ಚಿಕ್ಕಬಳ್ಳಾಪುರ: ಹೊಸ ವರ್ಷದ ಸಂಭ್ರಮದ ನಡುವೆ ಮೋಜು ಮಸ್ತಿಯಿಂದ ಆಗಬಹುದಾದ ಅನಾಹುತ, ಅಹಿತಕರ ಘಟನೆಗಳು ಆಗದಂತೆ ತಡೆಯುವ ಸಲುವಾಗಿ ಮುನ್ನೆಚ್ಚರಿಕೆ ವಹಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ (Nandi Hills) ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದರ ನಡುವೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಅರಣ್ಯ ಇಲಾಖೆ ಸಹ ಎಚ್ಚೆತ್ತುಕೊಂಡಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಚಾರಣ ತಾಣಗಳಾದ ಸ್ಕಂದಗಿರಿ (Skandagiri Hill) ಹಾಗೂ ಕೈವಾರದ ಭೀಮಲಿಂಗೇಶ್ವರ ಬೆಟ್ಟದ (Kaiwara Hill) ಟ್ರಕ್ಕಿಂಗ್ (Trekking) ಬಂದ್ ಮಾಡಿದೆ.
ನಂದಿಗಿರಿಧಾಮದ ಪಕ್ಕದಲ್ಲೇ ಇರುವ ಸ್ಕಂದಗಿರಿ ಬೆಟ್ಟ ಚಾರಣಿಗರ ಹಾಟ್ ಫೆವರೇಟ್. ನಂದಿಬೆಟ್ಟ ಬಂದ್ ಹಿನ್ನೆಲೆಯಲ್ಲಿ ಪ್ರವಾಸಿಗರು ಸ್ಕಂದಗಿರಿಯತ್ತ ನುಗ್ಗುವ ಆತಂಕ ಇದೆ. ಇದರಿಂದ ಅಲರ್ಟ್ ಆಗಿರುವ ಅರಣ್ಯ ಇಲಾಖೆಯ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಇವತ್ತು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೂ ಯಾರೂ ಸಹ ಬೆಟ್ಟಗಳತ್ತ ಬಾರದಂತೆ ಬ್ರೇಕ್ ಹಾಕಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಕೌಂಟ್‌ಡೌನ್ – ಮೆಟ್ರೋ, ಬಿಎಂಟಿಸಿ ಸಮಯ ವಿಸ್ತರಣೆ
ಈಗಾಗಲೇ ನಂದಿಬೆಟ್ಟ ಬಂದ್ ಆದೇಶ ಮಾಡಿರುವ ಕಾರಣ ಬಹುತೇಕ ಪ್ರವಾಸಿಗರು ಪಕ್ಕದಲ್ಲೇ ಇರೋ ಸ್ಕಂದಗಿರಿಯತ್ತ ನುಗ್ಗುವ ಭೀತಿ ಇದೆ. ಅದರಲ್ಲೂ ಚಾರಣಕ್ಕೂ ಫೇಮಸ್ ಆಗಿರೋ ಸ್ಕಂದಗಿರಿ ಬೆಟ್ಟಕ್ಕೆ ಪ್ರತಿ ನಿತ್ಯವೂ ಎಕೋ ಟೂರಿಸಂ ವತಿಯಿಂದಲೇ ಚಾರಣಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಹೊಸ ವರ್ಷದ ಅಂಗವಾಗಿ ಹೆಚ್ಚಿನ ಪ್ರವಾಸಿಗರು ಆಗಮಿಸಿ ಬೆಟ್ಟಗಳಿಗೆ ನುಗ್ಗಿ ಮೋಜು ಮಸ್ತಿ ಮಾಡಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಅದರಲ್ಲೂ ಬೆಂಕಿ ಹಾಕಿ ಕಾಡ್ಗಿಚ್ಚು ಹತ್ತಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಅಲರ್ಟ್ ಆಗಿರುವ ಅರಣ್ಯ ಇಲಾಖೆ ಸ್ಕಂದಗಿರಿ, ಕೈವಾರದ ಬೆಟ್ಟದ ಚಾರಣಕ್ಕೆ ಬ್ರೇಕ್ ಹಾಕಿದೆ. ಇನ್ನೂ ಪ್ರವಾಸಿಗರ ಆಕರ್ಷಣೆಯ ಆವಲಬೆಟ್ಟದ ಬಳಿಯೂ ಅರಣ್ಯ ಇಲಾಖಾಧಿಕಾರಿಗಳು ಚೆಕ್‌ಪೋಸ್ಟ್ ಹಾಕಿ ತಪಾಸಣೆ ನಡೆಸಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ವೆಲ್‌ಕಮ್‌ಗೆ ಬೆಂಗಳೂರು ಸಜ್ಜು – ಹಾಟ್ ಸ್ಪಾಟ್‌ಗಳಲ್ಲಿ ಪೊಲೀಸ್ ಕಣ್ಗಾವಲು

