ರಾಯಚೂರು: ಹೊಸ ವರ್ಷದ ಮೊದಲ ದಿನ ಗುರುವಾರವಾದ್ದದ್ದರಿಂದ ಮಂತ್ರಾಲಯಕ್ಕೆ (Mantralaya) ಭಕ್ತಸಾಗರವೇ ಹರಿದು ಬಂದಿದೆ.
ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರದಂಡೇ ಆಗಮಿಸಿದ್ದು, ರಾಯರ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಗುರುರಾಯರ ವಾರ ಗುರುವಾರವೇ ವರ್ಷದ ಮೊದಲ ದಿನ ಬಂದ ಹಿನ್ನೆಲೆ ಪ್ರತಿ ವರ್ಷಕ್ಕಿಂತಲೂ ಎರಡುಪಟ್ಟು ಭಕ್ತರಿಂದ ರಾಯರ ಮಠ ತುಂಬಿ ತುಳುಕುತ್ತಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಮೆಟ್ರೋ ಧಮಾಕಾ – ಒಂದೇ ದಿನ 8.93 ಲಕ್ಷ ಪ್ರಯಾಣಿಕರ ಸಂಚಾರ, 3.08 ಕೋಟಿ ಆದಾಯ
ಬೆಳಿಗ್ಗೆ ಐದು ಗಂಟೆಯಿಂದಲೇ ರಾಯರ ವೃಂದಾವನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಮಠದ ಎಲ್ಲಾ ದ್ವಾರಗಳ ಮೂಲಕ ಭಕ್ತರಿಗೆ ಒಳಬರಲು ಅವಕಾಶ ನೀಡಲಾಗಿದೆ. ಹೊಸ ವರ್ಷದ ಆರಂಭದ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದುಬಂದಿದ್ದು, ಹೊಸ ವರ್ಷದಲ್ಲಿ ಶುಭವಾಗಲಿ ಅಂತ ರಾಯರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಭಕ್ತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಮಠದ ಕೊಠಡಿ, ಪ್ರಸಾದ ವ್ಯವಸ್ಥೆಯಲ್ಲಿ ವ್ಯತ್ಯಯವಾಗುತ್ತಿದೆ. ದೇಶ, ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ರಾಯರ ದರ್ಶನಕ್ಕೆ ಸಾವಿರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದು, ದರ್ಶನಕ್ಕಾಗಿ ಗಂಟೆಗಟ್ಟಲೇ ಕಾಯುತ್ತಿದ್ದಾರೆ. ವರ್ಷದ ಮೊದಲನೇ ದಿನ ರಾಘವೇಂದ್ರ ಸ್ವಾಮಿಗಳ ಅನುಗ್ರಹವಾದರೆ, ಇಡೀ ವರ್ಷ ಒಳಿತಾಗುತ್ತದೆ ಅನ್ನೋ ನಂಬಿಕೆಯಲ್ಲಿ ಭಕ್ತರು ಬಂದಿದ್ದಾರೆ.ಇದನ್ನೂ ಓದಿ: ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಎನ್.ವಿನಯ್ ಹೆಗ್ಡೆ ನಿಧನ

