘಟನೆ ಬಳಿಕ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹೈಅಲರ್ಟ್ ಘೋಷಿಸಿದೆ. ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಪಾದಯಾತ್ರಿಗಳ ಸುರಕ್ಷತೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವೀಣ್ ಎಂಬ ಭಕ್ತ ಇತ್ತೀಚೆಗೆ ಸಾವನ್ನಪ್ಪಿದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತ ತುರ್ತು ಸಭೆ ನಡೆಸಿ ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಭಕ್ತರ ಮೇಲೆ ಹದ್ದಿನ ಕಣ್ಣು ಇಡಲು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿವೆ. ಇದನ್ನೂ ಓದಿ: ಪ್ರೇಮಿಗಳ ದಿನ ವಿಶ್ವವಿಖ್ಯಾತ ನಂದಿ ಗಿರಿಧಾಮ ಬಂದ್
ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗ ಮಧ್ಯೆ ಹೈಅಲರ್ಟ್ ಘೋಷಿಸಲಾಗಿದ್ದು, ಪ್ರತಿ ಕಿಲೋಮೀಟರ್‌ಗೂ ಒಂದೊಂದು ತಂಡವನ್ನು ನಿಯೋಜಿಸಲಾಗಿದೆ. ಒಟ್ಟು 8 ತಂಡಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ತಂಡಕ್ಕೂ ಬಂದೂಕು, ವಾಕಿಟಾಕಿ, ಮಚ್ಚು, ಲಾಠಿ ಹಾಗೂ ಪಟಾಕಿಗಳನ್ನು ವಿತರಿಸಲಾಗಿದೆ. ಡಿಆರ್‌ಎಫ್‌ಒ, ಪೊಲೀಸ್ ಸಿಬ್ಬಂದಿ, ವಾಚರ್ ಹಾಗೂ ಎಪಿಸಿ ಕ್ಯಾಂಪ್ ಸಿಬ್ಬಂದಿ ಸೇರಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಐದು ಸಿಬ್ಬಂದಿ ಈ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದಾರೆ.
ಪಾದಯಾತ್ರೆ ಮಾಡುವ ಭಕ್ತರು ಗುಂಪು ಗುಂಪಾಗಿ ಮಾತ್ರ ಬೆಟ್ಟ ಏರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಕಾಡಿನ ಒಳಗೆ ಒಬ್ಬರೇ ತೆರಳಬಾರದು. ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಗೆ ಕಾಡಿನೊಳಗೆ ಹೋಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಡ್ರೋನ್ ಕ್ಯಾಮೆರಾ ಮೂಲಕವೂ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ.
ಫೆಬ್ರವರಿ 7 ರಿಂದ 20 ರವರೆಗೆ ನಡೆಯಲಿರುವ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಯಾವುದೇ ಅನಾಹುತ ಸಂಭವಿಸದಂತೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಮನ್ವಯದಲ್ಲಿ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಇದನ್ನೂ ಓದಿ: ದಾವಣಗೆರೆ | ಸನ್ಯಾಸತ್ವ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ
ಜನವರಿ 21 ರಂದು ಮುಂಜಾನೆ ಮಲೆಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನಕ್ಕಾಗಿ ಮಂಡ್ಯದ ಚೀರನಹಳ್ಳಿ ಹಾಗೂ ನೆರೆಯ ಗ್ರಾಮಗಳಿಂದ 150 ಕ್ಕೂ ಹೆಚ್ಚು ಜನರು ಪಾದಯಾತ್ರೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಎಂಬವರ ಮೇಲೆ ಮುಗಿಬಿದ್ದಿದ್ದ ಚಿರತೆ ಕತ್ತು ಸೀಳಿ ರಕ್ತ ಹೀರಿ ಬಳಿಕ ಕಾಡಿನೊಳಕ್ಕೆ ಎಳೆದೊಯ್ದಿತ್ತು. ನಂತರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸರೆಹಿಡಿದಿತ್ತು. ಆ ಬಳಿಕ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೇಲೆ ನಿರ್ಬಂಧ ವಿಧಿಸಲಾಗಿದೆ.

