– ಗ್ಯಾರಂಟಿಗಳಿಗೆ 1 ಲಕ್ಷದ 12 ಸಾವಿರ ಕೋಟಿ ರೂ. ಮೀಸಲು: ಸಿದ್ರಾಮಯ್ಯ
ರಾಯಚೂರು: ಜಿಲ್ಲೆಯ ಸಿಂಧನೂರಿನ ಐತಿಹಾಸಿಕ ಅಂಬಾದೇವಿ ಜಾತ್ರೆಯ (Amba Jatra) ಮಹಾರಥೋತ್ಸವ ಹಾಗೂ ಅಂಬಾ ಮಾತೆಯ ಜಂಬೂ ಸವಾರಿ ವಿಜೃಂಭಣೆಯಾಗಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಜಂಬೂಸವಾರಿಗೆ ಚಾಲನೆ ನೀಡಿದರು.
ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ತಾಯಿಯ ದರ್ಶನವಾಗಿದ್ದು ನನ್ನ ಪುಣ್ಯ. ಇಂದು ಈ ಕ್ಷೇತ್ರದಲ್ಲಿ ಸಾಲಗುಂದಾ ಏತನೀರಾವರಿ, ಮುಳ್ಳೂರು ಏತ ನೀರಾವರಿ ಮತ್ತು ವಳಬಳ್ಳಾರಿ ವಿಯರ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ನಾವು ಅಧಿಕಾರಕ್ಕೆ ಬಂದ ಮೇಲೆ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ನಿಗಮಗಳಡಿ ₹176… pic.twitter.com/FV5Q6hzyc7
— Siddaramaiah (@siddaramaiah) January 3, 2026
ಹೊರ ರಾಜ್ಯಗಳಿಂದಲೂ ಭಕ್ತರ ದಂಡು
ಮಹಾ ರಥೋತ್ಸವದಲ್ಲಿ ರಾಜ್ಯ ಮಾತ್ರವಲ್ಲದೇ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಲಕ್ಷಾಂತರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಜನವರಿ 2 ರಿಂದ ಜನವರಿ 6ರ ವರೆಗೆ ನಡೆಯಲಿರುವ ಅಂಬಾದೇವಿ ಜಾತ್ರೆಯಲ್ಲಿ ನಿತ್ಯ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧೆಡೆಯಿಂದ ಆಗಮಿಸುವ ಭಕ್ತರು ಭಾಗವಹಿಸಿ ಅಂಬಾದೇವಿ ಅನುಗ್ರಹ ಪಡೆಯುತ್ತಿದ್ದಾರೆ.
ಜ.6 ರ ಕುಂಭೊತ್ಸವದೊಂದಿಗೆ ತೆರೆ
ಜನವರಿ 6 ರಂದು ಕುಂಭೋತ್ಸವದೊಂದಿಗೆ ಅಂಬಾದೇವಿ ಜಾತ್ರೆಗೆ ತೆರೆ ಬೀಳಲಿದೆ. ಮಹಾರಥೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಸಚಿವರಾದ ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಶಿವರಾಜ್ ತಂಗಡಿ, ಡಾ.ಶರಣಪ್ರಕಾಶ್ ಪಾಟೀಲ್, ಶಾಸಕ ಹಂಪನಗೌಡ ಬಾದರ್ಲಿ ಸೇರಿ ಹಲವರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಜಂಬೂಸವಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ತಾಯಿಯ ದರ್ಶನವಾಗಿದ್ದು ನನ್ನ ಪುಣ್ಯ. ಇಂದು ಈ ಕ್ಷೇತ್ರದಲ್ಲಿ ಸಾಲಗುಂದಾ ಏತನೀರಾವರಿ, ಮುಳ್ಳೂರು ಏತ ನೀರಾವರಿ ಮತ್ತು ವಳಬಳ್ಳಾರಿ ವಿಯರ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ನಾವು ಅಧಿಕಾರಕ್ಕೆ ಬಂದ ಮೇಲೆ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ನಿಗಮಗಳಡಿ 176 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಸಾಲಗುಂದಾ ಏತ ನೀರಾವರಿಗೆ 71 ಕೋಟಿ ರೂ., ಮಳ್ಳೂರು ಏತ ನೀರಾವರಿಗೆ 21 ಕೋಟಿ ರೂ., ಒಳಬಳ್ಳಾರಿ ಏತ ನೀರಾವರಿಗೆ 43 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಒದಗಿಸಲಾಗಿದೆ. ಹಂಪನಗೌಡ ಬಾದರ್ಲಿ ಅವರು ಈ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತಮವಾಗಿ ಮಾಡುತ್ತಿದ್ದಾರೆ. 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರು ಒದಗಿಸುವ ಪ್ರಯತ್ನದಲ್ಲಿ 30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗಿದೆ. ಉಳಿದ 12 ಲಕ್ಷ ಪ್ರದೇಶಕ್ಕೆ ನೀರು ಒದಗಿಸುವ ಕಾರ್ಯ ವಿವಿಧ ಹಂತಗಳಲ್ಲಿದೆ.
431 ಕೋಟಿ ರೂ. ವೆಚ್ಚದಲ್ಲಿ ಪಾಪಯ್ಯ ಟನಲ್ ಮತ್ತು ಕಾಲುವೆ ಅಭಿವೃದ್ಧಿಗೆ ಹಾಗೂ ತುಂಗಭದ್ರಾ 33 ಗೇಟ್ ಗಳನ್ನು ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಜೂನ್ ಒಳಗೆ ಈ ಕೆಲಸವನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಬೆಳೆಗೆ ನೀರು ಒದಗಿಸಲಾಗುವುದು. ಎಷ್ಟೇ ವೆಚ್ಚವಾದರೂ ಹೊಸ ಗೇಟ್ ಗಳನ್ನು ಅಳವಡಿಸಿ ನೀರು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಗ್ಯಾರಂಟಿಗಳಿಗೆ 1 ಲಕ್ಷದ 12 ಸಾವಿರ ಕೋಟಿ ರೂ. ಮೀಸಲು
ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವುದು ಅಪ್ಪಟ ಸುಳ್ಳು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ತಡೆ ಉಂಟಾಗಿಲ್ಲ. ಗ್ಯಾರಂಟಿಗಳಿಗೆ ಒಂದು ಲಕ್ಷದ 12 ಸಾವಿರ ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 643 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ಸುಮಾರು 16 ಸಾವಿರ ಕೋಟಿ ವೆಚ್ಚವಾಗಿದೆ. 52,000 ಕೋಟಿ ಗಳನ್ನು ಈ ವರ್ಷ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಅಧಿಸೂಚನೆ ಹೊರಡಿಸಿಲ್ಲ
ದೇಶದಲ್ಲಿಯೇ ಕರ್ನಾಟಕ ಅತಿ ಹೆಚ್ಚು ಒಣ ಭೂಮಿಯನ್ನು ಹೊಂದಿರುವ 2ನೇ ರಾಜ್ಯ. ಆದ್ದರಿಂದ ರಾಜ್ಯದಲ್ಲಿ ಹೆಚ್ಚಿನ ನೀರಾವರಿ ಯೋಜನೆ ಕೈಗೆತ್ತಿಕೊಂಡು ಹಸಿರು ವಲಯ ಮಾಡುವುದು ನಮ್ಮ ಉದ್ದೇಶ. ಸಿಂಧನೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಚುರುಕುಗೊಳಿಸಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಇನ್ನೂ ಹೊರಡಿಸಿಲ್ಲ. 2003 ರಲ್ಲಿಯೇ ಇತ್ಯರ್ಥವಾಗಿ ನಮಗೆ ನ್ಯಾಯ ದೊರಕಿದ್ದರೂ 173 ಟಿಎಂಸಿ ನೀರನ್ನು ಬಳಕೆ ಮಾಡಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯವನ್ನು ಹೇರಲಾಗಿದೆ ಎಂದು ವಿವರಿಸಿದ್ರು.
ನೀರಾವರಿ ಯೋಜನೆಗಳ ಮೂಲಕ ಆದಷ್ಟು ಶೀಘ್ರವಾಗಿ ಕಟ್ಟಕಡೆಯ ಭಾಗದ ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡುತ್ತೇವೆ. ದೇವಸ್ಥಾನದ ಅಭಿವೃದ್ಧಿಗೆ ಮೊದಲನೇ ಹಂತದಲ್ಲಿ 6.30 ಕೋಟಿ ರೂ. ಅನುದಾನದ ಪೈಕಿ 2 ಕೋಟಿ ರೂ. ಈಗಾಗಲೇ ವೆಚ್ಚ ಮಾಡಲಾಗಿದೆ. ಉಳಿದ ಹಣವನ್ನೂ ಬಿಡುಗಡೆ ಮಾಡಲಾಗುವುದು. ದೇವಸ್ಥಾನ ಮತ್ತು ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಮನರೇಗಾ ಯೋಜನೆಗೆ 6,000 ಕೋಟಿ ರೂ.ಗಳನ್ನು ಪ್ರತಿ ವರ್ಷ ಖರ್ಚು ಮಾಡಲಾಗುತ್ತಿತ್ತು. ಆದರೆ ಕೇಂದ್ರದವರು ಈಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಯೋಜನೆಯನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದ್ದಾರೆ. ಬಡವರು, ಮಹಿಳೆಯರು, ದಲಿತರು, ಸಣ್ಣ ರೈತರಿಗೆ ತೀವ್ರ ತೊಡಕುಂಟು ಮಾಡುವ ಈ ಹೊಸ ಕಾಯ್ದೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ರು.
ವಿಬಿ ಜಿ ರಾಮ್ ಜಿ ಕಾನೂನನ್ನು ರದ್ದು ಮಾಡಿ, ಮನರೇಗಾ ಕಾನೂನು ಪುನರ್ ಸ್ಥಾಪನೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕಾನೂನಿನ ಸ್ವರೂಪವನ್ನೇ ಬದಲಾಯಿಸಲಾಗಿದೆ. ಹಿಂದಿನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಪೂರ್ಣ ಅನುದಾನವನ್ನು ಭರಿಸುತ್ತಿತ್ತು. ಆದರೆ ಈಗ ಕೇಂದ್ರವು ಶೇ.60 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 40 ರಷ್ಟು ಅನುದಾನ ಭರಿಸಬೇಕೆಂಬ ಹೊಸ ನಿಯಮ ತಂದಿರುವುದು ಒಕ್ಕೂಟ ನಿಯಮಕ್ಕೆ ವಿರುದ್ಧ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಾರಿಗೊಳಿಸಿದ್ದ, ಜನಪರವಾಗಿದ್ದ ಮನರೇಗಾ ಕಾನೂನನ್ನು 20 ವರ್ಷಗಳ ನಂತರ ಪ್ರಧಾನಿ ಮೋದಿಯವರು ಹೆಸರು ಬದಲಿಸಿ ವಿಬಿ ಜಿ ರಾಮ್ ಜಿ ಎಂದು ನಾಮಕರಣ ಮಾಡಿದ್ದಾರೆ. ಕೇಂದ್ರದ ಈ ಕ್ರಮವನ್ನು ರಾಜ್ಯದ ಜನರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಕರೆ ನೀಡಿದರು.



