ಯಶ್ ನಟನೆಯ ಕೆಜಿಎಫ್ ಸಿನಿಮಾಗೆ ಸಂಭಾಷಣೆ ಬರೆದಿದ್ದ ಚಂದ್ರಮೌಳಿ ಇದೀಗ ನಿರ್ದೇಶನಕ್ಕೆ ಇಳಿದಿದ್ದು, ಚಂದ್ರಮೌಳಿ ನಿರ್ದೇಶನದಲ್ಲಿ ವೈಲ್ಡ್ ಟೈಗರ್ ಸಫಾರಿ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾದ ಟೀಸರ್ ದುಬೈನ ಸುಪ್ರಸಿದ್ಧ ಗ್ಲೋಬಲ್ ವಿಲೇಜ್ ನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ.
ಶೀಥಲ್ ಪೂಜಾರಿ ಸಿನಿಮಾದ ನಾಯಕನಾಗಿದ್ದು, ನಿಮಿಕಾ ರತ್ನಾಕರ್ ನಾಯಕಿಯಾಗಿ ನಟಿಸಿದ್ದಾರೆ. ಶೀಥಲ್ ಪೂಜಾರಿಗೆ ಇದು ಚೊಚ್ಚಲ ಸಿನಿಮಾ. ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ ಫೇಮಸ್ ಆಗಿರುವ ನಿಮಿಕಾ, ಈ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ದುಬೈನಲ್ಲೆ ನೆಲೆಸಿರುವ ವಿನೋದ್ ಕುಮಾರ್, ಕಿಶೋರ್ ಕುಮಾರ್, ಪ್ರಸನ್ನ ಕುಮಾರ್ ಹಾಗೂ ಗುರುದತ್ ಗಾಣಿಗ ಜಂಟಿಯಾಗಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.
ಅವಿನಾಶ್, ಅಚ್ಯುತ್ ಕುಮಾರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಬಾಲಿವುಡ್ನ ಧರ್ಮೇಶ್ ಮತ್ತು ಸುಶಾಂತ್ ಪೂಜಾರಿ ಕೂಡ ತಾರಾಗಣದಲ್ಲಿ ಇದ್ದಾರೆ. ಸೂಪರ್ ಹಿಟ್ ‘ಎಬಿಸಿಡಿ’ ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಕೂಡ ಕನ್ನಡದ ‘ಟೈಗರ್ ಸಫಾರಿ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದು ಮತ್ತೊಂದು ವಿಶೇಷ.
ವೈಲ್ಡ್ ಟೈಗರ್ ಸಫಾರಿ ಸಿನಿಮಾದ ಟೀಸರ್ ಬಿಡುಗಡೆಯಲ್ಲಿ ಭಾಗಿಯಾಗಿದ್ದ ಖ್ಯಾತ ಕೊರಿಯೋಗ್ರಾಫರ್ ರೆಮೋ ಡಿ ಸೋಜಾ ಟೀಸರ್ ಗೆ ಫಿದಾ ಆಗಿದ್ದಾರೆ. ಟೀಸರ್ ಲಾಂಚ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಸಚಿನ್ ಬಸ್ರೂರು ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಗಣೇಶ್ ಆಚಾರ್ಯ ಹಾಗೂ ಇರ್ಮಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ.


