– ಉಪ್ಪು ನೀರಿನ ಸರೋವರದಲ್ಲಿ ಈಗ ಮೀನುಗಳ ಸಂಚಾರ
– ದಡದಲ್ಲಿದ್ದ ಶಿವನ ದೇವಾಲಯ ಮುಳುಗಡೆ
– ಪಿಐಎಲ್ ಸಲ್ಲಿಸುವಂತೆ ನಾಗ್ಪುರ ಪೀಠ ಆದೇಶ
ಮುಂಬೈ: ಸರೋವರದಲ್ಲಿ ನೀರಿನ ಮಟ್ಟ ಇಳಿಕೆಯಾಗುವುದನ್ನು ನೀವು ಓದಿರಬಹುದು. ಆದರೆ ಮಹಾರಾಷ್ಟ್ರದಲ್ಲಿರುವ ಪ್ರಸಿದ್ಧ ಲೋನಾರ್ ಸರೋವರದಲ್ಲಿ (Lonar Lake) ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು ಕಳವಳಕ್ಕೆ ಕಾರಣವಾಗಿದೆ.
ಹೌದು. ಬುಲ್ಧಾನಾ ಜಿಲ್ಲೆಯಲ್ಲಿರುವ ಉಲ್ಕಾಶಿಲೆ ಪ್ರಭಾವದಿಂದ ರೂಪುಗೊಂಡ, ಉಪ್ಪು ನೀರಿನ ಲೋನಾರ್ ಸರೋವರದಲ್ಲಿ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ಸರೋವರದ ಸುತ್ತಲು ಇರುವ ನಾಲ್ಕು ಬುಗ್ಗೆಗಳಿಂದ 4-5 ತಿಂಗಳಿನಲ್ಲಿ ಸುಮಾರು 15 ರಿಂದ 20 ಅಡಿ ನೀರು ಏರಿಕೆಯಾಗಿದೆ.
ನೀರಿನ ಏರಿಕೆಯಿಂದಾಗಿ ಸರೋವರದ ಜೀವವೈವಿಧ್ಯತೆಗೆ ಎದುರಾಗಿರುವ ಅಪಾಯವನ್ನು ಗಂಭೀರವಾಗಿ ಪರಿಗಣಿಸಿ ಬಾಂಬೆ ಹೈಕೋರ್ಟ್‌ನ (Bombay High Court) ನಾಗ್ಪುರ ಪೀಠವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಆದೇಶಿಸಿದೆ. ನ್ಯಾ. ಅನಿಲ್ ಕಿಲೋರ್ ಮತ್ತು ನ್ಯಾ.ರಾಜ್ ವಕೋಡ್ ಅವರನ್ನೊಳಗೊಂಡ ಪೀಠವು ವಕೀಲ ಮೋಹಿತ್ ಖಜಾಂಚಿ ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಿಸಿದೆ ಮತ್ತು ಮುಂದಿನ ಏಳು ದಿನಗಳಲ್ಲಿ ವಿವರವಾದ ಪಿಐಎಲ್ ಸಲ್ಲಿಸುವಂತೆ ನಿರ್ದೇಶಿಸಿದೆ.
ನೀರಿನ ಮಟ್ಟ ಏರಿಕೆಯಿಂದಾಗಿ ದಡದಲ್ಲಿದ್ದ ಹಲವಾರು ಪ್ರಾಚೀನ ಶಿವ ದೇವಾಲಯಗಳು (Shiva Temple) ಮುಳುಗಿವೆ. ವಿಶ್ವಪ್ರಸಿದ್ಧ ಕಮಲಜಾ ದೇವಿ ದೇವಾಲಯದ ಗರ್ಭಗುಡಿಗೂ ನೀರು ಪ್ರವೇಶಿಸಿದೆ. ದೇವಾಲಯದ ಮುಂಭಾಗದಲ್ಲಿರುವ ದೀಪಸ್ತಂಭ ಹಿಂದೆ ಸಂಪೂರ್ಣವಾಗಿ ಗೋಚರಿಸುತ್ತಿತ್ತು. ಆದರೆ ಈಗ ಅರ್ಧ ಮುಳುಗಡೆಯಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶದ ಧಾರ್‌ನ ಭೋಜ್‌ಶಾಲಾದಲ್ಲಿ ಪ್ರಾರ್ಥನೆ ವಿವಾದ; ಹಿಂದೂ-ಮುಸ್ಲಿಮರ ಪ್ರಾರ್ಥನೆಗೆ ‘ಸುಪ್ರೀಂ’ ಅವಕಾಶ

ಉಪ್ಪು ನೀರಿನ ಸರೋವರವಾಗಿದ್ದರೂ ಕಳೆದ ಕೆಲ ತಿಂಗಳಿನಿಂದ ಸಿಹಿನೀರು ಮಿಶ್ರಣವಾಗುತ್ತಿದೆ. ಇದರಿಂದಾಗಿ ನೀರಿನಲ್ಲಿ ಈಗ ಮೀನುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ದಿಢೀರ್ ನೀರು ಏರಿಕೆಯಾಗಿರುವುದು ಮತ್ತು ಮೀನು ಕಾಣಿಸಿಕೊಂಡಿರುವುದು ಜೀವವೈವಿಧ್ಯಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಛತ್ರಪತಿ ಸಂಭಾಜಿನಗರದ ಅಂತರ್ಜಲ ತಜ್ಞ ಪ್ರೊಫೆಸರ್ ಅಶೋಕ್ ತೇಜಂಕರ್ ಮತ್ತು ತಹಸೀಲ್ದಾರ್ ಭೂಷಣ್ ಪಾಟೀಲ್ ಸರೋವರವನ್ನು ಪರಿಶೀಲಿಸಿದ್ದಾರೆ. ನೀರಿನ ಮಟ್ಟ ಏರಿಕೆಗೆ ನಿಖರವಾದ ವೈಜ್ಞಾನಿಕ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕಾರಣ ಪತ್ತೆ ಹಚ್ಚಲು ಆಳವಾದ ಸಂಶೋಧನೆಯ ಅಗತ್ಯವಿದೆ ಎಂದಿದ್ದಾರೆ.
ಉಲ್ಕಾಶಿಲೆಯ ಘರ್ಷಣೆಯಿಂದ ರಚಿಸಲ್ಪಟ್ಟ ಲೋನಾರ್ ಸರೋವರವು ವೈಜ್ಞಾನಿಕ ಸಂಶೋಧನೆಗೆ ಜಾಗತಿಕವಾಗಿ ಮಹತ್ವದ್ದಾಗಿದೆ. ಪ್ರಪಂಚದಾದ್ಯಂತದ ವಿದ್ವಾಂಸರು ಮತ್ತು ಪ್ರವಾಸಿಗರನ್ನುಈ ಸರೋವರ ಆಕರ್ಷಿಸುತ್ತದೆ. ಈಗ ನೈಸರ್ಗಿಕ ಪರಂಪರೆಯನ್ನು ರಕ್ಷಿಸುವ ಹೈಕೋರ್ಟ್‌ನ ಆದೇಶವನ್ನು ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ.
ಸುಮಾರು 50,000 ವರ್ಷಗಳ ಹಿಂದೆ ಉಲ್ಕಾಶಿಲೆಯೊಂದು ಬಂಡೆಗೆ ಅಪ್ಪಳಿಸಿದ ಪರಿಣಾಮದಿಂದ ಈ ಸರೋವರ ಮತ್ತು ಕುಳಿ ರೂಪುಗೊಂಡಿದೆ. ಉಲ್ಕಾಶಿಲೆಯಿಂದ ಬಂಡೆಯ ಮೇಲೆ ನಿರ್ಮಾಣಗೊಂಡ ವಿಶ್ವದ ಏಕೈಕ ಉಪ್ಪು ನೀರಿನ ಸರೋವರ ಇದಾಗಿದ್ದು ರಾಷ್ಟ್ರೀಯ ಭೂಪಾರಂಪರಿಕ ಸ್ಮಾರಕ ತಾಣವೆಂದು ಘೋಷಿಸಲಾಗಿದೆ.
ಸ್ಥಳೀಯರು ವಿಷ್ಣುವು ರಾಕ್ಷಸ ಲವಣಾಸುರನನ್ನು ಸಂಹರಿಸಿದ ಸ್ಥಳವೆಂದು ನಂಬುತ್ತಾರೆ. ಈ ಕಾರಣಕ್ಕೆ ಈ ಪ್ರದೇಶದ ಸುತ್ತಮುತ್ತ ಅನೇಕ ದೇವಸ್ಥಾನಗಳಿವೆ.

