ಟೆಹ್ರಾನ್: ಇರಾನ್‌ನಲ್ಲಿ (Iran Protests) ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಜಾಗತಿಕ ತಲ್ಲಣಕ್ಕೆ ಕಾರಣವಾಗಿವೆ. ಅಮೆರಿಕದ ಮಧ್ಯಪ್ರವೇಶ, ದಾಳಿಯ ಎಚ್ಚರಿಕೆ ಮಧ್ಯಪ್ರಾಚ್ಯದಲ್ಲಿ ಆತಂಕ ಸೃಷ್ಟಿಸಿದೆ. ಅಮೆರಿಕದ ಎಚ್ಚರಿಕೆ ಬೆನ್ನಲ್ಲೇ ಇರಾನ್ ತನ್ನ ವಾಯು ಪ್ರದೇಶ ಮುಚ್ಚಿದೆ. ಇತ್ತ ಭಾರತ ಸೇರಿ ಹಲವು ದೇಶಗಳ ಇರಾನ್‌ನಲ್ಲಿರುವ ತಮ್ಮ ಪ್ರಜೆಗಳಿಗೆ ಎಚ್ಚರಿಕೆ ನೀಡಿವೆ.
ಇರಾನ್‌ನಲ್ಲಿ ಸರ್ವಾಧಿಕಾರಿ ಆಲಿ ಖಮೇನಿ (Ali Khamenei) ವಿರುದ್ಧ ಬೀದಿಗಿಳಿದು ಜನರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಇರಾನ್ ಸುಪ್ರೀಂ ಲೀಡರ್ ಆಲಿ ಖಮೇನಿ ವಿರುದ್ಧದ ಪ್ರತಿಭಟನೆಯಲ್ಲಿ 3,428 ಕ್ಕೂ ಹೆಚ್ಚು ಮಂದಿ ಇರಾನ್ ನಾಗರಿಕರು ಸಾವನ್ನಪ್ಪಿದ್ದಾರೆ. ಹದಿನೈದು ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ನ್ಯೂಜೆರ್ಸಿಯಲ್ಲಿ 5, 7 ವರ್ಷದ ಮಕ್ಕಳನ್ನು ಕೊಂದ ಭಾರತೀಯ ಮೂಲದ ಮಹಿಳೆ ಬಂಧನ
ಜನವರಿ 8ರಿಂದ 12ರ ವರೆಗೆ ನಡೆದ ಪ್ರತಿಭಟನೆಗಳ ಅವಧಿಯಲ್ಲಿ 3,379 ಮಂದಿ ಸಾವನ್ನಪ್ಪಿದ್ದಾರೆ ಎಂದು IHR ಹೇಳಿದೆ. ಇದಕ್ಕೂ ಮೊದಲು ಅಮೆರಿಕ ಮೂಲದ ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್ ನ್ಯೂಸ್ ಏಜೆನ್ಸಿ ಬುಧವಾರ ಬೆಳಿಗ್ಗೆ ಕನಿಷ್ಠ 2,571 ಮಂದಿ ಸತ್ತಿದ್ದಾರೆ ಎಂದು ವರದಿ ಮಾಡಿತ್ತು. ಇರಾನ್ ಸರ್ಕಾರಿ ಟಿವಿ ಹಲವು ಮಂದಿ ಹುತಾತ್ಮರಾಗಿದ್ದಾರೆ ಎಂದು ಒಪ್ಪಿಕೊಂಡಿದ್ದರೂ, ನಿಖರ ಸಂಖ್ಯೆಯನ್ನು ಪ್ರಕಟಿಸಿಲ್ಲ.

ಅಮೆರಿಕ ಬೆದರಿಕೆಗೆ ಬೆದರಿತಾ ಇರಾನ್?
ಇರಾನ್‌ನಲ್ಲಿ ಪ್ರತಿಭಟನಕಾರರ ಮೇಲೆ ಹಲ್ಲೆ, ದಾಳಿ ಹಾಗೂ ಹತ್ಯೆ ನಡೆಸಿದರೆ ಅಥವಾ ಗಲ್ಲು ಶಿಕ್ಷೆಕೊಡುವ ಕೆಲಸ ಮಾಡಿದರೆ ಅಮೆರಿಕಾ ಮಧ್ಯಪ್ರವೇಶ ಮಾಡಲಿದೆ ಎಂದು ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ಕತಾರ್ ಏರ್ ಬೇಸ್ ಮೂಲಕ ಇರಾನ್ ಮೇಲೆ ಅಮೆರಿಕ ವಾಯು ದಾಳಿ ಮಾಡಬಹುದು ಎನ್ನಲಾಗಿತ್ತು. ಈ ಬೆದರಿಕೆ ಬೆನ್ನಲ್ಲೇ ಇರಾನ್ ಸರ್ಕಾರ ಪ್ರತಿಭಟನಕಾರರ ವಿರುದ್ಧ ತ್ವರಿತ ವಿಚಾರಣೆಗಳು ಮತ್ತು ಮರಣದಂಡನೆಗಳನ್ನು ನಿಲ್ಲಿಸಿದೆ ಎಂದು ಘೋಷಿಸಿದೆ. ಈ ಬಗ್ಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇಂದು ಅಥವಾ ನಾಳೆ ಗಲ್ಲಿಗೇರಿಸುವುದಿಲ್ಲ, ಮರಣದಂಡನೆಯ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ.
ಸಮರಭ್ಯಾಸ ಶುರು ಮಾಡಿದ ಇರಾನ್, ವಾಯು ಪ್ರದೇಶ ಬಂದ್
ತನ್ನ ಮೇಲೆ ದಾಳಿ ಮಾಡುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತತ ಸುಳಿವುಗಳನ್ನು ನೀಡುತ್ತಿರುವ ಬೆನ್ನಲ್ಲೇ ಇರಾನ್ ಸಮರಭ್ಯಾಸ ಆರಂಭಿಸಿದೆ. ಇದೇ ವೇಳೆ, ಅಮೆರಿಕವು ನಮ್ಮ ಮೇಲೆ ದಾಳಿ ಮಾಡಿದರೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹೊಂದಿರುವ 3 ಸೇನಾ ನೆಲೆಗಳ ಮೇಲೆ ದಾಳಿ ಮಾಡಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ. ಈ ಬಗ್ಗೆ ಮಾತನಾಡಿರುವ ಇರಾನ್ ರಾಜತಾಂತ್ರಿಕರು, ನಾವು ಎಲ್ಲ ಶಸ್ತ್ರಾಸ್ತ್ರ, ಸೇನೆಯನ್ನು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ ಕತಾರ್‌ನಲ್ಲಿನ ಅಮೆರಿಕದ ಸೇನಾನೆಲೆ ಸೇರಿ ಮಧ್ಯಪ್ರಾಚ್ಯದಲ್ಲಿನ 3 ಅಮೆರಿಕ ನೆಲೆಗಳ ಮೇಲೆ ದಾಳಿ ಮಾಡಲಿದ್ದೇವೆ ಎಂದಿದ್ದಾರೆ. ಇದರ ಬೆನ್ನಲ್ಲೇ ಕತಾರ್‌ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯಿಂದ ಹೊರಹೋಗುವಂತೆ ಕೆಲವು ಸಿಬ್ಬಂದಿಗೆ ಆ ದೇಶ ಸೂಚಿಸಿದೆ ಎಂದು ಮೂವರು ರಾಜತಾಂತ್ರಿಕರು ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಇರಾನ್ ಮುನ್ನಚ್ಚರಿಕೆ ಭಾಗವಾಗಿ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಯಾವುದೇ ಪ್ರಯಾಣಿಕ, ಯುದ್ಧ ವಿಮಾನಗಳ ಹಾರಾಟಕ್ಕೆ ನಿಷೇಧಿಸಿದೆ. ಇದನ್ನೂ ಓದಿ: ಇರಾನ್ ವಿರುದ್ಧ ಮಿಲಿಟರಿ ದಾಳಿ ವಾರ, ತಿಂಗಳ ಕಾಲ ನಡೆಯಬಾರದು: ಟ್ರಂಪ್ ಸೂಚನೆ
ವಾಯು ಪ್ರದೇಶ ಬಂದ್, ಭಾರತದ ಮೇಲೆ ಪ್ರಭಾವ
ಇರಾನ್ ವಾಯು ಪ್ರದೇಶ ಬಂದ್ ಮಾಡಿರುವ ಹಿನ್ನಲೆ ಭಾರತದ ನಾಗರಿಕ ವಿಮಾನಗಳಿಗೆ ತೊಂದರೆಯಾಗಿದೆ. ಪರ್ಯಾಯ ಮಾರ್ಗವನ್ನು ಬಳಸುತ್ತಿರುವುದಾಗಿ ಏರ್ ಇಂಡಿಯಾ ತಿಳಿಸಿದ್ದು, ಪ್ರಯಾಣ ವಿಳಂಬಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಏರ್ ಇಂಡಿಯಾ, ಇರಾನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಹೀಗಾಗಿ, ನಮ್ಮ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಇರಾನ್ ಪ್ರದೇಶಗಳ ಮೇಲೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನಗಳು ಈಗ ಪರ್ಯಾಯ ಮಾರ್ಗವನ್ನು ಬಳಸುತ್ತಿವೆ. ಇದು ವಿಳಂಬಕ್ಕೆ ಕಾರಣವಾಗಬಹುದು ಎಂದು ಹೇಳಿದೆ. ಇಂಡಿಗೋ ಏರ್‌ಲೈನ್ಸ್ ಕೂಡ ಇದೇ ರೀತಿಯ ಸಲಹೆಯನ್ನು ಬಿಡುಗಡೆ ಮಾಡಿದೆ. ಇರಾನ್ ಹಠಾತ್ ವಾಯುಪ್ರದೇಶ ಮುಚ್ಚಿರುವುದರಿಂದ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.
ಜೈಶಂಕರ್ ಜೊತೆಗೆ ಇರಾನ್ ವಿದೇಶಾಂಗ ಸಚಿವರ ಮಾತುಕತೆ
ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ದೂರವಾಣಿ ಕರೆ ಮಾಡಿದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಜೈಶಂಕರ್, ಇರಾನ್ ಹಾಗೂ ಅದರ ಸುತ್ತಮುತ್ತಲಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಎಚ್ಚರಿಕೆ ಸೂಚನೆ ನೀಡಿದ್ದು, ಸಾಧ್ಯವಾದಷ್ಟು ಬೇಗ ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ಮಾರ್ಗಗಳ ಮೂಲಕ ದೇಶ ತೊರೆಯುವಂತೆ ಮನವಿ ಮಾಡಿದೆ. ಅಲ್ಲದೇ, ಪ್ರತಿಭಟನೆ ನಡೆಯುವ ಪ್ರದೇಶಗಳಿಂದ ದೂರವಿರಲು, ಎಚ್ಚರಿಕೆಯಿಂದ ಇರುವಂತೆ ಮತ್ತು ಸ್ಥಳೀಯ ಸುದ್ದಿಗಳನ್ನು ಗಮನಿಸುವಂತೆ ಸಲಹೆ ನೀಡಲಾಗಿದೆ.

