ದೇಶದೊಳಗೆ ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ತರಬಲ್ಲಂತಹ ವಿದೇಶಿಯರನ್ನು ನಿರ್ಬಂಧಿಸುವ ಸಲುವಾಗಿ ಅಮೆರಿಕ ಸರ್ಕಾರ ಕೆಲ ದೇಶಗಳ ನಿವಾಸಿಗಳಿಗೆ ವಲಸೆ ವೀಸಾ ನೀಡುವಿಕೆಯನ್ನು ಸ್ಥಗಿತಗೊಳಿಸಿದೆ. ಒಟ್ಟು 75 ʼಹೈ-ರಿಸ್ಕ್ʼ ದೇಶಗಳಿಗೆ ಅಮೆರಿಕದ ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿವರೆಗೆ ಫ್ರೀಜ್ ಮಾಡಲಾಗಿದೆ. ಹಾಗಿದ್ರೆ ವಲಸೆ ವೀಸಾ ಪ್ರಕ್ರಿಯೆಯನ್ನು ಅಮೆರಿಕ ಸ್ಥಗಿತಗೊಳಿಸಿದ್ದೇಕೆ? ಇದರ ಹಿಂದಿನ ಉದ್ದೇಶವೇನು? ವಲಸೆ ವೀಸಾ ನಿರ್ಬಂಧ ಭಾರತದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ವೀಸಾ ಪ್ರಕ್ರಿಯೆ ಸ್ಥಗಿತ ಏಕೆ?
ಸರ್ಕಾರದ ಕಲ್ಯಾಣ ಯೋಜನೆಗಳನ್ನು ಅವಲಂಬಿಸುವ ಜನರಿಂದ ವೀಸಾ ಅರ್ಜಿಗಳನ್ನು ತಿರಸ್ಕರಿಸುವ ಕಾರ್ಯಕ್ಕೆ ಚಾಲನೆ ನೀಡಿರುವ ಅಮೆರಿಕ, ರಾಷ್ಟ್ರೀಯತೆಯ ಆಧಾರದ ಮೇಲೆ ವಲಸೆ ವೀಸಾಗಳನ್ನು ಸಂಪೂರ್ಣವಾಗಿ ಅಮಾನತುಗೊಳಿಸಲು, ಅದೇ ಅಧಿಕಾರವನ್ನು ಬಳಸುವುದಾಗಿ ತಿಳಿಸಿದೆ.
ವೀಸಾ ನಿರ್ಬಂಧವು ವಲಸಿಗರಿಗೆ ಮಾತ್ರವೇ ಅನ್ವಯ ಆಗುವುದು. ವಲಸೆ ವೀಸಾ ಅರ್ಜಿ ಸಲ್ಲಿಸಿರುವವರ ಪೈಕಿ ಆಯ್ದ 75 ದೇಶಗಳ ಜನರ ಅರ್ಜಿ ಪ್ರಕ್ರಿಯೆ ಮುಂದುವರಿಯುವುದಿಲ್ಲ. ಆದರೆ, ಪ್ರವಾಸ, ಬ್ಯುಸಿನೆಸ್ ಇತ್ಯಾದಿ ತಾತ್ಕಾಲಿಕವಾಗಿ ಬಂದು ಹೋಗುವವರಿಗೆ ತಡೆ ಇರುವುದಿಲ್ಲ, ವೀಸಾ ನಿರಾಕರಿಸಲಾಗುವುದಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಸೊಮಾಲಿಯಾ, ರಷ್ಯಾ, ಇರಾನ್, ಅಫ್ಘಾನಿಸ್ತಾನ, ಬ್ರೆಜಿಲ್, ನೈಜೀರಿಯಾ ಮತ್ತು ಥೈಲ್ಯಾಂಡ್ ಸೇರಿದಂತೆ ಒಟ್ಟು 75 ದೇಶಗಳ ವಲಸೆ ವೀಸಾಗಳ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ವಲಸೆ ಇಲಾಖೆ (ಐಸಿಇ) ಸ್ಪಷ್ಟಪಡಿಸಿದೆ.
ಅಮೆರಿಕದಲ್ಲಿ ನೆಲೆಯೂರಿ ಸಾರ್ವಜನಿಕ ಸೌಲಭ್ಯವನ್ನು ಪಡೆದುಕೊಳ್ಳುವ ವಿದೇಶಿಗರ ಸಂಖ್ಯೆಯನ್ನು ಕಡಿತಗೊಳಿಸುವುದು ಅಧ್ಯಕ್ಷ ಟ್ರಂಪ್ ಅವರ ಉದ್ದೇಶವಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ.ವಲಸಿಗರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಮತ್ತು ಅಮೆರಿಕನ್ನರಿಗೆ ಆರ್ಥಿಕ ಹೊರೆಯಾಗಬಾರದು ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯದ ದೇಶಗಳ ವಲಸಿಗರು ಅಮೆರಿಕದ ಕಲ್ಯಾಣ ಕಾರ್ಯಕ್ರಮಗಳನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳಲು ವಿದೇಶಾಂಗ ಇಲಾಖೆ ತನ್ನ ಎಲ್ಲಾ ನೀತಿಗಳು, ನಿಯಮಗಳು ಮತ್ತು ಮಾರ್ಗಸೂಚಿಗಳ ಸಂಪೂರ್ಣ ಪರಿಶೀಲನೆ ನಡೆಸುತ್ತಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಈ ಸ್ಥಗಿತವು ಪ್ರವಾಸಿ ವೀಸಾಗಳಿಗೆ ಅನ್ವಯಿಸುವುದಿಲ್ಲ ನಿರ್ದಿಷ್ಟವಾಗಿ ವಲಸೆ ವೀಸಾ ಅರ್ಜಿದಾರರಿಗೆ ಮಾತ್ರ ಎಂದು ಇಲಾಖೆ ತಿಳಿಸಿದೆ. ಪ್ರವಾಸಿ ವೀಸಾಗಳು ವಲಸೆಯೇತರ ವೀಸಾಗಳಾಗಿವೆ. ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಬಯಸುವ ವ್ಯಕ್ತಿಗೆ ವಲಸೆ ವೀಸಾ ನೀಡಲಾಗುತ್ತದೆ. ಅಮೆರಿಕ ಪ್ರಜೆಯ ಸಂಗಾತಿ, ಅಮೆರಿಕ ಪ್ರಜೆಯನ್ನು ಮದುವೆಯಾಗಿ ಅಮೆರಿಕದಲ್ಲಿ ವಾಸಿಸಲು ಬಯಸುವವರು, ಅಮೆರಿಕ ನಾಗರಿಕರ ಕೆಲವು ಕುಟುಂಬ ಸದಸ್ಯರು ಮತ್ತು ಕಾನೂನುಬದ್ಧ ಶಾಶ್ವತ ನಿವಾಸಿಗಳು ಹಾಗೂ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮೂಲಕ ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಬಹುದಾದ ಕೆಲವು ಉದ್ಯೋಗ ಆಧಾರಿತ ವಲಸಿಗರಿಗೆ ವಲಸೆ ವೀಸಾ ನೀಡಲಾಗುತ್ತದೆ.
ಪ್ರವಾಸ, ಕೆಲಸದ ವೀಸಾಗೆ ಅಡ್ಡಿಯಿಲ್ಲ:
ಇದೇ ವೇಳೆ, ನಿರ್ಬಂಧಿತ ದೇಶಗಳ ಜನರು ಅಮೆರಿಕಕ್ಕೆ ಪ್ರವಾಸ ಮತ್ತು ಕೆಲಸದ ವೀಸಾ ಪಡೆದು ಬರಬಹುದು. ಆದರೆ, ಇಲ್ಲಿಯೇ ಅವರು ಶಾಶ್ವತವಾಗಿ ಉಳಿಯಲು ಕೋರಿ ವಲಸೆ ವೀಸಾಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಈ ದೇಶಗಳ ಜನರಿಗೆ ಗ್ರೀನ್ ಕಾರ್ಡ್ ನೀಡುವಂತಿಲ್ಲ ಎಂದು ಡೊನಾಲ್ಡ್ ಟ್ರಂಪ್ ಖಡಕ್ ಆದೇಶ ನೀಡಿದ್ದಾರೆ.
ಉಳಿದಂತೆ ಬೇರೆ ಯಾವುದೇ ದೇಶಗಳ ಜನರು ವಲಸೆ ವೀಸಾ ಕೋರಿ ಅರ್ಜಿ ಸಲ್ಲಿಸಬಹುದು. ದ್ವಿರಾಷ್ಟ್ರ ನಿಯಮಗಳ ಅನುಸಾರ ಇದನ್ನು ಮಾನ್ಯ ಮಾಡಲಾಗುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಭಾರತೀಯರಿಗೆ ಇದು ಅನ್ವಯಿಸಲ್ಲ:
ಅಮೆರಿಕಕ್ಕೆ ಅತಿ ಹೆಚ್ಚು ವಲಸೆ ಹೋಗುವ ವಿದೇಶಿಗರ ಪೈಕಿ ಭಾರತೀಯರು ಹೆಚ್ಚಿದ್ದಾರೆ. ಹೀಗಾಗಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ಈ ನಿರ್ಬಂಧವು ಭಾರತಕ್ಕೆ ಅನ್ವಯಿಸುವುದಿಲ್ಲ. ಭಾರತೀಯರು ಕೆಲಸ, ಪ್ರವಾಸಿ ಮತ್ತು ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಕೋರಿ ವಲಸೆ ವೀಸಾವನ್ನು ಪಡೆಯಬಹುದಾಗಿದೆ.
ಅಮೆರಿಕದ ವಲಸೆ ವೀಸಾ ಸ್ಥಗಿತಗೊಂಡಿರುವ 75 ದೇಶಗಳ ಪಟ್ಟಿ:
ಅಫ್ಘಾನಿಸ್ತಾನ, ಆಲ್ಬೇನಿಯಾ, ಆಲ್ಜೀರಿಯಾ,ಆಂಟಿಗುವಾ ಬರ್ಬುಡಾ,ಆರ್ಮೇನಿಯಾ, ಅಜರ್ಬೈಜಾನ್, ಬಹಾಮಸ್, ಬಾಂಗ್ಲಾದೇಶ, ಬಾರ್ಬಡಾಸ್, ಬೆಲಾರಸ್, ಬೆಲಿಜೆ, ಭೂತಾನ್, ಬೋಸ್ನಿಯಾ ಹರ್ಜೆಗೋವಿನಾ, ಬ್ರೆಜಿಲ್, ಕಾಂಬೋಡಿಯಾ, ಕ್ಯಾಮರೂನ್, ಕೇಪ್ ವೆರ್ಡೆ, ಕೊಲಂಬಿಯಾ, ಕೋಟೆ ಡೀ ಐವೋರೆ (ಐವರಿ ಕೋಸ್ಟ್), ಕ್ಯೂಬಾ, ಕಾಂಗೊ ಡೆಮಾಕ್ರಟಿಕ್ ರಿಪಬ್ಲಿಕ್, ಡಾಮಿನಿಕಾ, ಈಜಿಪ್ಟ್, ಎರಿಟ್ರಿಯಾ, ಇಥಿಯೋಪಿಯಾ, ಫಿಜಿ, ಗಾಂಬಿಯಾ, ಜಾರ್ಜಿಯಾ, ಘಾನಾ, ಗ್ರೆನಾಡಾ, ಗಾಟಿಮಾಲ, ಗಿನಿಯಾ, ಹೈಟಿ, ಇರಾನ್, ಇರಾಕ್, ಜಮೈಕಾ, ಜಾರ್ಡಾನ್, ಕಜಕಸ್ತಾನ್, ಕೊಸೋವೋ, ಕುವೇತ್, ಕಿರ್ಗಿಸ್ತಾನ್, ಲಾವೋಸ್, ಲೆಬನಾನ್, ಲೈಬೀರಿಯಾ, ಲಿಬಿಯಾ, ನಾರ್ತ್ ಮೆಸಿಡೋನಿಯಾ, ಮಾಲ್ಡೋವಾ, ಮಂಗೋಲಿಯಾ, ಮಾಂಟೆನೀಗ್ರೋ, ಮೊರಾಕ್ಕೋ, ಮಯನ್ಮಾರ್, ನೇಪಾಳ್, ನಿಕಾರಾಗುವಾ, ನೈಜೀರಿಯಾ, ಪಾಕಿಸ್ತಾನ್, ಕಾಂಗೋ ರಿಪಬ್ಲಿಕ್, ರಷ್ಯಾ, ರುವಾಂಡ, ಸೇಂಟ್ ಕಿಟ್ಸ್ ಅಂಡ್ ನೆವಿಸ್, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಅಂಡ್ ಗ್ರಿನಾಡಿನ್ಸ್, ಸೆನೆಗಲ್, ಸಿಯೆರಾ ಲಿಯೋನೆ, ಸೊಮಾಲಿಯಾ, ಸೌತ್ ಸುಡಾನ್, ಸುಡಾನ್, ಸಿರಿಯಾ, ತಾಂಜಾನಿಯಾ, ಥಾಯ್ಲೆಂಡ್, ಟೋಗೋ, ಟುನಿಶಿಯಾ, ಉಗಾಂಡ, ಉರುಗ್ವೆ, ಉಜ್ಬೆಕಿಸ್ತಾನ್, ಯೆಮೆನ್
ಅಮೆರಿಕದಲ್ಲಿ ಸಾಮಾಜಿಕ ಭದ್ರತಾ ಸೌಲಭ್ಯಗಳು ಉತ್ತಮವಾಗಿವೆ. ವಲಸಿಗರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಸೌಲಭ್ಯಗಳನ್ನು ಪಡೆದು, ಡ್ರಗ್ಸ್, ಅಪರಾಧ, ಭಯೋತ್ಪಾದನೆ ಇತ್ಯಾದಿ ಕೃತ್ಯಗಳ ಮೂಲಕ ಸಮಾಜ ಹಾಗೂ ದೇಶದ ಭದ್ರತೆಗೆ ಅಪಾಯ ತರಬಹುದು. ಇದನ್ನು ನಿಯಂತ್ರಿಸಲು ಟ್ರಂಪ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಜನವರಿ 21ರಿಂದ ಅನ್ವಯಿಸುವಂತೆ ಈ ವೀಸಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

