ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ (Female Foeticide) ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಭ್ರೂಣ ಹತ್ಯೆ ಬಗ್ಗೆ ಮಾಹಿತಿ ಕೊಡುವ ಸಾರ್ವಜನಿಕರಿಗೆ ನಗದು ಬಹುಮಾನ ಮೊತ್ತವನ್ನು 50 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಿದೆ.
ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಆರೋಗ್ಯ ಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿದರು. ಈ ವೇಳೆ, ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಗು ತನ್ನ ಕುಟುಂಬ ಅಥವಾ ಸಮಾಜಕ್ಕೆ ಹೊರೆಯಲ್ಲ, ಅವಳು ಶಕ್ತಿ ಮತ್ತು ಚೈತನ್ಯದ ಮೂಲ ಎಂದಿದ್ದಾರೆ.
ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸುಮಾರು 60% ರಷ್ಟು ಉದ್ಯೋಗಿಗಳು ಮಹಿಳಾ ಉದ್ಯೋಗಿಗಳಾಗಿರುವುದು ಬಹಳ ಹೆಮ್ಮೆಯ ವಿಷಯ. ಮಹಿಳೆಯರು ಮತ್ತು ಪುರುಷರು ಸಮಾನರು. ಇಂದಿಗೂ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವುದು ಬೇಸರದ ವಿಚಾರ. ಈ ಅಮಾನವೀಯ ಪದ್ಧತಿಯು ಸಾಮಾಜಿಕ ಪಿಡುಗಾಗಿದೆ. ಈ ಕ್ರೂರ ಅಥವಾ ಅಮಾನವೀಯ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಮ್ಮ ಸರ್ಕಾರವು ವಿಶ್ವಾಸಾರ್ಹ ಮಾಹಿತಿ ನೀಡುವವರಿಗೆ 1,00,000 ರೂ. ಬಹುಮಾನ ನೀಡುತ್ತಿದೆ. ಇಲ್ಲಿಯವರೆಗೆ, ನಮ್ಮ ರಾಜ್ಯದ ಇಬ್ಬರು ನಾಗರಿಕರು ಈ ಬಹುಮಾನವನ್ನು ಪಡೆದಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಹೆಣ್ಣು ಮಕ್ಕಳಿಗೆ ಆತಂಕ ಮುಕ್ತ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಅಭಿಯಾನದಲ್ಲಿ ನಾವು ಕೈಜೋಡಿಸೋಣ ಎಂದು ಕರೆ ಕೊಟ್ಟಿದ್ದಾರೆ.

