– ಬಾದಾಮಿ, ಪಟ್ಟದಕಲ್ಲು, ಐಹೊಳೆಯಲ್ಲಿ ಕಾರ್ಯಕ್ರಮ
ಬಾಗಲಕೋಟೆ: 2015ರಿಂದ ಸ್ಥಗಿತಗೊಂಡಿದ್ದ ಐತಿಹಾಸಿಕ ಚಾಲುಕ್ಯ ಉತ್ಸವವನ್ನು (Chalukya Utsava) ಮತ್ತೆ ಆಚರಿಸಲು ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಜನವರಿ 19, 20 ಮತ್ತು 21ರಂದು ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ (RB Timmapur) ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಉತ್ಸವದ ಪೂರ್ವಭಾವಿ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜನವರಿ 19ರಂದು ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. 20ರಂದು ಪಟ್ಟದಕಲ್ಲಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು. ಇದನ್ನೂ ಓದಿ: 2025ರಲ್ಲಿ 4.3 ಕೋಟಿ ಪ್ರಯಾಣಿಕರ ಓಡಾಟ – ದಾಖಲೆ ಬರೆದ ಬೆಂಗಳೂರು ವಿಮಾನ ನಿಲ್ದಾಣ
ಸಭೆಯಲ್ಲಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಉತ್ಸವದ ಅಂಗವಾಗಿ ಕುಸ್ತಿ, ಕಬಡ್ಡಿ, ಸಂಗಿರಾಣಿ ಕಲ್ಲು ಎತ್ತುವ ಸ್ಪರ್ಧೆ, ರಾಕ್ ಕ್ಲೈಂಬಿಂಗ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕರು ಮತ್ತು ಗಾಯಕರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಚಿತ್ ಹೆಗಡೆ ಅವರ ತಂಡಗಳು ಮನರಂಜನೆ ನೀಡಲಿವೆ.
ಸ್ಥಳೀಯ ದೇಶಿ ಹಾಗೂ ಜನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬಾದಾಮಿ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ಹೆಲಿಕಾಪ್ಟರ್ ಮೂಲಕ ಹೆಲಿಟೂರಿಸಂ ವ್ಯವಸ್ಥೆಯನ್ನೂ ಆಯೋಜಿಸಲಾಗುತ್ತದೆ.

