– ಮಡುರೊ ಮೇಲೆ ಭಯೋತ್ಪಾದನೆ ಪಿತೂರಿ ಆರೋಪ; ಅಮೆರಿಕ ಏರ್‌ಸ್ಟ್ರೇಕ್‌ಗೆ ಕಾರಣ ಏನು?
ವಾಷಿಂಗ್ಟನ್: ವೆನೆಜುವೆಲಾ ಮೇಲೆ ಇಂದು ವೈಮಾನಿಕ ದಾಳಿ ಆರಂಭಿಸಿರುವ ಅಮೆರಿಕ, ದಾಳಿ ಆರಂಭವಾಗಿ ಕೆಲವೇ ಗಂಟೆಗಳಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ (Nicolas Maduro) ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆ ಹಿಡಿದಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪ್ರಕಟಿಸಿದ್ದಾರೆ.
ಇಬ್ಬರನ್ನೂ ಸೆರೆಹಿಡಿದು ವೆನೆಜುವೆಲಾ (Venezuela) ದೇಶದಿಂದ ಹೊರಕ್ಕೆ ತರಲಾಗಿದೆ ಎಂದು ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಶಿಯಲ್’ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಈ ಬೆನ್ನಲ್ಲೇ ಇಬ್ಬರ ವಿರುದ್ಧ ನ್ಯೂಯಾರ್ಕ್‌ನಲ್ಲಿ ದೋಷಾರೋಪಣೆ ಮಾಡಲಾಗಿದೆ. ಮಾದಕ ದ್ರವ್ಯ, ಭಯೋತ್ಪಾದನಾ ಪಿತೂರಿ, ಕೊಕೇನ್ ಆಮದು ಪಿತೂರಿ, ಮಿಷಿನ್ ಗನ್ ಹಾಗೂ ವಿನಾಶಕಾರಿ ಸಾಧನಗಳನ್ನು ಹೊಂದಿರುವ ಪಿತೂರಿಗಳು ಸೇರಿ ಹಲವು ಆರೋಪಗಳನ್ನ ಹೊರಿಸಲಾಗಿದೆ ಎಂದು ಯುಎಸ್ ಅಟಾರ್ನಿ ಜನರಲ್ ಪಮೇಲಾ ಬಾಂಡಿ ಘೋಷಿಸಿದ್ದಾರೆ. ಈ ನಡುವೆ ಅಧ್ಯಕ್ಷ ನಿಕೋಲಸ್ ಮಡುರೊ ಕುರಿತ ರೋಚಕ ಸ್ಟೋರಿಯೊಂದು ಹೊರಬಿದ್ದಿದೆ. ಸಾಮಾನ್ಯ ಬಸ್ ಡ್ರೈವರ್ ಆಗಿದ್ದ ನಿಕೋಲಸ್ ಮಡುರೊ ಒಂದು ದೇಶದ ಅಧ್ಯಕ್ಷನಾಗಿದ್ದು ಹೇಗೆ ಎಂಬ ರೋಚಕ ಕಥೆಯನ್ನ ಇಲ್ಲಿ ತಿಳಿಬಹುದಾಗಿದೆ. ಇದನ್ನೂ ಓದಿ: ವೆನೆಜುವೆಲಾದ ಮೇಲೆ ಏರ್‌ಸ್ಟೈಕ್, ಅಧ್ಯಕ್ಷ ಸೆರೆ: ಟ್ರಂಪ್ ಘೋಷಣೆ
ಬಸ್ ಡ್ರೈವರ್‌ನಿಂದ ಅಧ್ಯಕ್ಷನಾಗುವವರೆಗೆ…
ನಿಕೋಲಸ್ ಮಡುರೊ 1962ರ ನವೆಂಬರ್ 23 ರಂದು ಕಾರ್ಮಿಕ ವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ಟ್ರೇಡ್ ಯೂನಿಯನ್ ನಾಯಕನಾಗಿದ್ದರು. ಬಸ್ ಚಾಲಕನಾಗಿ ತಮ್ಮ ವೃತ್ತಿಜೀವನ ಶುರು ಮಾಡಿದ ಮಡುರೊ ತಂದೆಯ ಹಾದಿಯಲ್ಲೇ ಸಾಗಿದರು. 1990ರ ದಶಕದಲ್ಲಿ ಟ್ರೇಡ್ ಯೂನಿಯನ್ ನಾಯಕನಾಗಿ ಹೆಸರು ಗಳಿಸಿದರು. 1992 ರಲ್ಲಿ ಸೇನಾಧಿಕಾರಿ ಹ್ಯೂಗೋ ಚಾವೆಜ್ ಅವರ ಬೊಲಿವೇರಿಯನ್ ಕ್ರಾಂತಿ ಬೆಂಬಲಿಸುವ ಇತರ ಎಡಪಂಥೀಯ ಗುಂಪುಗಳೊಂದಿಗೆ ಸೇರಿಕೊಂಡು ಯುನೈಟೆಡ್ ಸೋಷಿಯಲಿಸ್ಟ್ ಪಾರ್ಟಿ (PSUV) ರಚಿಸಿದರು. ಇದನ್ನೂ ಓದಿ: ವೆನೆಜುವೆಲಾದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ
1998 ರಲ್ಲಿ ಚಾವೆಜ್ ಅಧ್ಯಕ್ಷ ಸ್ಥಾನ ಗೆದ್ದ ನಂತರ, ಮಡುರೊ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ರು, ಎಂವಿಆರ್ ಪಕ್ಷದಿಂದ ಶಾಸಕಾಂಗದಲ್ಲಿ ಸ್ಥಾನ ಪಡೆದರು. 2000 ಇಸವಿಯಲ್ಲಿ ಸಂಸತ್ತಿನ ಸದಸ್ಯರಾಗುವಲ್ಲಿ ಯಶಸ್ವಿಯಾದರು. ನಂತರ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು. ವೆನೆಜುವೆಲಾದ ತೈಲ ಸಂಪತ್ತಿನ ಬೆಂಬಲದೊಂದಿಗೆ ಅಂತಾರಾಷ್ಟ್ರೀಯ ಸಂಬಂಧಗಳನ್ನ ಬಲಪಡಿಸಲು ಸಾಕಷ್ಟು ಶ್ರಮಿಸಿದರು. ಈ ಬೆಳವಣಿಗೆ ನಡೆಯುತ್ತಿರುವಾಗಲೇ ಚಾವೆಜ್ ನಿಧನರಾಗುವ ಮೊದಲೇ ಮಡುರೊ ಅವರನ್ನ ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸಿದರು. ಇದನ್ನೂ ಓದಿ: ಮುಲ್ಲಾಗಳೇ ದೇಶಬಿಟ್ಟು ತೊಲಗಿ – ಇರಾನ್ ಪ್ರತಿಭಟನೆಯಲ್ಲಿ 7 ಮಂದಿ ಬಲಿ; ಟ್ರಂಪ್ ವಾರ್ನಿಂಗ್
ಸವಾಲಿನ ಹಾದಿ
ಚಾವೇಜ್ 2013ರ ಮಾರ್ಚ್‌ನಲ್ಲಿ ಮರಣ ಹೊಂದಿದ ನಂತರ 2013ರ ಏಪ್ರಿಲ್‌ನಲ್ಲಿ ಮಡುರೊ ಅಧ್ಯಕ್ಷನಾಗಿ ಆಯ್ಕೆಯಾದರು. ಅಂದಿನಿಂದ ಈವರೆಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮಡುರೊ ಅಧಿಕಾರ ಅವಧಿಯು ಸವಾಲಿನ ಹಾದಿಯಾಗಿತ್ತು. ತೀವ್ರ ಹಣದುಬ್ಬರ, ಆಹಾರ ಮತ್ತು ಔಷಧಗಳ ಕೊರತೆ ದೀರ್ಘಕಾಲದ ವರೆಗೆ ದೇಶವನ್ನ ಕಾಡಿತ್ತು. ಈ ಅವಧಿಯಲ್ಲಿ ಸಾಕಷ್ಟು ಜನ ವೆನೆಜುವೆಲಾದಿಂದ ಸಾಮೂಹಿಕ ವಲಸೆ ಹೋದರು. 2014 ಮತ್ತು 2019ರಲ್ಲಿ ನಡೆದ ಚುನಾವಣೆಯ ವೇಳೆ ಮಡುರೊ ಸರ್ಕಾರದ ವಿರುದ್ಧ ಭಾರೀ ಅಕ್ರಮ ಆರೋಪ ಕೇಳಿಬಂದಿತು. ಸರ್ಕಾರದ ವಿರುದ್ಧ ಪ್ರತಿಭಟನೆಗಳೂ ನಡೆದವು. ಇದರ ಹೊರತಾಗಿಯೂ ಅಧ್ಯಕ್ಷನಾಗಿ ಮುಂದುವರಿದರು.
2024ರ ಚುನಾವಣೆಯಲ್ಲಿ ಗೆದ್ದ ಬಳಿಕ 3ನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ್ರು. ವಿಪಕ್ಷಗಳು ಹಾಗೂ ಅಂತಾರಾಷ್ಟ್ರೀಯ ಕೆಲ ನಾಯಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಯುಎನ್ ಸತ್ಯಶೋಧನಾ ಕಾರ್ಯಾಚರಣೆಯು ವೆನೆಜುವೆಲಾದ ಬೊಲಿವೇರಿಯನ್ ನ್ಯಾಷನಲ್ ಗಾರ್ಡ್ ಒಂದು ದಶಕಕ್ಕೂ ಹೆಚ್ಚು ಕಾಲ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾನವೀಯತೆಯ ವಿರುದ್ಧ ಅಪರಾಧಗಳನ್ನ ಮಾಡಿದೆ ಎಂದು ಆರೋಪಿಸಿತ್ತು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಬಲಿ – ಕಿಡಿಗೇಡಿಗಳಿಂದ ಪಾರಾಗಿದ್ದ ಉದ್ಯಮಿ ಚಿಕಿತ್ಸೆ ಫಲಕಾರಿಯಾಗದೇ ಸಾವು
ಸತತ ಪ್ರಯತ್ನಗಳು ವಿಫಲವಾಗಿ ದಾಳಿ ಮಾಡಿದ ಅಮೆರಿಕ
2013ರಿಂದ ಸತತವಾಗಿ ವೆನೆಜುವೆಲಾದ ಅಧ್ಯಕ್ಷ ಸ್ಥಾನದಲ್ಲಿರುವ ಮಡುರೊ ಅವರ ಅಧಿಕಾರವನ್ನ ಟ್ರಂಪ್ ಆಡಳಿತ ಪ್ರಶ್ನಿಸುತ್ತಿದೆ. ಇತ್ತೀಚೆಗೆ, ಅಂದ್ರೆ 2024ರಲ್ಲಿ ವೆನೆಜುವೆಲಾದಲ್ಲಿ ನಡೆದಿರುವ ಚುನಾವಣೆಯು ನ್ಯಾಯಯುತವಾಗಿಲ್ಲ ಎಂಬುದು ಅಮೆರಿಕದ ವಾದ. ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿ ಮಡುರೊ ಅವರು ಅಧಿಕಾರಕ್ಕೆ ಪದೇ ಪದೇ ಬರುತ್ತಿದ್ದಾರೆ ಎಂಬುದು ಅಮೆರಿಕದ ವಾದ. ಅದೇ ಕಾರಣಕ್ಕಾಗಿ, ವೆನೆಜುವಲಾದ ಆಂತರಿಕ ವಿಚಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಾ, ಹಲವಾರು ರಾಜತಾಂತ್ರಿಕ ಪ್ರಯತ್ನಗಳು ಮತ್ತು ಆರ್ಥಿಕ ಒತ್ತಡಗಳನ್ನು ಹೇರುವ ಮೂಲಕ ಮಡುರೊ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಅಮೆರಿಕ ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದಕ್ಕೆ ಈಗ ನೇರವಾಗಿ ದಾಳಿ ನಡೆಸಲು ಮುಂದಾಗಿದೆ ಅಮೆರಿಕ.
ನೊಬೆಲ್ ಶಾಂತಿ ಪ್ರಶಸ್ತಿಯನ್ನ ಟ್ರಂಪ್‌ಗೆ ಅರ್ಪಿಸಿದ್ದ ಮಚಾದೊ
2025ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ಗೌರವವನ್ನು ವೆನೆಜುವೆಲಾದ ಜನತೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸಿ ಅಚ್ಚರಿ ಮೂಡಿಸಿದ್ದರು. ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಟ್ರಂಪ್ ನೀಡಿದ ಬೆಂಬಲವನ್ನು ಸ್ಮರಿಸಿರುವ ಮಚಾದೊ ಅವರ ಈ ನಡೆ ಆಯ್ಕೆ ಸಮಿತಿಯನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಶಾಂತಿ ಪ್ರಶಸ್ತಿಯನ್ನು ರಾಜಕೀಯ ನಾಯಕನಿಗೆ ಅರ್ಪಿಸಿರುವುದು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.




