2025 ಮುಗಿಯುತ್ತಾ ಬಂದಿದ್ದು ಈ ವರ್ಷ ವಿತ್ತ ಜಗತ್ತಿನಲ್ಲಿ ಹಲವು ಸುದ್ದಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಪೈಕಿ ಕೆಲ ಸುದ್ದಿಗಳಿಂದ ಭಾರತದ (India) ಮೇಲೆ ಧನಾತ್ಮಕ ಪರಿಣಾಮ ಬಿದ್ದರೆ ಕೆಲ ಸುದ್ದಿ, ನಿರ್ಧಾರಗಳಿಂದ ಭಾರತದ ಮೇಲೆ ಋಣಾತ್ಮಕ ಪರಿಣಾಮ ಬಿದ್ದಿದೆ. ಹೀಗಾಗಿ ಇಲ್ಲಿ ಈ ವರ್ಷ ಭಾರತ ಮತ್ತು ವಿಶ್ವದ ಮೇಲೆ ಹೆಚ್ಚು ಪರಿಣಾಮ ಬೀರಿದ ವಿತ್ತ ಜಗತಿನ ಟಾಪ್ ಸುದ್ದಿಗಳ ವಿವರವನ್ನು ನೀಡಲಾಗಿದೆ.
ಟ್ರಂಪ್ ಟ್ಯಾರಿಫ್
ಈ ವರ್ಷ ವಿಶ್ವದ ಮೇಲೆ ಹೆಚ್ಚು ಪರಿಣಾಮ ಬಿದ್ದ ಟಾಪ್ ನ್ಯೂಸ್ ಇದು. ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಸುಮಾರು 90ಕ್ಕೂ ಹೆಚ್ಚು ದೇಶಗಳ ಮೇಲೆ ಟ್ರಂಪ್ (Donald Trump) ತೆರಿಗೆ ಸಮರ ಆರಂಭಿಸಿದರು. ಭಾರತದ ಮೇಲೆ ಆರಂಭದಲ್ಲಿ 25% ನಂತರ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ 25% ಸೇರಿ 50% ತೆರಿಗೆ ಹಾಕಿದರು. ಅಷ್ಟೇ ಅಲ್ಲದೇ ಭಾರತದ ಮಾರುಕಟ್ಟೆಗೆ ಡೈರಿ ಮತ್ತು ಕೃಷಿಯನ್ನು ಉತ್ಪನ್ನಗಳನ್ನು ತರಲು ಭಾರೀ ಒತ್ತಡ ಹೇರುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಿಲ್ಲ. ಈಗಲೂ ಎರಡೂ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದ ಸಂಬಂಧ ಮಾತುಕತೆ ನಡೆಯುತ್ತಲೇ ಇದೆ.
ರೂಪಾಯಿ ಮೌಲ್ಯ ಇಳಿಕೆ
ಟ್ರಂಪ್ ಟ್ಯಾರಿಫ್ (Tariff War) ನೇರ ಪರಿಣಾಮ ಭಾರತದ ಸ್ಟಾಕ್ ಮಾರ್ಕೆಟ್ ಮೇಲೆ ಬಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ಹಿಂದಕ್ಕೆ ಪಡೆದ ಪರಿಣಾಮ ರೂಪಾಯಿ ಮೌಲ್ಯ ಕುಸಿತ ಕಾಣಲು ಆರಂಭವಾಯಿತು. ಪರಿಣಾಮ 1 ಡಾಲರ್ ಬೆಲೆ 91 ರೂ. ಗಡಿಯನ್ನು ದಾಟಿತು. ಆರ್ಬಿಐ (RBI) ಮಧ್ಯಪ್ರವೇಶ ಮಾಡಿದ ಪರಿಣಾಮ ಈಗ ರೂಪಾಯಿ ಮೌಲ್ಯ 89 ರೂ. ಅಸುಪಾಸಿನಲ್ಲಿ ವ್ಯವಹಾರ ಮಾಡುತ್ತಿದೆ. ಇದನ್ನೂ ಓದಿ: ಸೈನಿಕರಿನ್ನು ಫೇಸ್ಬುಕ್, ಇನ್ಸ್ಟಾ ನೋಡಬಹುದು, ಲೈಕ್ ಮಾಡುವಂತಿಲ್ಲ!

ಜಿಎಸ್ಟಿ ಸ್ಲ್ಯಾಬ್
2017 ರಲ್ಲಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆಯಲ್ಲಿ (GST) 4 ಸ್ಲ್ಯಾಬ್ಗಳಿದ್ದವು. 5%, 12%, 18%, 28% ಸ್ಲ್ಯಾಬ್ಗಳಿದ್ದವು. ಈ ಸ್ಲ್ಯಾಬ್ಗಳ ಪೈಕಿ 12% ಮತ್ತು 28% ಸ್ಲ್ಯಾಬ್ಗಳನ್ನು ತೆಗೆದು ಹಾಕಲಾಗಿದೆ. ಒಟ್ಟು 453 ವಸ್ತುಗಳನ್ನು ಪರಿಶೀಲಿಸಿದ್ದು ಈ ಪೈಕಿ 413 ವಸ್ತುಗಳ ದರ ಇಳಿಕೆಯಾಗಿದೆ. 12% ತೆರಿಗೆ ಇದ್ದ ವಸ್ತುಗಳನ್ನು 5% ಸ್ಲ್ಯಾಬ್ಗೆ ಮತ್ತು 28% ತೆರಿಗೆ ಹಾಕುತ್ತಿದ್ದ ಬಹುತೇಕ ವಸ್ತುಗಳನ್ನು 18% ಶಿಫ್ಟ್ ಮಾಡಲಾಗಿದೆ. ಈ ನಿರ್ಧಾರದಿಂದ ಸರ್ಕಾರಗಳಿಗೆ ಆದಾಯ ಕಡಿಮೆಯಾದರೂ ವಸ್ತುಗಳ ಬೆಲೆ ಕಡಿಮೆಯಾಗಿದೆ.
ಬೆಳ್ಳಿ ದರ ಏರಿಕೆ
ಯಾವಾಗ ಎಲೆಕ್ಟ್ರಿಕ್, ಸೆಮಿಕಂಡಕ್ಟರ್, ಸೋಲಾರ್ ಕ್ಷೇತ್ರದಲ್ಲಿ ಬಳಕೆ ಹೆಚ್ಚಾಗುತ್ತಿದ್ದಂತೆ ಬೆಳ್ಳಿ ದರ (Silver Price) ಭಾರೀ ಏರಿಕೆ ಕಾಣುತ್ತಿದೆ. ಎಷ್ಟು ಏರಿಕೆಯಾಗಿದೆ ಅಂದರೆ 2025ರ ಜನವರಿಯಲ್ಲಿ 1 ಕೆಜಿ ಬೆಳ್ಳಿ ದರ 1.04 ಲಕ್ಷ ರೂ. ಇತ್ತು. ಆದರೆ ಈ ಡಿಸೆಂಬರ್ನಲ್ಲಿ 2.14 ಲಕ್ಷ ರೂ.ಗೆ ಏರಿಕೆಯಾಗಿದೆ. ಒಂದು ವರ್ಷದಲ್ಲಿ ಬೆಲೆ 110% ಏರಿಕೆಯಾಗಿದೆ. ಮುಂದೆ ಕೆಲ ತಿಂಗಳಿನಲ್ಲಿ ದರ ಇದು 2.50 ಲಕ್ಷ ರೂ.ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಹಣದುಬ್ಬರ ಇಳಿಕೆ
ಬಹಳ ಮುಖ್ಯವಾಗಿ ಈ ವರ್ಷ ವಸ್ತುಗಳ ಬೆಲೆ ಬಹಳ ಜಾಸ್ತಿ ಏರಿಕೆ ಕಾಣಲಿಲ್ಲ. ಮುಖ್ಯವಾಗಿ ರಷ್ಯಾದಿಂದ ಕಚ್ಚಾ ತೈಲವನ್ನು ಕಡಿಮೆ ಬೆಲೆಗೆ ಆಮದು ಮಾಡುತ್ತಿರುವುದು ಜೊತೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಅಬಕಾರಿ ಸುಂಕವನ್ನು ಏರಿಕೆ ಮಾಡದ ಕಾರಣ ಹಣದುಬ್ಬರ ಇಳಿಕೆಯಾಗಿದೆ. ಸೆಪ್ಟೆಂಬರ್ನಲ್ಲಿ ಜಿಎಸ್ಟಿ 2 ಜಾರಿಗೆ ಬಂದ ಬಳಿಕ ಗೃಹಬಳಕೆ, ಅಟೋಮೊಬೈಲ್ ಸೇರಿದಂತೆ ವಸ್ತುಗಳ ಬೆಲೆ ಇಳಿಕೆಯಾಗಿವೆ.
ಜಿಡಿಪಿ
ಕೋವಿಡ್ ನಂತರ ವಿಶ್ವದ ಜಿಡಿಪಿ (GDP) ಬೆಳವಣಿಗೆಯಲ್ಲಿ ಭಾರತ ನಿರಂತರವಾಗಿ ಮೊದಲ ಸ್ಥಾನದಲ್ಲೇ ಮುಂದುವರಿಯುತ್ತಿದೆ. 2024 ರಲ್ಲಿ 6.5% ಜಿಡಿಪಿ ಸಾಧಿಸಿದರೆ 2025 ರಲ್ಲಿ ಅಮೆರಿಕದ ಸುಂಕ ಸಮರದ ಮಧ್ಯೆಯೂ 6.6% ಜಿಡಿಪಿ ಬೆಳವಣಿಗೆ ಸಾಧಿಸಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿಸಿದೆ.

ಐಪಿಒ
ಹಿಂದೆ ಭಾರತದ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರು ಆಡಿದ್ದೇ ಆಟ ಎನ್ನುವಂತಿತ್ತು. ಆದರೆ ಈಗ ಭಾರತದಲ್ಲಿ ಈಗ ದೇಶೀಯ ಹೂಡಿಕೆದಾರರ ಸಂಖ್ಯೆ ಏರುತ್ತಿದೆ ಜೊತೆಗೆ ಹೂಡಿಕೆಯೂ ಜಾಸ್ತಿ ಆಗುತ್ತಿದೆ. ಪರಿಣಾಮ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ (IPO) ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದ ಐಪಿಒ ಮಾರುಕಟ್ಟೆ ಇತಿಹಾಸ ಬರೆದಿದ್ದು 2025 ರಲ್ಲಿ ದಾಖಲೆಯ 1.75 ಲಕ್ಷ ಕೋಟಿ ರೂ. ಸಂಗ್ರಹಿಸಿದೆ. 2023 ರಲ್ಲಿ 57 ಕಂಪನಿಗಳು ಲಿಸ್ಟ್ ಆಗಿದ್ದರೆ 2024 ರಲ್ಲಿ 91, 2025 ರಲ್ಲಿ ಬರೋಬ್ಬರಿ 103 ಕಂಪನಿಗಳು ಲಿಸ್ಟ್ ಆಗಿವೆ. ಇದು ಹೂಡಿಕೆದಾರರಿಗೆ ಭಾರತದ ಮೇಲೆ ಇಟ್ಟ ವಿಶ್ವಾಸವನ್ನು ತೋರಿಸುತ್ತದೆ.
ಎಐ ಬೂಮ್
ಈ ವರ್ಷ ಹೆಚ್ಚು ಸದ್ದು ಮಾಡಿದ್ದು ಕೃತಕ ಬುದ್ಧಿಮತ್ತೆ. ಗೂಗಲ್ ಜೆಮಿನಿ 3, ಓಪನ್ಎಐ ಜಿಪಿಟಿ-5 ಬಿಡುಗಡೆ ಮಾಡಿದರೆ ಚೀನಾ ಡೀಪ್ಸೀಕ್ ಬಿಡುಗಡೆ ಮಾಡಿತ್ತು. ಎನ್ವಿಡಿಯಾ, ಮೈಕ್ರೋಸಾಫ್ಟ್, ಅಲ್ಫಾಬೆಟ್(ಗೂಗಲ್) ಕಂಪನಿಗಳು ಷೇರು ಮೌಲ್ಯ ಬಹಳ ಏರಿಕೆಯಾಗಿದೆ. ಹಲವು ಕಂಪನಿಗಳು ಎಐನತ್ತ (AI) ಹೊರಳುತ್ತಿದ್ದು ಉದ್ಯೋಗ ಕಡಿತವಾಗಿದೆ. ವಿಶ್ವಾದ್ಯಂತ ಈ ವರ್ಷ ಎಐ ಕಾರಣದಿಂದಲೇ 55 ಸಾವಿರ ಉದ್ಯೋಗ ಕಡಿತವಾಗಿದೆ ಎಂದು ವರದಿಗಳು ತಿಳಿಸಿವೆ. ಎಐ ಬೂಮ್ನಿಂದ ಕಿರಿಯ ವ್ಯಕ್ತಿಗಳು ಶತಕೋಟ್ಯಧಿಪತಿಗಳಾಗಿದ್ದಾರೆ.

