ಹಾಸನ: ಅರಸೀಕೆರೆಗೆ ಬಂದು ಚುನಾವಣೆಗೆ ನಿಂತ್ಕೊಳಿ, ಜನ ಏನು ಅಂತ ತೋರಿಸುತ್ತಾರೆ ಎಂದು ಹೆಚ್.ಡಿ.ರೇವಣ್ಣಗೆ (H.D.Revanna) ಶಾಸಕ ಶಿವಲಿಂಗೇಗೌಡ (Shivalinge Gowda) ಸವಾಲೆಸೆದಿದ್ದಾರೆ.
2028 ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸ್ಪರ್ಧಿಸುವಂತೆ ಜೆಡಿಎಸ್ ಮುಖಂಡರ ಒತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪಂಥಾಹ್ವಾನ ನೀಡಿದ್ದಾರೆ.
ಅರಸೀಕೆರೆ (Arasikere) ಪಟ್ಟಣದಲ್ಲಿ ಭಕ್ತ ಕನಕದಾಸ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಚರಣ ಸಮಿತಿ ವತಿಯಿಂದ ದೇವರಾಜು ಅರಸು ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಮಾತನಾಡಿದ ಶಿವಲಿಂಗೇಗೌಡ, ನಾಲ್ಕು ಬಾರಿ ಎಂಎಲ್‌ಎ ಆಗಿದ್ದೀನಿ. ನಮ್ಮ ಅಪ್ಪ ಹೆಬ್ಬೆಟ್ಟು, ನಮ್ಮ ಅಪ್ಪ ನೀಟಾಗಿ ಹೊಲದಲ್ಲಿ ಸಾಲು ಹೊಡೆಯುತ್ತಿದ್ದರು. ಅಂತಹವನ ಹೊಟ್ಟೆಯಲ್ಲಿ ಹುಟ್ಟಿದವನು ನಾನು, ಇತಿಹಾಸ ನನಗೂ ಗೊತ್ತಿದೆ, ಅಲ್ಲಿಂದ ಬೆಳೆದು ಬಂದವನು, ಐವತ್ತು ಜನ ಹಿಂದೆ ಕರೆದುಕೊಂಡು ಅರಸೀಕೆರೆಗೆ ಬಂದಿದ್ದೀರಾ, ಅರಸೀಕೆರೆಯಲ್ಲಿ ಇದು ನಡೆಯೋದಿಲ್ಲ. ಅರಸೀಕೆರೆ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಪಟ್ಟಿ, ಪುಸ್ತಕ ಬಿಡುಗಡೆ ಮಾಡ್ತಿನಿ ಎಂದರು.

ಅರಸೀಕೆರೆಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿಕೊಂಡು ಬಂದರೆ ಮಾರನೇ ದಿನ ಮೊಸಳೆಹೊಸಳ್ಳಿಗೆ ತೆಗೆದುಕೊಂಡು ಹೋದ್ರಿ. ಅಂದಿನ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣಗೌಡರ ಬಳಿ ಮನವಿ ಮಾಡಿದಾಗ ಮಂಜೂರು ಮಾಡಿಕೊಟ್ಟರು. ಅರಸೀಕೆರೆಗೆ ಏನು ಮಾಡಿದ್ದೀರಿ? ಇಲ್ಲಿ ನಿಮ್ಮದು ನೆಲೆ ಎಲ್ಲಿದೆ? ಬನ್ನಿ ನಿಂತ್ಕೊಳಿ, ಅರಸೀಕೆರೆ ಜನ ತೋರಿಸುತ್ತಾರೆ. ಸುಮ್ಮಸುಮ್ಮನೆ ಭಾಷಣ ಮಾಡಬೇಡಿ, ಅರಸೀಕೆರೆ ನೆಮ್ಮದಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಸೀಕೆರೆ ಪ್ರಗತಿಗಾಗಿ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿದ್ದೇನೆ. ನನಗೆ ಅನುದಾನ ಕೊಡುತ್ತಿದ್ದಾರೆ ಎಂದು ಅಸೂಯೆ ಪಡುತ್ತಿದ್ದರು. ನಾನೇ ಯಡಿಯೂರಪ್ಪ ಬಳಿ ಹೇಳಿ ಅವರಿಗೆ ಹತ್ತು ಕೋಟಿ ಕೊಡಿ ಎಂದು ಕೊಡಿಸಿದ್ದೇನೆ. ನನಗೆ ಅವತ್ತಿನ ಕಾಲದಲ್ಲಿ ಟಿಕೆಟ್ ಕೊಟ್ರಿ, ಹದಿನಾಲ್ಕು ವೋಟಿನಲ್ಲಿ ಸೋತೆ. ನಾನು ಸೋತ ಮೇಲೆ ಅರಸೀಕೆರೆ ಕ್ಷೇತ್ರದಲ್ಲಿ ನಿಮ್ಮದು ಏನು ಇಲ್ಲ. ಅಲ್ಲಿಂದ ನಾನು ನನ್ನ ವೈಯುಕ್ತಿಕವಾಗಿ ಗೆದ್ದಿದ್ದೀನಿ. ಜನ ಏಕೆ ನನ್ನ ಮೇಲೆ ವಿಶ್ವಾಸ ಇಟ್ಟರೋ ಗೊತ್ತಿಲ್ಲ ಎಂದರು.
ಎತ್ತಿನಹೊಳೆ ಯೋಜನೆ ನೀರು ಬಂದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದಿದ್ದೀರಿ. ಬನ್ನಿ ಮುಂದಿನ ಜೂನ್ ತಿಂಗಳಿಗೆ, ಕೆರೆಗಳು ತುಂಬುತ್ತವೆ. ನೀವು ಹೊಳೆನರಸೀಪುರವನ್ನೇ ನೋಡಿಕೊಂಡು ಕುಳಿತುಕೊಂಡರಿ. ಎಲ್ಲಾ ರಾಜಕೀಯ ನನಗೆ ಗೊತ್ತಿದೆ. ಎಲೆಕ್ಷನ್‌ಗೆ ಬನ್ನಿ, ಹೈಕಮಾಂಡ್ ಏಕೆ, ಬನ್ನಿ ನಿಂತ್ಕೊಳಿ, ಅರಸೀಕೆರೆ ಜನ ತೀರ್ಮಾನ ಮಾಡ್ತಾರೆ. ಈ ಕ್ಷೇತ್ರದ ಜನ ಪ್ರಬುದ್ಧರಾಗಿದ್ದಾರೆ. ರಾಜಕಾರಣ ಕಲಿತಿದ್ದಾರೆ. ಹಿಂದಿನ ರೀತಿ ವೋಟು ಹಾಕಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಪಂಥಾಹ್ವಾನ ನೀಡಿದರು.
ನಾನು ಕಾಂಗ್ರೆಸ್‌ಗೆ ಕದ್ದುಮುಚ್ಚಿ ಹೋಗಿಲ್ಲ. ನೀವು, ಬರೀ ನಿಮ್ಮ ಮನೆ, ನಿಮ್ಮ ಮನೆತನ, ನೀವೇ ರಾಜಕೀಯ ಮಾಡಿಕೊಂಡು ಹೋದಿರಿ. ಹಾಸನ ಜಿಲ್ಲೆಯಲ್ಲಿ ಬೇರೆ ಯಾರು ಬೆಳೆಯೋದು ಬೇಡವೇ. ನಾನು ಬಂದು ಅರಸೀಕೆರೆ ಶಾಸಕನಾದಾಗ ಜೆಡಿಎಸ್ ಪಕ್ಷಕ್ಕೆ 85 ಸಾವಿರ ಮತಗಳನ್ನು ಹಾಕಿಸಿದ್ದೇನೆ. ನೀವು ಅರಸೀಕರೆಗೆ ಏನು ಮಾಡಿದ್ದೀರಿ ಎಂಬುದು ಜನರಿಗೆ ಗೊತ್ತಿದೆ. ಏನು ನಿಮ್ಮಿಂದ ಜೆಡಿಎಸ್‌ಗೆ ಮತಗಳು ಬಂದವಾ, ನನ್ನಿಂದ ನಿಮ್ಮ ಪಕ್ಷಕ್ಕೆ ಬಂದಿವೆ. ಪುಣ್ಯಾತ್ಮರೇ ನೀವು ಬಂದು ಇಲ್ಲಿ ಸಭೆ ಮಾಡಿ. ನನ್ನ ಹೆಸರು ಹೇಳಬೇಡಿ ನನಗೂ ಏನಾದರೂ ಆಗಿ ಬಿಡುತ್ತೆ. ಹಾಗಾಗಿ, ನನ್ನ ಹೆಸರು ಹೇಳಬೇಡಿ ಎಂದು ಟಾಂಗ್ ಕೊಟ್ಟರು.
ನಾವು ಹೆಂಡತಿ, ಮಕ್ಕಳು ಕಟ್ಕಂಡು ರಾಜಕಾರಣ ಮಾಡಲ್ಲ. ಅರಸೀಕೆರೆಯಲ್ಲಿ ಬದುಕುತ್ತೀನಿ, ಇಲ್ಲೇ ಸಾಯ್ತಿನಿ. ಈ ಜನುಮದಲ್ಲಿ ನಾನು ಇರುವವರೆಗೂ ನಿಮಗೆ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ನಿಮಗೆ ಆಶೀರ್ವಾದ ಮಾಡುವ ಜಾಯಮಾನವೂ ನಮ್ಮದಲ್ಲ. ಈ ಅರಸೀಕೆರೆ ಕನಸಿನಲ್ಲಿ ಇಟ್ಟು ಕರೆದುಕೊಂಡು ಬಂದಿದ್ದೀರಲ್ಲಾ ಪುಣ್ಯಾತ್ಮರೇ, ನಾವು ಏನು ಅಂಥ ತೋರಿಸುತ್ತೇನೆ. ಒಕ್ಕಲಿಗರು ದೇವೇಗೌಡರನ್ನ ಬಿಟ್ಟು ಮತ ಹಾಕಲ್ಲ ಅಂತಿದ್ದರು, ನನಗೆ ಏಕೆ ಮತ ಹಾಕಿದ್ರು. ನೋಡೋಣ ಇದು ರಣರಂಗ, ಮಹಾಭಾರತ ಇವತ್ತೇ ಘೋಷಣೆ ಮಾಡಿದ್ದೀನಿ. ತಾಕತ್ ಇದ್ದರೆ ಬರಲಿ ಎಂದು ಚುನಾವಣೆಗೆ ಸ್ಪರ್ಧಿಸುವಂತೆ ಎಂದು ರೇವಣ್ಣಗೆ ಆಹ್ವಾನ ನೀಡಿದರು.

