ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಟ್ಟ ಮಂಜಿನಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. 23 ದಿನಗಳಲ್ಲೇ 75 ಅಪಘಾತ ಸಂಭವಿಸಿದ್ದು, 33 ಮಂದಿ ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಾದ್ಯಂತ ಈ ಬಾರಿ ಅತಿಯಾದ ಮಂಜು ಕವಿಯುತ್ತಿದ್ದು, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಅಪಘಾತಗಳು ಆಗುತ್ತಿವೆ. ಶೂನ್ಯ ಗೋಚರತೆ ಪರಿಣಾಮದಿಂದ ಎದುರುಗಡೆ ಇರೋ ವಾಹನಗಳು ಸಹ ಕಣ್ಣಿಗೆ ಕಾಣದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಡಿಸೆಂಬರ್ ತಿಂಗಳಲ್ಲೇ 75 ಕಡೆ ಅಪಘಾತಗಳಾಗಿದ್ದು, 31 ಮಾರಣಾಂತಿಕವಾದ ಅಪಘಾತಗಳು ಸಂಭವಿಸಿದೆ. ಒಟ್ಟು 33 ಮಂದಿ ಸಾವನ್ನಪ್ಪಿದ್ದು, 79ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ಬಿಕ್ಲು ಶಿವ ಕೇಸ್ | CIDಯಿಂದ ಲುಕ್‌ಔಟ್ ನೋಟಿಸ್ – ಶಾಸಕ ಬೈರತಿ ಬಸವರಾಜ್‌ಗೆ ಬಂಧನ ಭೀತಿ
ಚಳಿಗಾಲದ ನಡುವೆ ಶೀತಗಾಳಿಯ ಅಬ್ಬರ ಜೋರಾಗಿದೆ. ಈ ಬಾರಿಯ ತೀವ್ರ ತರ ಚಳಿಗೆ ಜನರು ಗಡ ಗಡ ನಡುಗುವಂತೆ ಆಗಿದೆ. ಅದ್ರಲ್ಲೂ ಮುಂಜಾನೆ ದಟ್ಟ ಮಂಜು ಕವಿಯುತ್ತಿರೋ ಕಾರಣ ಶೂನ್ಯ ಗೋಚರತೆ ಎದುರಾಗುತ್ತಿದೆ. ಚಳಿಯ ನಡುವೆ ದಟ್ಟ ಮಂಜು ಜನರನ್ನ ಮನೆಯಿಂದ ಹೊರಬರೋಕು ಆಗದಂತೆ ಮಾಡ್ತಿದೆ. ಇದರ ನಡುವೆ ಹೆದ್ದಾರಿಗಳಲ್ಲಿ ಸಂಚರಿಸೋ ವಾಹನ ಸವಾರರ ಪಾಡು ಹೇಳತೀರದ್ದಾಗಿದೆ.
ಚಿಕ್ಕಬಳ್ಳಾಪುರ ನಗರದಲ್ಲಿ ಬೆಂಗಳೂರು-ಹೈದರಾಬಾದ್ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಹಾದು ಹೋಗಿದ್ದು, ಪ್ರತಿ ದಿನವೂ ಸಾವಿರಾರು ವಾಹನಗಳ ಸಂಚಾರವಿರುತ್ತದೆ. ಆದ್ರಲ್ಲೂ ಚಿಕ್ಕಬಳ್ಳಾಪುರದ ಬಳಿ ಇಶಾ ಆದಿಯೋಗಿ ಕೇಂದ್ರ ಬಂದ ಮೇಲಂತೂ ವಾಹನಗಳ ಒಡಾಟವೂ ಅತಿಯಾಗಿದೆ. ಇನ್ನೂ ಜಿಲ್ಲೆಯ ಚಿಂತಾಮಣಿ ಮತ್ತೊಂದೆಡೆ ಗೌರಿಬಿದನೂರಿನಲ್ಲೂ ಸಹ ಅಂತರಾಜ್ಯ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಇಲ್ಲಿಯೂ ಅಪಘಾತಗಳು ಮರುಕಳಿಸುತ್ತಿವೆ. ಮುಂಜಾನೆ ದಟ್ಟ ಮಂಜು, ಸಂಜೆ ಸೂರ್ಯ ಮರೆಯಾಗುವ ಮುನ್ನವೇ ಮಂಜು ಆವರಿಸಿ ವಾಹನ ಸವಾರರು ಭಯಪಡುವಂತಾಗಿದೆ.ಇದನ್ನೂ ಓದಿ: ಬಳ್ಳಾರಿ – ಸಿರುಗುಪ್ಪ ಹೆದ್ದಾರಿಯಲ್ಲಿ ಭೀಕರ ಅಪಘಾತ – ಒಂದೇ ಕುಟುಂಬದ ಮೂವರು ಸಾವು

