– ಭಾರತಕ್ಕೆ ರಫ್ತಾಗುವ ನ್ಯೂಜಿಲೆಂಡ್‌ನ 95% ಸರಕುಗಳ ಮೇಲಿನ ಸುಂಕ ಕಡಿತ
ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ (Christopher Luxon) ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ಈ ಐತಿಹಾಸಿಕ ಒಪ್ಪಂದವನ್ನು ಜಂಟಿಯಾಗಿ ಘೋಷಿಸಿದ್ದಾರೆ.
2025ರ ಮಾರ್ಚ್‌ನಲ್ಲಿ ಪ್ರಾರಂಭವಾದ ಮಾತುಕತೆಗಳು ಕೇವಲ ಒಂಬತ್ತು ತಿಂಗಳಲ್ಲಿ ಪೂರ್ಣಗೊಂಡಿರುವುದು ಎರಡೂ ದೇಶಗಳ ನಡುವಿನ ಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಹಂಚಿಕೊಂಡ ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ ಎಂದು ಇಬ್ಬರು ನಾಯಕರು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ಆಟವಾಡ್ತಿದ್ದ ಮಗುವಿನ ಕೈಯಲ್ಲಿ ಸ್ನೈಪರ್‌ಗೆ ಬಳಸುವ ಚೀನಾದ ರೈಫಲ್ ಸ್ಕೋಪ್ ಪತ್ತೆ
ಈ ಒಪ್ಪಂದದಂತೆ ಭಾರತಕ್ಕೆ ರಫ್ತಾಗುವ ನ್ಯೂಜಿಲೆಂಡ್‌ನ ಶೇ.95ರಷ್ಟು ಸರಕುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ ಅಥವಾ ಪೂರ್ಣವಾಗಿ ತೆಗೆದುಹಾಕಲಾಗಿದೆ. ಹೀಗಾಗಿ ಮುಂದಿನ ಎರಡು ದಶಕಗಳಲ್ಲಿ ರಫ್ತು ವಾರ್ಷಿಕವಾಗಿ 1.1 ರಿಂದ 1.3 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಮುಂದಿನ 15 ವರ್ಷಗಳಲ್ಲಿ ನ್ಯೂಜಿಲೆಂಡ್‌ನಿಂದ ಭಾರತಕ್ಕೆ 20 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವ ಯೋಜನೆ ಹೊಂದಿದೆ ಎಂದು ತಿಳಿದುಬಂದಿದೆ.
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ (Christopher Luxon) ಅವರು ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ನಂತರ ನ್ಯೂಜಿಲೆಂಡ್-ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮೂಲಕ ಭಾರತಕ್ಕೆ ರಫ್ತಾಗುವ ನ್ಯೂಜಿಲೆಂಡ್‌ನ ಶೇ.95ರಷ್ಟು ಸರಕುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ ಅಥವಾ ಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಈ ಒಪ್ಪಂದವು ಎರಡೂ ದೇಶಗಳ ವ್ಯಾಪಾರ, ಹೂಡಿಕೆ, ನಾವೀನ್ಯತೆ ಮತ್ತು ಜನರ ನಡುವಿನ ಸಂಪರ್ಕವನ್ನು ಬಲಪಡಿಸಲಿದೆ. ಭಾರತೀಯ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ರೈತರು, ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಹೊಸ ಅವಕಾಶಗಳು ತೆರೆಯಲಿವೆ. ಇದರಿಂದ ಉದ್ಯೋಗ ಸೃಷ್ಟಿ, ವೇತನ ಹೆಚ್ಚಳ ಮತ್ತು ವ್ಯಾಪಾರ ಅವಕಾಶಗಳು ಹೆಚ್ಚಾಗಲಿವೆ ಎಂದು ನಿರೀಕ್ಷಿಸಲಾಗಿದೆ. 2025ರಲ್ಲಿ ಭಾರತದ ಮೂರನೇ ಮುಕ್ತ ವ್ಯಾಪಾರ ಒಪ್ಪಂದವಾಗಿರುವ ಇದು (ಯುಕೆ ಮತ್ತು ಒಮನ್ ನಂತರ), ಭಾರತದ ಜಾಗತಿಕ ವ್ಯಾಪಾರ ಕಾರ್ಯತಂತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ.ಇದನ್ನೂ ಓದಿ: ರಷ್ಯಾ ಸೇನೆ ಸೇರಲು ಒತ್ತಾಯ – ಉಕ್ರೇನ್‌ನಿಂದ SOS ವಿಡಿಯೋ ಹರಿಬಿಟ್ಟ ಗುಜರಾತ್ ವಿದ್ಯಾರ್ಥಿ

