ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವನ (Biklu Shiva) ಕೊಲೆ ಕೇಸ್‌ನಲ್ಲಿ ಬಂಧನ ಭೀತಿಯಿಂದ ಶಾಸಕ ಬೈರತಿ ಬಸವರಾಜ್ (Byrati Basavaraj) ತಲೆಮರೆಸಿಕೊಂಡಿದ್ದು, ಶಾಸಕರು ರಾಜ್ಯದಿಂದ ರಾಜ್ಯಕ್ಕೆ ಎಸ್ಕೇಪ್ ಆಗುತ್ತಿದ್ದಾರೆ. ಮತ್ತೊಂದೆಡೆ ಸಿಐಡಿ ಅಧಿಕಾರಿಗಳ ವಿಶೇಷ ತಂಡಗಳು ಬೈರತಿ ಬೆನ್ನು ಬಿದ್ದಿವೆ. ನಾಳೆ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಬೈರತಿ ಬಸವರಾಜ್ ಭವಿಷ್ಯ ನಿರ್ಧಾರವಾಗಲಿದೆ.
ರೌಡಿಶೀಟರ್ ಬಿಕ್ಲು ಶಿವನ ಬರ್ಬರ ಕೊಲೆಯ ಹಿಂದೆ ಶಾಸಕ ಬೈರತಿ ಬಸವರಾಜ್ ಕೈವಾಡದ ಶಂಕೆ ಹಿನ್ನೆಲೆ ಕೇಸಲ್ಲಿ ಐದನೇ ಆರೋಪಿಯಾಗಿದ್ದರು. ಕಳೆದ ಜುಲೈನಲ್ಲಿ ಶುರುವಾದ ಕೊಲೆ ಕೇಸ್‌ನ ತಲೆನೋವು ಈಗ ಮತ್ತಷ್ಟು ಹೆಚ್ಚಾಗಿದ್ದು, ಹೈಕೋರ್ಟ್ ಮಧ್ಯಂತರ ರಕ್ಷಣೆ ಸಾಧ್ಯವಿಲ್ಲ ಅಂತಾ ಆದೇಶ ನೀಡಿದ ಬಳಿಕ ಬೈರತಿ ಭೂಗತರಾಗಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೆ ಹಾಕಿಕೊಂಡಿದ್ದ ನಿರೀಕ್ಷಣಾ ಜಾಮೀನು ಅರ್ಜಿ ನಾಳೆಗೆ ವಿಚಾರಣೆಗೆ ಬರಲಿದೆ. ಇತ್ತ ಮಾಜಿ ಸಚಿವ ಕರ್ನಾಟಕ, ಗೋವಾ, ಮಹಾರಾಷ್ಟ್ರ ಅಂತಾ ರಾಜ್ಯದಿಂದ ರಾಜ್ಯಕ್ಕೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಲೆಯುತ್ತಿದ್ದಾರೆ. ಇದನ್ನೂ ಓದಿ: ಬೈರತಿ ಬಸವರಾಜ್ ಬಂಧನಕ್ಕಾಗಿ 3 ವಿಶೇಷ ತಂಡ; ಪುಣೆಯಲ್ಲಿ ತಲೆ ಮರೆಸಿಕೊಂಡಿರೋ ಮಾಹಿತಿ ಲಭ್ಯ
ಇತ್ತ ಸಿಐಡಿ ಅಧಿಕಾರಿಗಳ ಮೂರು ವಿಶೇಷ ತಂಡಗಳು ಅವರ ಬೆನ್ನಟ್ಟಿವೆ. ಶಾಸಕ ಬೈರತಿ ಬಸವರಾಜ್ ಪತ್ತೆಗೆ ಶೋಧ ಮುಂದುವರೆದಿದ್ದು, ಗೋವಾದಲ್ಲಿ ಅವರು ಕೊನೆಯದಾಗಿ ಮೊಬೈಲ್ ಲೊಕೇಷನ್ ತೋರಿಸಿದ್ದು, ಟೀಂ ಬೀಡುಬಿಟ್ಟಿದೆ. ಒಟ್ಟು ಮೂರು ವಿಶೇಷ ತಂಡಗಳಿಂದ ಶಾಸಕರ ಹುಡುಕಾಟ ನಡೆಸಲಾಗುತ್ತಿದ್ದು, ಗೋವಾ ಹಾಗೂ ಅಲ್ಲಿಂದ ಮಹಾರಾಷ್ಟ್ರಕ್ಕೆ ಜಂಪ್ ಆಗಿರಬಹುದು ಅಂತಾ ಮಹಾರಾಷ್ಟ್ರದಲ್ಲಿ ಕೂಡ ಮತ್ತೊಂದು ತಂಡ ಹುಡುಕಾಟ ನಡೆಸಿದೆ. ಇನ್ನೊಂದು ತಂಡ ಬೆಂಗಳೂರಿನಲ್ಲಿ ಅವರ ಆಪ್ತರ ಮೇಲೆ ಕಣ್ಣಿಟ್ಟಿದೆ. ಅವರ ಆಪ್ತರು, ಕುಟುಂಬಸ್ಥರನ್ನು ಬೈರತಿ ಬಸವರಾಜ್ ಸಂಪರ್ಕಿಸಬಹುದು ಎಂದು ಒಂದು ತಂಡ ಮಾನಿಟರ್ ಮಾಡುತ್ತಿದೆ.
ನಾಳಿನ ಕೋರ್ಟ್ ನಿರ್ಧಾರದ ಮೇಲೆ ಶಾಸಕನ ಭವಿಷ್ಯ ನಿಂತಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ ನಾಳೆಗೆ ಕೋರ್ಟ್ ವಿಚಾರಣೆ ಮುಂದೂಡಿದೆ. ನಾಳೆ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕರೆ ರಿಲೀಫ್ ಸಿಗಬಹುದು. ಇಲ್ಲವಾದರೆ, ಬೈರತಿ ಬಸವರಾಜ್ ಅರೆಸ್ಟ್ ಆಗೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಈಗಾಗಲೇ ಬೈರತಿ ಬಸವರಾಜ್‌ಗೆ ಸಿಐಡಿ ತಂಡಗಳು ತೀವ್ರ ಹುಡುಕಾಟ ನಡೆಸುತ್ತಿದ್ದು, ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸರ್ಚಿಂಗ್ ಮುಂದುವರೆಸಿವೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿ ಶಾಸಕ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಕಾರ – ಬೈರತಿ ಬಸವರಾಜ್‌ಗೆ ಬಂಧನ ಭೀತಿ

